ಕಂಬಳದಲ್ಲಿ ತನ್ನದೇ ದಾಖಲೆ ಮುರಿದ ತುಳುನಾಡಿನ ಶ್ರೀನಿವಾಸ!

By Kannadaprabha News  |  First Published Feb 17, 2020, 7:21 AM IST

ಕಂಬಳದಲ್ಲಿ ತನ್ನದೇ ದಾಖಲೆ ಮುರಿದ ಶ್ರೀನಿವಾಸ| 15 ದಿನಗಳ ಹಿಂದಷ್ಟೇ 142.50 ಮೀ. ಅನ್ನು 13.62 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದ ಶ್ರೀನಿವಾಸ್‌| ಈಗ 146 ಮೀ. ದೂರವನ್ನು ಕೇವಲ 13.68 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೊಸ ಇತಿಹಾಸ| ವೇಣೂರಲ್ಲಿ 2 ದಿನಗಳಿಂದ ನಡೆಯುತ್ತಿದ್ದ ಕಂಬಳದ 4 ವಿಭಾಗಗಳಲ್ಲಿ 3ರಲ್ಲಿ ಪ್ರಥಮ ಸ್ಥಾನ| ಕಂಬಳಗದ್ದೆಯ ಉಸೇನ್‌ ಬೋಲ್ಟ್‌ ಎಂದೇ ಖ್ಯಾತ ಶ್ರೀನಿವಾಸ ಗೌಡರಿಂದ ಹೊಸ ದಾಖಲೆ


ಉಡುಪಿ[ಫೆ.17]: ಕರಾವಳಿ ಕರ್ನಾಟಕದ ಜನಪದ ಕ್ರೀಡೆ ಕಂಬಳದ ‘ಉಸೇನ್‌ ಬೋಲ್ಟ್‌’ ಎಂದೇ ಜನಪ್ರಿಯರಾಗಿರುವ ಶ್ರೀನಿವಾಸ ಗೌಡ ಅವರೀಗ ಹೊಸ ದಾಖಲೆ ನಿರ್ಮಿಸಿದ್ದಾರೆ. ಕೇವಲ 15 ದಿನಗಳ ಹಿಂದಿನ ತಮ್ಮದೇ ದಾಖಲೆ ಪುಡಿಗಟ್ಟಿಹೊಸ ದಾಖಲೆ ನಿರ್ಮಿಸಿ, ಕಂಬಳ ಕ್ರೀಡೆಯಲ್ಲಿ ತಾವೇ ಚಾಂಪಿಯನ್‌ ಎಂಬುದನ್ನು ತೋರಿಸಿದ್ದಾರೆ.

ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡರು 146 ಮೀಟರ್‌ ಕರೆ (ಕಂಬಳದ ಟ್ರ್ಯಾಕ್‌) ಯಲ್ಲಿ ಕೇವಲ 13.68 ಸೆಕೆಂಡುಗಳಲ್ಲಿ ಕೋಣಗಳನ್ನು ಓಡಿಸಿ ಮಂಜೊಟ್ಟಿ(ಟ್ರ್ಯಾಕ್‌ನ ತುದಿ)ಯನ್ನೇರಿದ್ದಾರೆ. ಅವರು ಫೆ.1ರಂದು ಐಕಳದಲ್ಲಿ ನಡೆದಿದ್ದ ಕಂಬಳದಲ್ಲಿ 142.50 ಮೀಟರ್‌ ಕರೆಯನ್ನು ಕೇವಲ 13.62 ಸೆಕೆಂಡುಗಳಲ್ಲಿ ಮುಗಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಈಗ ಅವರು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಮಾತ್ರವಲ್ಲದೆ ಕಂಬಳದ 4 ವಿಭಾಗಗಳಲ್ಲಿ 3ರಲ್ಲಿ ಪ್ರಥಮ ಸ್ಥಾನ ಗಳಿಸಿ, ಕಂಬಳದ ಚಾಂಪಿಯನ್‌ ಎನಿಸಿಕೊಂಡಿದ್ದಾರೆ. ಅವರು ನೇಗಿಲು ಹಿರಿಯ ವಿಭಾಗದಲ್ಲಿ ಈ ಹೊಸ ದಾಖಲೆ ಬರೆದಿದ್ದು, ಉಳಿದಂತೆ ಹಗ್ಗ ಕಿರಿಯ ವಿಭಾಗದಲ್ಲಿ ಹಾಗೂ ನೇಗಿಲು ಕಿರಿಯ ವಿಭಾಗಗಳಲ್ಲೂ ಪ್ರಥಮ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

Tap to resize

Latest Videos

ಇದರೊಂದಿಗೆ ಶ್ರೀನಿವಾಸ ಗೌಡ ಅವರು ಈ ಬಾರಿಯ ಕಂಬಳ ಸೀಸನ್‌ನಲ್ಲಿ ಈವರೆಗೆ ನಡೆದ 12 ಕಂಬಳಗಳಲ್ಲಿ 32 ಪ್ರಥಮ ಮತ್ತು 3 ದ್ವಿತೀಯ ಬಹುಮಾನಗಳೊಂದಿಗೆ ಒಟ್ಟು 35 ಬಹುಮಾನಗಳನ್ನು ಗೆದ್ದುಕೊಂಡು, ಈ ಮೂಲಕವೂ ದಾಖಲೆ ನಿರ್ಮಿಸಿದ್ದಾರೆ.

"

ಶ್ರೀನಿವಾಸ ಗೌಡರದ್ದೇ ಚರ್ಚೆ: ವೇಣೂರಲ್ಲಿ ಶನಿವಾರ ಮಧ್ಯಾಹ್ನ ಆರಂಭವಾದ ಕಂಬಳ ಮುಗಿಯುವಾಗ ಭಾನುವಾರ ರಾತ್ರಿಯಾಗಿತ್ತು. ‘ಕನ್ನಡಪ್ರಭ’ದಲ್ಲಿ ಅವರ ಬಗ್ಗೆ ವರದಿ ಪ್ರಕಟವಾದ ಮೇಲೆ ಅವರು ಸೆಲೆಬ್ರಿಟಿಯಾಗಿಬಿಟ್ಟಿದ್ದರು. ನೆರೆದಿದ್ದ ಕಂಬಳಾಭಿಮಾನಿಗಳ ನಡುವೆ ಅವರದ್ದೇ ಚರ್ಚೆ ನಡೆಯುತ್ತಿತ್ತು. ಈ ಕಂಬಳದಲ್ಲಿ ಕರಾವಳಿಯ 4 ಜಿಲ್ಲೆಗಳಿಂದ 159 ಜೋಡಿ ಕೋಣಗಳು ಭಾಗಿಯಾಗಿದ್ದವು. ಸ್ವಲ್ಪ ನಿಧಾನಗತಿಯಲ್ಲಿ ಸ್ಪರ್ಧೆ ನಡೆದ ಕಾರಣ 24 ಗಂಟೆಗಳಲ್ಲಿ ಮುಗಿಯಬೇಕಾಗಿದ್ದ ಸ್ಪರ್ಧೆ ಸುಮಾರು 40 ಗಂಟೆಗೂ ಹೆಚ್ಚು ಕಾಲ ನಡೆಯಿತು ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್‌. ಶೆಟ್ಟಿ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ವೇಣೂರಿನ ಕಂಬಳದಲ್ಲಿ 13.68 ಸೆಕೆಂಡ್‌ನಲ್ಲಿ ಓಡಿದ್ದು, ಬಹಳ ಖುಷಿ ಆಗಿದೆ. ನಾನು ಓಡಿಸಿದ್ದು ಇರ್ವತ್ತೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು. ಅವು ಚೆನ್ನಾಗಿ ಓಡುತ್ತಿದ್ದುದರಿಂದ ನನಗೆ ಈ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು. ಮುಂದೆ ಇನ್ನೂ ಚೆನ್ನಾಗಿ ಓಡುವುದಕ್ಕೆ ಪ್ರಯತ್ನಿಸುತ್ತೇನೆ.

- ಶ್ರೀನಿವಾಸ ಗೌಡ, ಕಂಬಳ ಓಟಗಾರ

click me!