ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ಮಿಶ್ರಫಲ ಎದುರಾಗಿದ್ದು, ಸೈನಾ, ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಇನ್ನು ಸಿಂಧು ಸುಲಭವಾಗಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಬರ್ಮಿಂಗ್‌ಹ್ಯಾಮ್(ಮಾ.12): ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳು ಮೊದಲ ದಿನವೇ ಮಿಶ್ರಫಲ ಅನುಭವಿಸಿದ್ದಾರೆ.
ತಾರಾ ಶಟ್ಲರ್ ಪಿ.ವಿ. ಸಿಂಧು ಗೆಲುವು ಪಡೆದು 2ನೇ ಸುತ್ತಿಗೇರಿದರೆ, ವಿಶ್ವ ಮಾಜಿ ನಂ.1 ಶಟ್ಲರ್ ಕಿದಂಬಿ ಶ್ರೀಕಾಂತ್ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್ ಮೊದಲ ಸುತ್ತಲ್ಲಿ ವಿಶ್ವ ನಂ.6 ಸಿಂಧು, ಅಮೆರಿಕದ ಬೀವಿನ್ ಜಾಂಗ್ ಎದುರು 21-14, 21-17 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.
ಕೊರೋನಾ ನಡುವೆಯೇ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್
ಇನ್ನು ಭಾರತಕ್ಕೆ ಅತಿದೊಡ್ಡ ನಿರಾಸೆ ಎದುರಾಗಿದ್ದು, ಸೈನಾ ನೆಹ್ವಾಲ್, ಸಾಯಿ ಪ್ರಣೀತ್ ಹಾಗೆಯೇ ಕಿದಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಹೊಸಬೀಳುವ ಮೂಲಕ ಆಘಾತ ಅನುಭವಿಸಿದರು.
ಪುರುಷರ ಸಿಂಗಲ್ಸ್ ಮೊದಲ ಸುತ್ತಲ್ಲಿ ಶ್ರೀಕಾಂತ್, ಚೀನಾದ ಚೆನ್ ಲಾಂಗ್ ವಿರುದ್ಧ 21-15, 21-16 ಗೇಮ್‌ಗಳಲ್ಲಿ ಸೋಲುಂಡರು. ಇನ್ನು ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಜಪಾನಿನ ಅಕಾನೆ ಯಮಗುಚಿ ವಿರುದ್ಧ 11-21, 8-21 ನೇರ ಗೇಮ್‌ಗಳಲ್ಲಿ ಸೋಲನ್ನನುಭವಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಭಾರತದ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ ಜೋಡಿ ಸೋಲುಂಡು ಹೊರಬಿತ್ತು.