ಕೊರೋನಾ ಆತಂಕ: 2020ರಲ್ಲೇ ಟೋಕಿಯೋ ಒಲಿಂಪಿಕ್ಸ್‌ ನಡೆಸಲು ಸಾಧ್ಯವೇ?

By Suvarna News  |  First Published Mar 19, 2020, 10:29 AM IST

2020ರ ಟೋಕಿಯೋ ಒಲಿಂಪಿಕ್ಸ್ ಕೂಟಕ್ಕೆ ಕೊರೋನಾ ವೈರಸ್ ಭೀತಿ ಆವರಿಸಿದೆ. ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳು ಕೊರೋನಾ ವೈರಸ್‌ನಿಂದ ಮುಂದೂಡಲ್ಪಟ್ಟಿದೆ. ವೈರಸ್ ಹತೋಟಿಗೆ ಬಂದಿಲ್ಲ, ಇತ್ತ ಕ್ರೀಡಾಪಟುಗಳ ಕೊರತೆ ಸೇರಿದಂತೆ ಹಲವು ಸಮಸ್ಯಗಳಿಂದ 2020ರಲ್ಲೇ ಒಲಿಂಪಿಕ್ಸ್ ಕೂಟ ನಡೆಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಇಲ್ಲಿದೆ ಉತ್ತರ.
 


ನವದೆಹಲಿ(ಮಾ.19): 2020ರ ಟೋಕಿಯೋ ಒಲಿಂಪಿಕ್ಸ್‌ ಆರಂಭಗೊಳ್ಳಲು ಇನ್ನು ಕೇವಲ 4 ತಿಂಗಳು ಮಾತ್ರ ಬಾಕಿ ಇದೆ. ಕೊರೋನಾ ಸೋಂಕಿನ ಭೀತಿ ಎದುರಾಗದಿದ್ದರೆ ಇಷ್ಟೊತ್ತಿಗೆ ಒಲಿಂಪಿಕ್ಸ್‌ ಜ್ವರ ವಿಶ್ವವನ್ನು ಆವರಿಸುತ್ತಿತ್ತು. ಜುಲೈ 24ಕ್ಕೆ ವಿಶ್ವದ ಮಹಾ ಕ್ರೀಡಾಕೂಟಕ್ಕೆ ಚಾಲನೆ ಸಿಗಬೇಕಿದೆ. ಆದರೆ ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ನಿಗದಿತ ವೇಳಾಪಟ್ಟಿಯಂತೆ ಕ್ರೀಡಾಕೂಟವನ್ನು ನಡೆಸಲು ಸಾಧ್ಯವೇ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: ಸ್ಪೇನ್‌ನ 21ರ ಫುಟ್ಬಾಲ್‌ ಕೋಚ್‌ ಬಲಿ ಪಡೆದ ಕೊರೋನಾ ವೈರಸ್..!

Tap to resize

Latest Videos

ಕ್ರೀಡಾಪಟುಗಳ ಕೊರತೆ?: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಬರೋಬ್ಬರಿ 200ಕ್ಕೂ ಹೆಚ್ಚು ರಾಷ್ಟ್ರಗಳ 11000 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಘೋಷಿಸಿತ್ತು. ಆದರೆ ಈ ವರೆಗೂ ಶೇ.57ರಷ್ಟುಕ್ರೀಡಾಪಟುಗಳು ಮಾತ್ರ ಅರ್ಹತೆ ಸಂಪಾದಿಸಿದ್ದಾರೆ. ಇನ್ನೂ ಶೇ.43ರಷ್ಟುಕ್ರೀಡಾಪಟುಗಳಿಗೆ ಅರ್ಹತೆ ಸಿಕ್ಕಿಲ್ಲ. ಬಾಕ್ಸಿಂಗ್‌, ಕುಸ್ತಿ, ಅಥ್ಲೆಟಿಕ್ಸ್‌, ರೋಯಿಂಗ್‌, ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಶೂಟಿಂಗ್‌, ಈಜು ಹೀಗೆ ಪ್ರತಿಯೊಂದು ಕ್ರೀಡೆಯ ಅರ್ಹತಾ ಟೂರ್ನಿಗಳು ಕೊರೋನಾ ಭೀತಿಯಿಂದ ಮುಂದೂಡಲ್ಪಟ್ಟಿವೆ. ಉಳಿದಿರುವ 4 ತಿಂಗಳಲ್ಲಿ ಯಾವೆಲ್ಲಾ ಅರ್ಹತಾ ಟೂರ್ನಿಗಳು ನಡೆಸಲು ಸಾಧ್ಯ ಎನ್ನುವ ಪ್ರಶ್ನೆ ಆಯೋಜಕರನ್ನು ಕಾಡುತ್ತಿದೆ. ಅಲ್ಲದೇ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಮೇಲಷ್ಟೇ ಅರ್ಹತಾ ಟೂರ್ನಿಗಳು ಆಯೋಜಿಸಲು ಸಾಧ್ಯ. ಹೀಗಾಗಿ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೂ ತಟ್ಟಿದ ಕೊರೋನಾ ಶಾಕ್..!

ಪರ್ಯಾಯ ವ್ಯವಸ್ಥೆ ಏನು?: ಐಒಸಿ ಸದ್ಯದ ರಾರ‍ಯಂಕಿಂಗ್‌ ಆಧಾರವಾಗಿಟ್ಟುಕೊಂಡು ಕ್ರೀಡಾಪಟುಗಳಿಗೆ ಒಲಿಂಪಿಕ್ಸ್‌ ಅರ್ಹತೆ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಹೀಗಾದಲ್ಲಿ ತಾರಾ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್‌ ಟಿಕೆಟ್‌ ಕೈತಪ್ಪಲಿದೆ. ಭಾರತೀಯರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಬ್ಯಾಡ್ಮಿಂಟನ್‌ ತಾರೆಗಳಾದ ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌, ಅಥ್ಲೀಟ್‌ ದ್ಯುತಿ ಚಂದ್‌, ಹಿಮಾ ದಾಸ್‌ ಸೇರಿದಂತೆ ಇನ್ನೂ ಅನೇಕರು ಅರ್ಹತೆ ಪಡೆದಿಲ್ಲ. ಐಒಸಿ ಅರ್ಹತಾ ಟೂರ್ನಿಗಳನ್ನು ನಡೆಸದೆ ಒಲಿಂಪಿಕ್ಸ್‌ ನಡೆಸಲು ಮುಂದಾದರೆ ದೊಡ್ಡ ವಿವಾದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಪ್ರೇಕ್ಷಕರ ಬರ?: ಒಲಿಂಪಿಕ್ಸ್‌ ಕ್ರೀಡಾಕೂಟ ಎಲ್ಲೇ ನಡೆದರೂ ಅಮೆರಿಕ ಹಾಗೂ ಯುರೋಪಿಯನ್‌ ರಾಷ್ಟ್ರಗಳ ಕ್ರೀಡಾಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ. ಕೊರೋನಾ ಭೀತಿ ನಡುವೆಯೇ ಕ್ರೀಡಾಕೂಟ ನಡೆಸಿದರೆ ಪ್ರೇಕ್ಷಕರ ಬರವನ್ನು ಎದುರಿಸಬೇಕಾಗುತ್ತದೆ. ಬಹುತೇಕ ರಾಷ್ಟ್ರಗಳು ತಮ್ಮ ಪ್ರಜೆಗಳ ವಿದೇಶ ಪ್ರವಾಸದ ಮೇಲೆ ನಿರ್ಬಂಧ ಹೇರುತ್ತಿವೆ. ವಿಮಾನ ಸೇವೆಗಳನ್ನು ರದ್ದುಗೊಳಿಸುತ್ತಿವೆ. ಅಭಿಮಾನಿಗಳು ವೀಸಾ ಅರ್ಜಿ ಸಲ್ಲಿಸಿ, ವಿಮಾನ ಟಿಕೆಟ್‌ ಕಾಯ್ದಿರಿಸುವುದು ಸಹ ಕಷ್ಟವಾಗಲಿದೆ. ಅಲ್ಲದೇ ಕೊರೋನಾ ಭೀತಿಯಿಂದಾಗಿ ಜಪಾನ್‌ಗೆ ಪ್ರಯಾಣಿಸುವವರ ಸಂಖ್ಯೆ ಶೇ.50ರಿಂದ 60ರಷ್ಟುಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಕ್ರೀಡಾಪಟುಗಳು ಖಾಲಿ ಕ್ರೀಡಾಂಗಣಗಳಲ್ಲಿ ಪ್ರದರ್ಶನ ತೋರಬೇಕಿದೆ.

ಜಪಾನ್‌ ಒಲಿಂಪಿಕ್ಸ್‌ ಸಮಿತಿ ಉಪಾಧ್ಯಕ್ಷರಿಗೇ ಕೊರೋನಾ ಸೋಂಕು ತಗುಲಿರುವುದು ಕ್ರೀಡಾಪಟುಗಳು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ. ಕ್ರೀಡಾಕೂಟ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿರಲಿದೆ ಎನ್ನುವ ಅನುಮಾನಗಳು ಮೂಡಲಾರಂಭಿಸಿವೆ.

ಜಾಹಿರಾತಿಗೂ ಪೆಟ್ಟು?: ಪ್ರೇಕ್ಷಕರ ಕೊರತೆ ಅಷ್ಟೇ ಅಲ್ಲ, ಜಾಗತಿಕ ಮಾರುಕಟ್ಟೆಕುಸಿದಿರುವ ಕಾರಣ, ಒಲಿಂಪಿಕ್ಸ್‌ ಪ್ರಸಾರ ಮಾಡುವ ವಾಹಿನಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಜಾಹೀರಾತು ಸಹ ಸಿಗುವುದಿಲ್ಲ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಒಪ್ಪಂದವಾಗಿದ್ದರೂ, ಕ್ರೀಡಾಕೂಟಕ್ಕೆ ಪ್ರಾಯೋಜಕತ್ವ ನೀಡಲು ಮುಂದಾಗಿರುವ ಸಂಸ್ಥೆಗಳು ನಿಗದಿಯಾದ ಮೊತ್ತ ನೀಡಲು ಹಿಂದೇಟು ಹಾಕಬಹುದು. ಇದರಿಂದ ಐಒಸಿಗೆ ದೊಡ್ಡ ನಷ್ಟವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

2021ಕ್ಕೆ ಮುಂದೂಡಿಕೆ?: ಯುರೋ ಕಪ್‌, ಕೋಪಾ ಅಮೆರಿಕಾದಂತಹ ಪ್ರತಿಷ್ಠಿತ ಫುಟ್ಬಾಲ್‌ ಟೂರ್ನಿಗಳನ್ನು ಆಯೋಜಕರು ಈ ವರ್ಷದ ಬದಲು ಮುಂದಿನ ವರ್ಷ ನಡೆಸಲು ನಿರ್ಧರಿಸಿದ್ದಾರೆ. ಜಪಾನ್‌ ಒಲಿಂಪಿಕ್ಸ್‌ ಆಯೋಜನೆಗೆ ಸಾವಿರಾರು ಕೋಟಿ ವೆಚ್ಚ ಮಾಡಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ, ಜಾಹೀರಾತು, ಪ್ರಾಯೋಜಕ್ವ ಮೊತ್ತ ಕಡಿತಗೊಂಡರೆ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಸಮಸ್ಯೆಯಿಲ್ಲದೆ ಕ್ರೀಡಾಕೂಟವನ್ನು ನಡೆಸಬೇಕಿದ್ದರೆ ಐಒಸಿ ಹಾಗೂ ಜಪಾನ್‌ ಸರ್ಕಾರ ಒಲಿಂಪಿಕ್ಸ್‌ ಅನ್ನು 2021ಕ್ಕೆ ಮುಂದೂಡುವುದೇ ಸೂಕ್ತ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

11000
2020ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳ ಸಂಖ್ಯೆ

4000
ಒಲಿಂಪಿಕ್ಸ್‌ಗೆ ಇನ್ನೂ 4000 ಕ್ರೀಡಾಳುಗಳು ಅರ್ಹತೆ ಪಡೆಯುವುದು ಬಾಕಿ

click me!