
ನ್ಯೂಯಾರ್ಕ್(ಮಾ.19): ಕೊರೋನಾ ಸೋಂಕಿನಿಂದಾಗಿ ಈ ವರ್ಷದ ಟೆನಿಸ್ ಗ್ರ್ಯಾಂಡ್‌ಸ್ಲಾಂ ಟೂರ್ನಿಗಳನ್ನು ನಡೆಸುವುದು ಸಹ ಕಷ್ಟವಾಗಿದೆ. ಮಂಗಳವಾರವಷ್ಟೇ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯನ್ನು ಆಯೋಜಕರು ಸೆಪ್ಟೆಂಬರ್‌ಗೆ ಮುಂದೂಡಿದರು. ಇದರ ಬೆನ್ನಲ್ಲೇ ವರ್ಷದ ಕೊನೆಯ ಗ್ರ್ಯಾಂಡ್‌ಸ್ಲಾಂ ಟೂರ್ನಿ ಯುಎಸ್ ಓಪನ್ ಸಹ ಮುಂದೂಡಲ್ಪಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಗನ ಎತ್ತಿಕೊಂಡು ಕೋರ್ಟ್‌ಗೆ ಇಳಿದ ಸಾನಿಯಾ; ತಾಯಿಗೆ ಸಲಾಂ ಹೇಳಿದ ಫ್ಯಾನ್ಸ್!
ಸದ್ಯದ ವೇಳಾಪಟ್ಟಿಪ್ರಕಾರ ಆಗಸ್ಟ್ 24ರಿಂದ ಸೆಪ್ಟೆಂಬರ್ 13ರ ವರೆಗೂ ನ್ಯೂಯಾರ್ಕ್ನ ಫ್ಲಷಿಂಗ್ ಮೆಡೋವ್ಸ್ನಲ್ಲಿ ಟೂರ್ನಿ ನಡೆಯಬೇಕಿದೆ. ಆದರೆ ಯುಎಸ್ ಓಪನ್ ಆಯೋಜಕರು ಟೂರ್ನಿಯನ್ನು ಮುಂದೂಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿರುವುದಾಗಿ ಬುಧವಾರ ಹೇಳಿದ್ದಾರೆ.
ಇದನ್ನೂ ಓದಿ: ಟೆನಿಸ್ ಸುಂದರಿ, ಚಾಂಪಿಯನ್ ಮರಿಯಾ ಶರಪೋವಾ ದಿಢೀರ್ ವಿದಾಯ!
ಅಮೆರಿಕನ್ ಟೆನಿಸ್ ಫೆಡರೇಷನ್ ಉಳಿದೆರೆಡು ಗ್ರ್ಯಾಂಡ್‌ಸ್ಲಾಂ ಟೂರ್ನಿಗಳ ಆಯೋಜಕರನ್ನು ಸಂಪರ್ಕಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ. ಮಂಗಳವಾರ ಫ್ರೆಂಚ್ ಓಪನ್ ಆಯೋಜಕರು ಟೂರ್ನಿಯನ್ನು ಮುಂದೂಡಿರುವುದಾಗಿ ಘೋಷಿಸಿದ್ದು ಟೆನಿಸ್ ಲೋಕಕ್ಕೆ ಅಚ್ಚರಿ ಉಂಟಾಗಿದೆ. ಆಯೋಜಕರು ಯಾರನ್ನೂ ಸಂಪರ್ಕಿಸದೆ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 4ರ ವರೆಗೂ ಟೂರ್ನಿ ನಡೆಯುವುದಾಗಿ ಘೋಷಿಸಿದ್ದಾರೆ. ಆದರೆ ಯುಎಸ್ ಓಪನ್ ಮುಕ್ತಾಯಗೊಂಡ ಒಂದು ವಾರಕ್ಕೆ ಟೂರ್ನಿ ಘೋಷಿಸಿದ್ದು ವಿಶ್ವ ಟೆನಿಸ್ ಸಂಸ್ಥೆ (ಐಟಿಎಫ್) ಹಾಗೂ ಮಹಿಳೆಯರ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎಫ್)ಗೆ ಅಚ್ಚರಿಗೆ ಮೂಡಿಸಿದೆ. ಇದೇ ಸಮಯದಲ್ಲಿ ಬೋಸ್ಟನ್‌ನಲ್ಲಿ ಲೇವರ್ ಕಪ್ ನಡೆಯಲಿದ್ದು, ಯುರೋಪ್‌ನ ಶ್ರೇಷ್ಠ ಆಟಗಾರರು ವಿಶ್ವ ತಂಡದ ವಿರುದ್ಧ ಸ್ಪರ್ಧಿಸಲಿದ್ದಾರೆ. ಲೇವರ್ ಕಪ್‌ನಲ್ಲಿ ಪಾಲ್ಗೊಳ್ಳುವುದಾಗಿ ಸ್ವಿಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ ರೋಜರ್ ಫೆಡರರ್ ಖಚಿತ ಪಡಿಸಿದ್ದಾರೆ. ಹೀಗಾಗಿ, ವಿಶ್ವ ಟೆನಿಸ್ ಸಂಸ್ಥೆಯಿಂದ ಒತ್ತಡ ಹೆಚ್ಚಾದರೆ, ಫ್ರೆಂಚ್ ಓಪನ್ ಮತ್ತೊಮ್ಮೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಫ್ರೆಂಚ್ ಓಪನ್ ದಿನಾಂಕಗಳನ್ನು ನೋಡಿಕೊಂಡು ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯ ವೇಳಾಪಟ್ಟಿಯನ್ನು ಸಿದ್ಧಪಡಿಸುವುದಾಗಿ ಅಮೆರಿಕನ್ ಟೆನಿಸ್ ಫೆಡರೇಷನ್ ಮುಖ್ಯಸ್ಥರು ತಿಳಿಸಿದ್ದಾರೆ.
ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ವಿಂಬಲ್ಡನ್?
ಜೂ.29ರಂದಿ ಜು.12ರ ವರೆಗೂ ಲಂಡನ್‌ನಲ್ಲಿ ನಡೆಯಬೇಕಿರುವ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯನ್ನು ನಿಗದಿತ ವೇಳಾಪಟ್ಟಿಯಂತೆಯೇ ನಡೆಸಲು ಆಲ್ ಇಂಗ್ಲೆಂಡ್ ಕ್ಲಬ್ ಚಿಂತನೆ ನಡೆಸಿದೆ. ಫ್ರೆಂಚ್ ಓಪನ್ ಮುಂದೂಡಲ್ಪಟ್ಟಿದ್ದು, ಯುಎಸ್ ಓಪನ್ ಸಹ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಸೋಂಕು ನಿಯಂತ್ರಣಕ್ಕೆ ಬಂದರೆ ಟೂರ್ನಿ ನಡೆಸಬಹುದು ಎಂದು ಆಯೋಜಕರು ಚರ್ಚಿಸಿದ್ದಾರೆ. ಆದರೆ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾಗಲಿದೆ ಎಂದಾದರೆ ಟೂರ್ನಿಯನ್ನು ಮುಂದೂಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಲ್ ಇಂಗ್ಲೆಂಡ್ ಕ್ಲಬ್‌ನ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ರಿಚರ್ಡ್ ಲೀವಿಸ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.