ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಹತ್ವದ ಘೋಷಣೆ ಮಾಡಿದ್ದಾರೆ. ಕ್ರೀಡಾ ಸಾಧಕರಿಗೆ ನೀಡುವ ಖೇಲ್ ರತ್ನ, ದ್ರೋಣಾಚಾರ್ಯ ಸೇರಿದಂತೆ ಎಲ್ಲಾ ಪ್ರಶಸ್ತಿಗಳ ನಗದು ಬಹುಮಾನ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ನವದೆಹಲಿ(ಆ.29): ಭಾರತದಲ್ಲಿನ ಕ್ರೀಡಾ ಸಾಧಕರಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಎಲ್ಲಾ ಕ್ಷೇತ್ರದಲ್ಲಿ ಹಲವು ಬದಲಾವಣೆ ಕಂಡರೂ ಕ್ರೀಡಾ ಕ್ಷೇತ್ರದ ಪ್ರಶಸ್ತಿ ಬಹುಮಾನ ಮೊತ್ತದಲ್ಲಿ 2008ರಿಂದ ಯಾವುದೇ ಬದಲಾವಣೆಯಾಗಿಲ್ಲ. ಇದೀಗ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಹತ್ವದ ಘೋಷಣೆ ಮಾಡಿದ್ದಾರೆ. ಎಲ್ಲಾ ಕ್ರೀಡಾ ಪ್ರಶಸ್ತಿಗಳ ನಗದು ಬಹುಮಾನ ಮೊತ್ತವನ್ನು ಹೆಚ್ಚಿಸಿದ್ದಾರೆ.
ದ್ರೋಣಾಚಾರ‍್ಯ ಪ್ರಶಸ್ತಿ ಸ್ವೀಕರಿಸುವ ಮುನ್ನಾ ಕೊನೆಯುಸಿರೆಳೆದ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ್ ರೈ.
ನೂತನ ಆದೇಶ ಈ ವರ್ಷದಿಂದಲೇ ಜಾರಿಗೆ ಬರುತ್ತಿದೆ. ಹೀಗಾಗಿ ಪ್ರಸಕ್ತ ವರ್ಷ ಪ್ರಶಸ್ತಿ ಪಡೆಯುವ ಕ್ರೀಡಾ ಸಾಧಕರ ಪ್ರಶಸ್ತಿ ಮೊತ್ತ ನೂತನ ನಗದು ಬಹುಮಾನ ಸಿಗಲಿದೆ. ಕ್ರೀಡಾ ಕ್ಷೇತ್ರದ ಅತ್ಯುನ್ನತ ಖೇಲ್ ರತ್ನ ಪ್ರಶಸ್ತಿ ಮೊತ್ತವನ್ನು 7.5 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಹೆಚ್ಚಳವಾದ ಪ್ರಶಸ್ತಿ ನಗದು ಮೊತ್ತ
ಖೇಲ್ ರತ್ನ ಪ್ರಶಸ್ತಿ ಮೊತ್ತ 7.5 ಲಕ್ಷ ರೂಪಾಯಿಂದ 25 ಲಕ್ಷ ರೂಪಾಯಿಗೆ ಏರಿಕೆ
ಅರ್ಜುನ ಪ್ರಶಸ್ತಿ ಮೊತ್ತ 5 ಲಕ್ಷ ರೂಪಾಯಿಂದ 15 ಲಕ್ಷ ರೂಪಾಯಿಗೆ ಏರಿಕೆ
ದ್ರೋಣಾಚಾರ್ಯ(ಜೀವಮಾನ ಶ್ರೇಷ್ಠ) ಪ್ರಶಸ್ತಿ 5 ಲಕ್ಷ ರೂಪಾಯಿಂದ 15 ಲಕ್ಷ ರೂಪಾಯಿಗೆ ಏರಿಕೆ
ದ್ರೋಣಾಚಾರ್ಯ ಪ್ರಶಸ್ತಿ 5 ಲಕ್ಷ ರೂಪಾಯಿಂದ 10 ಲಕ್ಷ ರೂಪಾಯಿಗೆ ಏರಿಕೆ
ಧ್ಯಾನ್ ಚಂದ್ ಪ್ರಶಸ್ತಿ 5 ಲಕ್ಷ ರೂಪಾಯಿಂದ 19 ಲಕ್ಷ ರೂಪಾಯಿಗೆ ಏರಿಕೆ
ಸದ್ಯ ಹೆಚ್ಚಿಸಲಾಗಿರುವ ಪ್ರಶಸ್ತಿ ಮೊತ್ತ ಈ ಬಾರಿ ನೀಡಲಾಗುವ ಕ್ರೀಡಾ ಪ್ರಶಸ್ತಿ ಸಾಧಕರಿಗೆ ಸಿಗಲಿದೆ. ಪ್ರಸಕ್ತ ಸಾಲಿನಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ, ರಸ್ಲರ್ ವಿನೇಶ್ ಪೋಗತ್, ಮಹಿಳಾ ಹಾಕಿ ನಾಯಕಿ ರಾಣಿ ರಾಂಪಾಲ್, ಪ್ಯಾರಾ ಒಲಿಂಪಿಕ್ ಚಿನ್ನದ ಪದಕ ವಿಜೇತ ಹೈ ಜಂಪರ್ ಮರಿಯಪ್ಪನ್ ತಂಗವೇಲು ಈ ಬಾರಿಯ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ