ಇಂದಿನಿಂದ ಯುಎಸ್ ಓಪನ್ ಆರಂಭ: ಖಾಲಿ ಮೈದಾನದಲ್ಲಿ ಪಂದ್ಯ..!

By Suvarna NewsFirst Published Aug 31, 2020, 8:29 AM IST
Highlights

140 ವರ್ಷಗಳ ಇತಿಹಾಸವಿರುವ ಯುಎಸ್ ಓಪನ್ ಟೆನಿಸ್ ಟೂರ್ನಿ ಇಂದಿನಿಂದ ಆರಂಭಗೊಳ್ಳಲಿದೆ. ಕೊರೋನಾ ಭೀತಿಯ ನಡುವೆಯೇ ಟೂರ್ನಿ ಆರಂಭವಾಗಿದ್ದು, ಹಲವು ಸ್ಟಾರ್ ಆಟಗಾರರು ಈ ಪ್ರತಿಷ್ಠಿತ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನ್ಯೂಯಾರ್ಕ್(ಆ.31): ಕೊರೋನಾ ಹೊಡೆತಕ್ಕೆ ಇಡೀ ವಿಶ್ವವೇ ನಲುಗಿರುವ ನಡುವೆಯೇ ಯುಎಸ್‌ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಟೆನಿಸ್‌ ಟೂರ್ನಿ ಸೋಮವಾರದಿಂದ ಆರಂಭವಾಗಲಿದೆ. 140ನೇ ಯುಎಸ್‌ ಓಪನ್‌ ಇದಾಗಿದ್ದು, ಸೆ.13ರವರೆಗೆ ನಡೆಯಲಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿಯೇ ಟೂರ್ನಿಯನ್ನು ಆರ್ಥರ್‌ ಆ್ಯಶೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಪ್ರೇಕ್ಷಕರಿಲ್ಲದೇ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೋಕೋವಿಚ್‌ ಹಾಗೂ ಅಮೆರಿಕದ ತಾರಾ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರು ಈ ಬಾರಿ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಮಾಜಿ ವಿಶ್ವ ನಂ.1 ಸೆರೆನಾ ವಿಲಿಯಮ್ಸ್‌ ಅವರು ದಾಖಲೆಯ 24ನೇ ಗ್ರ್ಯಾಂಡ್‌ಸ್ಲಾಮ್‌ ಮೇಲೆ ಕಣ್ಣಿಟ್ಟಿದ್ದಾರೆ. ಉಳಿದಂತೆ ಪುರುಷರ ಸಿಂಗಲ್ಸ್‌ನಲ್ಲಿ 2012ರ ಯುಎಸ್‌ ಚಾಂಪಿಯನ್‌ ಬ್ರಿಟನ್‌ನ ಆ್ಯಂಡಿ ಮರ್ರೆ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಡೊಮಿನಿಕ್‌ ಥೀಮ್‌ ಕಣಕ್ಕಿಳಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ, ಗರ್ಬೈನ್‌ ಮುಗುರುಜಾ, ವೀನಸ್‌ ವಿಲಿಯಮ್ಸ್‌ ಆಡಲಿದ್ದಾರೆ.

ಕೊರೋನಾ ಭೀತಿಗೆ ತಾರೆಗಳು ಗೈರು:

ವಿಶ್ವದ ಟೆನಿಸ್‌ ತಾರೆಗಳು ಕೊರೋನಾ ಭೀತಿಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹಾಲಿ ಚಾಂಪಿಯನ್‌ ಸ್ಪೇನ್‌ನ ರಾಫೆಲ್‌ ನಡಾಲ್‌, ಮಹಿಳಾ ಸಿಂಗಲ್ಸ್‌ ವಿಶ್ವ ನಂ.1 ಆಸ್ಪ್ರೇಲಿಯಾದ ಆ್ಯಶ್ಲೆ ಬಾರ್ಟಿ, ಸಿಮೋನಾ ಹಾಲೆಪ್‌ ಸೇರಿದಂತೆ ಇತರರು ಗೈರಾಗಲಿದ್ದಾರೆ. ದಾಖಲೆ ಗ್ರ್ಯಾಂಡ್‌ಸ್ಲಾಮ್‌ ವಿಜೇತ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌, ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಟೂರ್ನಿಯಲ್ಲಿ ಆಡುತ್ತಿಲ್ಲ.

ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್‌ಗೂ ಅಂಟಿದ ಕೊರೋನಾ ಸೋಂಕು..!

ಸುಮಿತ್‌, ರೋಹನ್‌ ಕಣದಲ್ಲಿ

ಈ ಬಾರಿಯ ಯುಎಸ್‌ ಓಪನ್‌ನಲ್ಲಿ ಭಾರತದಿಂದ ಮೂವರು ಆಟಗಾರರು ಕಣದಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ನಂ.1 ಆಟಗಾರ ಸುಮಿತ್‌ ನಗಾಲ್‌, ಡಬಲ್ಸ್‌ ಆಟಗಾರರಾದ ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ ತಮ್ಮ ಪ್ರತ್ಯೇಕ ಜೋಡಿಯ ಜೊತೆ ಆಡಲಿದ್ದಾರೆ.
 

click me!