ಡಿ.5ರಿಂದ ಟೆಕ್ವಾಂಡೋ ಪ್ರಿಮಿಯರ್ ಲೀಗ್, ಬೆಂಗಳೂರಿನ ನಿಂಜಾಸ್ ತಂಡ ಕಣಕ್ಕೆ!

By Suvarna News  |  First Published Sep 4, 2023, 8:47 PM IST

ಡಿಸೆಂಬರ್ 5 ರಿಂದ ಟೆಕ್ವಾಂಡೋ ಪ್ರೀಮಿಯರ್‌ ಲೀಗ್‌ 1ನೇ ಆವೃತ್ತಿಯ  2ನೇ ಚರಣ  ಆರಂಭಗೊಳ್ಳುತ್ತಿದೆ. ಮುಂಬೈನಲ್ಲಿ ಆಯೋಜನೆಗೊಂಡಿರುವ ಟೂರ್ನಿಯಲ್ಲಿ ಬೆಂಗಳೂರಿನ ನಿಂಜಾಸ್ ತಂಡ ಅಖಾಡಕ್ಕಿಳಿಯುತ್ತಿದೆ.


ನವದೆಹಲಿ(ಸೆ.04) : ಜನಪ್ರಿಯ ಟೆಕ್ವಾಂಡೋ ಪ್ರೀಮಿಯರ್‌ ಲೀಗ್‌ (ಟಿಪಿಎಲ್‌)ನ ಮೊದಲ ಆವೃತ್ತಿಯ 2ನೇ ಚರಣ ಇದೇ ವರ್ಷ ಡಿಸೆಂಬರ್‌ 5ರಿಂದ 7ರವರೆಗೂ ಮುಂಬೈನಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಟೆಕ್ವಾಂಡೋ ದಿನ (ಸೆಪ್ಟೆಂಬರ್‌ 4)ದಂದು ಆಯೋಜಕರು ವೇಳಾಪಟ್ಟಿ ಪ್ರಕಟಿಸಿದ್ದು, ಈ ಆವೃತ್ತಿಯಲ್ಲಿ ಭಾರತೀಯರ ಜೊತೆ ವಿದೇಶಿಗರೂ ಸ್ಪರ್ಧಿಸಲಿದ್ದಾರೆ. ಕ್ರೀಡೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರತಿ ತಂಡದಲ್ಲೂ ಪುರುಷ ಹಾಗೂ ಮಹಿಳಾ ಟೆಕ್ವಾಂಡೋ ಪಟುಗಳು ಇರಲಿದ್ದು, ಭಾರಿ ಕುತೂಹಲ ಕೆರಳಿಸಿದೆ.  

‘ಮೊದಲ ಆವೃತ್ತಿಯ ಟಿಪಿಎಲ್‌ನ 2ನೇ ಚರಣದಲ್ಲಿ ಪುರುಷರಿಗೆ 55.1ರಿಂದ 60.9 ಕೆ.ಜಿ., ಮಹಿಳೆಯರಿಗೆ 48.1ರಿಂದ 53.9 ಕೆ.ಜಿ. ವರೆಗಿನ ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ’ ಎಂದು ಟೆಕ್ವಾಂಡೋ ಪ್ರೀಮಿಯರ್‌ ಲೀಗ್‌ನ ಸ್ಥಾಪಕ-ನಿರ್ದೇಶಕ ದುವ್ವುರಿ ಗಣೇಶ್‌ ಮಾಹಿತಿ ನೀಡಿದ್ದಾರೆ. ‘ಮೊದಲ ಚರಣದಲ್ಲಿ 58.1 ಕೆ.ಜಿ.ಯಿಂದ 67.9 ಕೆ.ಜಿ. ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು. ಅದು ಬಹಳ ದೊಡ್ಡ ಯಶಸ್ಸು ಕಂಡಿತ್ತು. ಈ ಬಾರಿ ಮತ್ತೊಮ್ಮೆ ಯಶಸ್ವಿಯಾಗಲಿದ್ದೇವೆ ಎನ್ನುವ ವಿಶ್ವಾಸವಿದೆ’ ಎಂದು ಗಣೇಶ್‌ ಹೇಳಿದ್ದಾರೆ. ಐನೀಲ್‌ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌, ಜೆ.ಆರ್‌. ಅಂತಾರಾಷ್ಟ್ರೀಯ ಟೆಕ್ವಾಂಡೋ ಅಕಾಡೆಮಿ, ಪ್ರೊ ಟೆಕ್ವಾಂಡೋ ಕಾರ್ಪೊರೇಷನ್‌, ಜಿಕೆಪಿಆರ್‌ ಮೀಡಿಯಾ ಹೌಸ್‌ ಹಾಗೂ ಬ್ಲ್ಯಾಕ್‌ ಬೆಲ್ಟ್‌ ವರ್ಲ್ಡ್‌ ಯುಎಸ್‌ಎ ಒಟ್ಟಾಗಿ ಆಯೋಜಿಸುತ್ತಿರುವ ಮುಂಬೈ ಚರಣದಲ್ಲಿ ಒಟ್ಟು 12 ತಂಡಗಳು ಸ್ಪರ್ಧಿಸಲಿದ್ದು, ಹಲವು ಖ್ಯಾತ ಉದ್ಯಮಿಗಳು ಹಾಗೂ ಬಾಲಿವುಡ್‌ ತಾರೆಯರು ತಂಡಗಳು ಮಾಲಿಕರಾಗಿದ್ದಾರೆ. 

Tap to resize

Latest Videos

undefined

ಚೊಚ್ಚಲ ಟೆಕ್ವಾಂಡೋ ಪ್ರೀಮಿಯರ್ ಲೀಗ್ ಗೆದ್ದ ರಾಜಸ್ಥಾನ ರೆಬೆಲ್ಸ್, ಬೆಂಗಳೂರು ನಿಂಜಾಸ್‌ಗೆ ನಿರಾಸೆ!

ಮಾಜಿ ಮಿಸ್‌ ಇಂಡಿಯಾ ಹಾಗೂ ಮಿಸ್‌ ಏಷ್ಯಾ-ಪೆಸಿಫಿಕ್ ಸೃಷ್ಠಿ ರಾಣಾ (ಹರ್ಯಾಣ ಹಂಟರ್ಸ್‌), ಖ್ಯಾತ ವಜ್ರ ಉದ್ಯಮಿ ರುಚಿತಾ ಮಿತ್ತಲ್‌ (ಮಹಾರಾಷ್ಟ್ರ ಆ್ಯವೆಂಜರ್ಸ್‌), ಹಾಸ್ಪಿಟಾಲಿಟಿ ಉದ್ಯಮಿ ಶಿಲ್ಪಾ ಪಟೇಲ್‌ (ಬೆಂಗಳೂರು ನಿಂಜಾಸ್‌), ಗ್ಲೋಬಲ್‌ ಸ್ಪೋರ್ಟ್ಸ್‌ ಮಾಲಿಕ ಶ್ಯಾಮ್‌ ಪಟೇಲ್‌, ಐಮಾರ್ಕ್‌ ಡೆವಲಪ್ಪರ್ಸ್‌ನ ಮುಖ್ಯಸ್ಥ ಅಲ್ಲು ವೆಂಕಟ ರೆಡ್ಡಿ (ಹೈದರಾಬಾದ್‌ ಗ್ಲೈಡರ್ಸ್‌), ಅಂತಾರಾಷ್ಟ್ರೀಯ ಖ್ಯಾತಿಯ ಸಾಮಾಜಿಕ ಕಾರ್ಯಕರ್ತ ವಿಜಯ್‌ ಬನ್ಸಾಲಿ (ಗುಜರಾತ್‌ ಥಂಡರ್ಸ್‌), 2006ರ ಮಿಸ್ಟರ್‌ ಇಂಡಿಯಾ ಬಿಲ್ಜಿತ್‌ ಗೊಗೊಯ್‌(ಅಸ್ಸಾಂ ಹೀರೋಸ್‌) ತಂಡಗಳನ್ನು ಹೊಂದಿರುವ ಖ್ಯಾತ ನಾಮರು. 

ವರ್ಷಪೂರ್ತಿ ಟೆಕ್ವಾಂಡೋ ಕೂಟಗಳನ್ನು ಆಯೋಜಿಸಲು ವ್ಯವಸ್ಥೆಯೊಂದನ್ನು ರೂಪಿಸುವ ಉದ್ದೇಶದಿಂದ ಟಿಪಿಎಲ್‌ ಆರಂಭಿಸಿದ್ದಾಗಿ ಹೇಳಿರುವ ಲೀಗ್‌ನ ಸಹ ಸಂಸ್ಥಾಪಕ ಹಾಗೂ ನಿರ್ದೇಶಕ ಡಾ. ವೆಂಕಟ ಕೆ ಗಂಜಾಂ, ‘ದೇಶದಲ್ಲಿರುವ ಪ್ರತಿಯೊಬ್ಬ ಟೆಕ್ವಾಂಡೋ ಆಟಗಾರನಿಗೆ ವೇದಿಕೆ ಒದಗಿಸಬೇಕು ಎನ್ನುವುದು ನಮ್ಮ ಗುರಿ. ಪ್ರತಿ ಚರಣವನ್ನು ವಿವಿಧ ತೂಕ ವಿಭಾಗಗಳಲ್ಲಿ ನಡೆಸಲಾಗುತ್ತದೆ. ನಿರಂತರವಾಗಿ ಲೀಗ್‌ ನಡೆಯಲಿರುವ ಕಾರಣ ಕ್ರೀಡೆಯ ಜನಪ್ರಿಯತೆಯು ವೇಗವಾಗಿ ಹೆಚ್ಚಲಿದೆ’ ಎಂದಿದ್ದಾರೆ. 

ಮೊದಲ ಚರಣದಲ್ಲಿ ಡೆಲ್ಲಿ ವಾರಿಯರ್ಸ್‌ ತಂಡವನ್ನು ಸೋಲಿಸಿದ್ದ ರಾಜಸ್ಥಾನ ರೆಬೆಲ್ಸ್ ಪ್ರಶಸ್ತಿ ಎತ್ತಿಹಿಡಿದಿತ್ತು. ಟಿಪಿಎಲ್‌ನ ಪ್ರಧಾನ ಆಯುಕ್ತ ದಕ್ಷಿಣ ಕೊರಿಯಾದ ಗ್ರ್ಯಾಂಡ್‌ ಮಾಸ್ಟರ್‌ ಜುನ್‌ ಲೀ ಆಯೋಜಕರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ‘ಈ ಲೀಗ್‌ ಆಟಗಾರರು, ಮಾನಸಿಕವಾಗಿ ಹಾಗೂ ತಾಂತ್ರಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ.  ಪ್ರತಿಯೊಬ್ಬರೂ ತಮ್ಮ ಆಟದಲ್ಲಿ ಸುಧಾರಣೆ ಕಾಣಲಿದ್ದು, ಜಾಗತಿಕ ಮಟ್ಟದ ಕೂಟಗಳಲ್ಲಿ ಉತ್ತಮ ಪ್ರದರ್ಶನ ತೋರಲು ಅನುಕೂಲವಾಗಲಿದೆ’ ಎಂದಿದ್ದಾರೆ. 

ಐಪಿಎಲ್ ರೀತಿ ಟೀಕ್ವಾಂಡೋ ಪ್ರೀಮಿಯರ್ ಲೀಗ್, ಬೆಂಗಳೂರು ನಿಂಜಾಸ್ ಸೇರಿ 8 ತಂಡಗಳು ಭಾಗಿ!

ಸಹ ಸಂಸ್ಥಾಪಕಿ ಹಾಗೂ ನಿರ್ದೇಶಕಿ ನವನೀತಾ ಬಚು ಮಾತನಾಡಿ, ‘ನಾನು ನನ್ನ ಜೀವನವನ್ನು ಟೆಕ್ವಾಂಡೋಗಾಗಿ ಮುಡಿಪಾಗಿಟ್ಟಿದ್ದೇನೆ. ಕ್ರೀಡೆಯಿಂದ ಸಾಕಷ್ಟು ಸಂಪಾದಿಸಿದ್ದು, ಈಗ ಕ್ರೀಡೆಯ ಅಭಿವೃದ್ಧಿಗಾಗಿ ಶ್ರಮಿಸುವ ಸಮಯ. ಈ ಲೀಗ್‌ ಭಾರತಾದ್ಯಂತ ಟೆಕ್ವಾಂಡೋ ಜನಪ್ರಿಯಗೊಳ್ಳಲು ಅನುಕೂಲ ಮಾಡಿಕೊಡುವ ವಿಶ್ವಾಸವಿದೆ’ ಎಂದಿದ್ದಾರೆ. 

ಮತ್ತೊಬ್ಬ ಸಹ ಸಂಸ್ಥಾಪಕ, 28 ಗಿನ್ನಿಸ್‌ ದಾಖಲೆಗಳನ್ನು ಹೊಂದಿರುವ ಗ್ರ್ಯಾಂಡ್‌ ಮಾಸ್ಟರ್‌ ಎಂ.ಜಯಂತ್‌ ರೆಡ್ಡಿ ಮಾತನಾಡಿ, ‘ಮೊದಲ ಚರಣ ಭಾರಿ ಯಶಸ್ಸು ಕಂಡಿತ್ತು. ಹೊಸ ಚರಣ ಆರಂಭಗೊಳ್ಳುವ ವಿಷಯ ಟೆಕ್ವಾಂಡೋ ಪಟುಗಳಲ್ಲಿ ಸಂತಸ ಮೂಡಿಸಿದ್ದು, ಎಲ್ಲರೂ ಉತ್ಸುಕರಾಗಿದ್ದಾರೆ’ ಎಂದಿದ್ದಾರೆ.

click me!