ಟೇಬಲ್ ಟೆನಿಸ್‌ನಲ್ಲಿ ಭಾರತ ಇತ್ತೀಚೆಗೆ ಬಲಿಷ್ಠಗೊಳ್ಳುತ್ತಿದೆ. ಯುವ ಪ್ರತಿಭೆಗಳು ಟೇಬಲ್ ಟೆನಿಸ್ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರೋಚಕತೆ ಹೆಚ್ಚಿಸಿದ್ದಾರೆ. ಇದೀಗ ಭಾರತದ ಇಬ್ಬರು ಯುವ ಪ್ರತಿಭಗಳು ಭರವಸೆಯ ಆಶಾಕಿರವಣವಾಗಿ ಹೊರಹೊಮ್ಮಿದ್ದಾರೆ. 9 ವರ್ಷದ ಅವ್ನಿ ದುವಾ ಹಾಗೂ ಕೃಷಿವ್ ಗರ್ಗ್ ಸಾಧನೆಗೆ ದೇಶವೇ ಸಲಾಂ ಹೇಳುತ್ತಿದೆ.
ಗುರುಗ್ರಾಂ(ಜು.31) ಭಾರತ ಇತ್ತೀಚೆಗೆ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನದೊಂದಿದೆ ವಿಶ್ವದ ಗಮನಸೆಳೆಯುತ್ತಿದೆ. ಹೆಚ್ಚಾಗಿ ಕ್ರಿಕೆಟ್‌ನತ್ತ ಆಕರ್ಷಿತರಾಗುತ್ತಿದ್ದ ಪ್ರತಿಭೆಗಳು ಇದೀಗ ವಿವಿಧ ಕ್ರೀಡೆಗಳಲ್ಲಿ ಕಾಣಿಸಿಕೊಂಡು ಸಾಧನೆಯ ಹಾದಿಯಲ್ಲಿದ್ದಾರೆ. ಇದೀಗ ಭಾರತದ ಇಬ್ಬರು ಟೇಬಲ್ ಟೆನ್ನಿಸ್ ಯುವ ಕ್ರೀಡಾಪಟುಗಳು ಬಾರಿ ಸಂಚಲನ ಮೂಡಿಸಿದ್ದಾರೆ. ಗುರುಗ್ರಾಂನ 9 ವರ್ಷದ ಅವ್ನಿ ದುವಾ ಹಾಗೂ ಕೃಷಿವ್ ಗರ್ಗ್ ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ. ಇತ್ತೀಚೆಗೆ ಖಜಕಿಸ್ತಾನ್‌ನಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಅವ್ನಿ ಚಿನ್ನದ ಪದಕ ಗೆದ್ದಿದ್ದಾರೆ. ಇತ್ತ ಕೃಷಿವ್ ಇದೇ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ 5ನೇ ಸ್ಥಾನ ಅಲಂಕರಿಸಿದ್ದಾರೆ.
ಅವ್ನಿ ಅಂಡರ್ 11 ಬಾಲಕಿಯರ ವಿಭಾಗದಲ್ಲಿ 10ನೇ ಸ್ಥಾನ ಪಡೆದಿದ್ದರೆ, ಹರ್ಯಾಣದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಅಂಡರ್ 11 ಬಾಲಕರ ವಿಭಾಗದಲ್ಲಿ ಕೃಷಿವ್ ಗರ್ಗ್, ಭಾರತದಲ್ಲಿ 3ನೇ ರ್ಯಾಂಕ್ ಪಡೆದಿದ್ದಾರೆ. ಯುವ ಪ್ರತಿಭೆಗಳ ಸಾಧನೆಗೆ ಪ್ರೊಗ್ರೆಸ್ಸೀವ್ ಟೇಬಲ್ ಟೆನಿಸ್ ಕೋಚ್ ಕುನಾಲ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಕನಸು ನನಸಾದ ದಿನ ಎಂದು ಕೊಂಡಾಡಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರಿಂದ ಶರತ್ ಕಮಲ್‌ಗೆ ಖೇಲ್ ರತ್ನ ಪ್ರದಾನ
ಅವ್ನಿ ಹಾಗೂ ಕೃಷಿವ್ ಸಾಧನೆ ಕುರಿತು ಏಷ್ಯಾನೆಟ್ ನ್ಯೂಸೇಬಲ್ ಸಂಸ್ಥೆ ಜೊತೆ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡ ಕೋಚ್ ಕುನಾಲ್ ಕುಮಾರ್, ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವ್ನಿ ಯಾವುದೇ ಸವಾಲು ಎದುರಿಸಲು ಸಿದ್ಧ. ಅತ್ಮಾವಿಶ್ವಾಸದಿಂದ ಕಣಕ್ಕಿಳಿಯುವ ಅವ್ನಿ ತಮ್ಮ ನೈಜ ಆಟದ ಮೂಲಕ ಎದುರಾಳಿಗಳನ್ನು ಮಟ್ಟಹಾಕುತ್ತಾರೆ. ಇತ್ತ ಕೃಷಿವ್ ಕೂಡ ದಿಟ್ಟ ಹೋರಾಟದ ಮೂಲಕ ಗಮನಸೆಳೆದಿದ್ದಾರೆ. ಖಜಕಿಸ್ತಾನದಲ್ಲಿ ನಡೆದ ಟೂರ್ನಿಯಲ್ಲಿ 2-2 ಅಂತರದಲ್ಲಿ ಸಮಬಲಗೊಂಡಿದ್ದ ಹೋರಾಟದಲ್ಲಿ 10-4 ಅಂತರದಲ್ಲಿ ಕೊಂಡೊಯ್ಯುವ ಮೂಲಕ ಒತ್ತಡವನ್ನು ನಿಭಾಯಿಸುವ ಆಡುವ ಕಲೆ ಹೊಂದಿದ್ದಾನೆ ಎಂದು ಕುನಾಲ್ ಕುಮಾರ್ ಹೇಳಿದ್ದಾರೆ.
ಅವ್ನಿ ಹಾಗೂ ಕೃಷಿವ್ ಟೇಬಲ್ ಟೆನಿಸ್ ಸಾಧನೆಗೆ ಪೋಷಕರ ಜೊತೆಗೆ ಪ್ರಗ್ಯಾನಮ್ ಶಾಲೆ ಕೂಡ ಬೆಂಬಲ ನೀಡಿದೆ. ಕಾರಣ ಶಾಲೆ, ಪಠ್ಯದ ಬಳಿಕ ಟೇಬಲ್ ಟೆನಿಸ್ ಅಭ್ಯಾಸ ಮಾಡಬೇಕು. ಎರಡನ್ನೂ ಸರಿದೂಗಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಇನ್ನು ಇಬ್ಬರು ಮಕ್ಕಳು ಕೂಡ ಶಿಸ್ತಿನ ಸಿಪಾಯಿಗಳು. ಹೀಗಾಗಿ ಎಲ್ಲವೂ ಯಾವುದೇ ಅಡೆ ತಡೆ ಇಲ್ಲದೆ ಸಾಗುತ್ತಿದೆ. ಬೆಳಗ್ಗೆ 6 ರಿಂದ 7 ಗಂಟೆ ವರೆಗೆ ಫಿಟ್ನೆಸ್ ತರಬೇತಿ ನೀಡಲಾಗುತ್ತದೆ. ಬಳಿಕ 7 ರಿಂದ 9 ಗಂಟೆ ವರೆಗೆ ಟೇಬಲ್ ಟೆನಿಸ್ ತರಬೇತಿ ನೀಡಲಾಗುತ್ತದೆ. ಪೋಷಕರು ಕೂಡ ಈ ವೇಳೆ ಮಕ್ಕಳ ಭವಿಷ್ಯ ರೂಪಿಸಲು ಎಲ್ಲಾ ನೆರವು ನೀಡುತ್ತಿದ್ದಾರೆ. ಹೀಗಾಗಿ ಇಬ್ಬರು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಕುನಾಲ್ ಕುಮಾರ್ ಹೇಳಿದ್ದಾರೆ.
ಯೂತ್ ಟಿಟಿ: ಭಾರತದ ಬಾಲಕಿಯರ ಸ್ವರ್ಣ ಸಾಧನೆ
ಪ್ರಮುಖವಾಗಿ ಶಾಲೆ ಸಹಕಾರ ಮೆಚ್ಚಲೇ ಬೇಕು. ಕಾರಣ ಶಾಲೆಯಲ್ಲಿ ಮಕ್ಕಳ ಕ್ರೀಡೆ, ಚಟುವಟಿಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಹೀಗಾಗಿ ಅವ್ನಿ ಹಾಗೂ ಕೃಷಿವ್ ಯಾವುದೇ ಟೂರ್ನಿಗೆ ತೆರಳಲು ಅಡೆ ತಡೆ ಇಲ್ಲ. ಪ್ರದರ್ಶನಕ್ಕೆ ತಕ್ಕಂತೆ ಸ್ಕಾಲರ್‌ಶಿಪ್ ಕೂಡ ಶಾಲೆ ನೀಡುತ್ತಿದೆ. ಶಾಲೆಯಲ್ಲಿ ಉಪಹಾರ,ಊಟ,ಜ್ಯೂಸ್ ನೀಡಲಾಗುತ್ತದೆ. ಬೆಳಗ್ಗೆ 6 ರಿಂದ 9 ಗಂಟೆ ತನಕ ಅಕಾಡೆಮಿಯಲ್ಲಿ ಅಭ್ಯಾಸ ಮಾಡುವ ಮಕ್ಕಳು, ಮತ್ತೆ ಸಂಜೆ 5 ಗಂಟೆಯಿಂದ 8 ಗಂಟೆ ವರೆಗೆ ಅಕಾಡಮೆಯಲ್ಲಿ ತರಬೇತಿ ಪಡೆಯುತ್ತಾರೆ ಎಂದು ಕುನಾಲ್ ಕುಮಾರ್ ಹೇಳಿದ್ದಾರೆ.
ಪ್ರಧಾನಿ ಮೋದಿ ತಂದಿರುವ ಹಲವು ಕ್ರೀಡಾ ಯೋಜನೆಗಳು ಯುವ ಪ್ರತಿಭೆಗಳಿಗೆ ನೆರವಾಗುತ್ತಿದೆ. ಖೇಲೋ ಇಂಡಿಯಾ, ಸಾಯಿ ಅಡಿಯಲ್ಲಿ ನಡೆಯುತ್ತಿರುವ ಟಾರ್ಗೆಟ್ ಒಲಿಂಪಿಕ್ ಪೊಡಿಯಂ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳು ಯುವ ಪ್ರತಿಭೆಗಳಿಗೆ ನೆರವಾಗುತ್ತಿದೆ. ಇದರಿಂದ ಮಕ್ಕಳ ತರಬೇತಿ, ಖರ್ಚು ವೆಚ್ಚಕ್ಕೂ ನೆರವು ಸಿಗುತ್ತಿದೆ ಎಂದು ಕುನಾಲ್ ಕುಮಾರ್ ಹೇಳಿದ್ದಾರೆ.