ನವದೆಹಲಿ: ಇಂಡಿಯನ್ ಫುಟ್ಬಾಲ್ ಲೀಗ್ ಬಳಿಕ ಈಗ ಪ್ರೊ ಕಬಡ್ಡಿ ಲೀಗ್(ಪಿಕೆಎಲ್) ಕೂಡಾ ಸಂಕಷ್ಟದಲ್ಲಿದೆ. ಪ್ರಸಾರಕರು ಸಿಗದ ಕಾರಣ ಲೀಗ್‌ನ ಭವಿಷ್ಯವೇ ಅತಂತ್ರವಾಗಿದ್ದು, ಈ ವರ್ಷ ಪಂದ್ಯಗಳು ನಡೆಯುವುದಿಲ್ಲ. ಅಲ್ಲದೆ, ಮುಂದಿನ ವರ್ಷದ ಜೂನ್-ಜುಲೈವರೆಗೂ ಲೀಗ್ ನಡೆಯುವುದು ಅನುಮಾನವೆನಿಸಿದೆ.
ಪಿಕೆಎಲ್ 2014ರಲ್ಲಿ ಆರಂಭಗೊಂಡಿದ್ದು, ಈವರೆಗೂ 12 ಆವೃತ್ತಿಗಳು ನಡೆದಿವೆ. ಕಳೆದ ಆವೃತ್ತಿಯ ಪಂದ್ಯಗಳು 2025ರ ಆಗಸ್ಟ್-ಅಕ್ಟೋಬರ್‌ನಲ್ಲಿ ಆಯೋಜನೆಗೊಂಡಿತ್ತು. ಈ ವರ್ಷ ಜೂನ್ ವೇಳೆ ಹರಾಜು ನಡೆದು, ಆಗಸ್ಟ್ ವೇಳೆ ಪಂದ್ಯಗಳು ಆರಂಭಗೊಳ್ಳಬೇಕಿತ್ತು. ಆದರೆ ಪ್ರಸಾರಕರಿಲ್ಲದ ಕಾರಣ ಲೀಗ್ ಇನ್ನೂ ಶುರುವಾಗಿಲ್ಲ.
ಕಬಡ್ಡಿ ಲೀಗ್‌ಅನ್ನು ಮಶಾಲ್ ಸ್ಪೋರ್ಟ್ ಸಂಸ್ಥೆ ನಡೆಸಿಕೊಂಡು ಬರುತ್ತಿದೆ. 8ರಿಂದ 12ನೇ ಆವೃತ್ತಿ ವರೆಗಿನ ಪ್ರಸಾರ ಹಕ್ಕನ್ನು ಸ್ಟಾರ್ ಇಂಡಿಯಾ(ಈಗಿನ ಜಿಯೋಸ್ಟಾರ್) ₹905 ಕೋಟಿಗೆ ಪಡೆದುಕೊಂಡಿತ್ತು. ಅದರ ಅವಧಿ 2025ರ ಅಕ್ಟೋಬರ್‌ನಲ್ಲಿ ಕೊನೆಗೊಂಡಿದೆ.
ಹೊಸ ಮಾಧ್ಯಮ ಹಕ್ಕು ಒಪ್ಪಂದಕ್ಕೆ ಮಾತುಕತೆಗಳು ನಡೆಯುತ್ತಿದ್ದರೂ, ಕಳೆದ ಅವಧಿಯ ಅರ್ಧ ಮೊತ್ತ ಮಾತ್ರ ನೀಡುವುದಾಗಿ ಜಿಯೋಸ್ಟಾರ್ ಆಫರ್ ನೀಡಿದೆ. ಕಬಡ್ಡಿ ಲೀಗ್‌ಗೆ ಹೆಚ್ಚಿನ ಮಾರುಕಟ್ಟೆ ಸಿಗುತ್ತಿಲ್ಲ ಎಂಬ ಕಾರಣ ನೀಡಿ, ಕಡಿಮೆ ಮೊತ್ತಕ್ಕೆ ಮಾಧ್ಯಮ ಹಕ್ಕು ಖರೀದಿಸಲು ಜಿಯೋಸ್ಟಾರ್ ಮುಂದಾಗಿದೆ. ಹೀಗಾಗಿ ಗೊಂದಲ ಏರ್ಪಟ್ಟಿದೆ.
‘ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚು ಆಸಕ್ತಿ ಕಂಡುಬಂದಿಲ್ಲ. ಅಲ್ಲದೆ, ಈಗಿನ ಪ್ರಸಾರಕರು ನೀಡಿರುವ ಹೊಸ ಒಪ್ಪಂದವು ಈ ಹಿಂದಿನ ಒಪ್ಪಂದದ ಅರ್ಧದಷ್ಟು ಇದೆ. ಆದ್ದರಿಂದ ಎಲ್ಲಾ ಫ್ರಾಂಚೈಸಿಗಳು ಹೆಚ್ಚಿನ ಸಮಯ ಕೇಳಿವೆ. ಹೀಗಾಗಿ 2027ರ ಜೂನ್‌ಗೂ ಮುನ್ನ ಲೀಗ್ ನಡೆಯುವುದಿಲ್ಲ’ ಎಂದು ಪಿಕೆಎಲ್ ಮೂಲಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾಗಿ ವರದಿಯಾಗಿದೆ.
ಇನ್ನು, ಪ್ರಸಾರ ಗೊಂದಲ ಮುಗಿದು ಮಾಧ್ಯಮ ಹಕ್ಕು ಮಾರಾಟಗೊಂಡರೂ, ಲೀಗ್‌ಗೆ ಸಿದ್ಧವಾಗಲು ಕೆಲ ತಿಂಗಳುಗಳೇ ಬೇಕು. ಹೀಗಾಗಿ ಈ ವರ್ಷ ಲೀಗ್ ನಡೆಯುವುದಿಲ್ಲ. ಸಮಸ್ಯೆ ಇತ್ಯರ್ಥವಾದರೆ 2027ರ ಜುಲೈ ವೇಳೆ 13ನೇ ಆವೃತ್ತಿಯ ಲೀಗ್ ನಡೆಯಬಹುದು ಎಂದು ಹೇಳಲಾಗುತ್ತಿದೆ.
ಕಬಡ್ಡಿಗೂ ಮುನ್ನ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯೂ ಪ್ರಸಾರಕರ ಸಮಸ್ಯೆ ಎದುರಿಸಿತ್ತು. ಮಾಧ್ಯಮ ಹಕ್ಕು ಗೊಂದಲದಿಂದಾಗಿ 2025-26ರ ಆವೃತ್ತಿಯಲ್ಲಿ 163ರ ಬದಲು ಕೇವಲ 91 ಪಂದ್ಯಗಳು ನಡೆದಿದ್ದವು. ಹಿಂದೆ ₹250ಕ್ಕೂ ಹೆಚ್ಚು ಕೋಟಿ ಮೌಲ್ಯ ಹೊಂದಿದ್ದು ಪ್ರಸಾರ ಹಕ್ಕು, ಫ್ಯಾನ್‌ಕೋಡ್‌ಗೆ ಕೇವಲ ₹8.62 ಕೋಟಿಗೆ ಮಾರಾಟಗೊಂಡಿತ್ತು. ಈಗ ಕಬಡ್ಡಿ ಲೀಗ್ ಕೂಡಾ ಮಾಧ್ಯಮ ಹಕ್ಕು ಮೂಲಕ ಬಹುತೇಕ ಪಾಲನ್ನು ಕಳೆದುಕೊಳ್ಳುವುದು ನಿಶ್ಚಿತ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.