ಕೊರೋನಾ ಭೀತಿಯಿಂದಾಗಿ ಲಾಕ್‌ಡೌನ್ ಆಗಿದ್ದ ಈಜುಕೊಳಗಳು ಈಗ ಬಾಗಿಲು ತೆರೆದಿವೆ. ಆದರೆ ಜನರು ಮಾತ್ರ ಈಜುಕೊಳದತ್ತ ಸುಳಿಯುತ್ತಿಲ್ಲ. ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ಮಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಧನಂಜಯ್ ಎಸ್.ಹಕಾರಿ, ಕನ್ನಡಪ್ರಭ
ಬೆಂಗಳೂರು(ನ.20): ಕೊರೋನಾ ಲಾಕ್‌ಡೌನ್‌ನಿಂದಾಗಿ ಸುಮಾರು 7 ತಿಂಗಳು ಲಾಕ್ ಆಗಿದ್ದ ಈಜುಕೊಳ ಅ.14 ರಿಂದ ದೇಶದ್ಯಾಂತ ಓಪನ್ ಆಗಿದ್ದವು. ರಾಜ್ಯದಲ್ಲಿ 3 ದಿನ ತಡವಾಗಿ ಅಂದರೆ ಅ.17 ರಿಂದ ಈಜುಕೊಳಗಳನ್ನು ತೆರೆಯಲಾಗಿದೆ. ಈಜುಕೊಳ ಆರಂಭವಾಗಿ ಸರಿ ಸುಮಾರು ಒಂದು ತಿಂಗಳು ಕಳೆದಿದೆ. ಆದರೂ ಇಲ್ಲಿನ ಸಿಬ್ಬಂದಿಯ ಆರ್ಥಿಕ ಬವಣೆ ಮಾತ್ರ ನಿಂತಿಲ್ಲ. ಸದ್ಯ ರಾಜ್ಯ ಈಜು ಸಂಸ್ಥೆ ಸಿಬ್ಬಂದಿಗಳ ಅಳಲಿಗೆ ಸ್ಪಂದಿಸುತ್ತಿದೆ ಆದರೆ ಸರ್ಕಾರದಿಂದ ನೆರವು ಸಿಗುತ್ತಿಲ್ಲ.
ಲಾಕ್‌ಡೌನ್‌ನಿಂದಾಗಿ ಈಜುಕೊಳ ಮುಚ್ಚಿದ್ದಾಗ ಸಿಬ್ಬಂದಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದರು. ಆಗಲೂ ರಾಜ್ಯ ಈಜು ಸಂಸ್ಥೆ ಸಿಬ್ಬಂದಿಗಳ ನೆರವಿಗೆ ಧಾವಿಸಿತ್ತು. ಇದೀಗ ಈಜುಕೊಳ ಆರಂಭವಾದರೂ ಸಿಬ್ಬಂದಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಶಿಬಿರಾರ್ಥಿಗಳಿಗೆ ಮಾತ್ರ ಈಜುಕೊಳದಲ್ಲಿ ಅಭ್ಯಾಸಕ್ಕೆ ಅವಕಾಶ ನೀಡಿದೆ. ಸಾರ್ವಜನಿಕರು ಈಜುಕೊಳದತ್ತ ಬರುತ್ತಿಲ್ಲ. ಇದರ ಮಧ್ಯೆ ಕೊರೋನಾ ಭೀತಿಯಿಂದಾಗಿ ಈಜುಕೊಳ ಆರಂಭವಾದರೂ ವಿದ್ಯಾರ್ಥಿಗಳು ಅತ್ತ ಸುಳಿಯದೆ ಇರುವುದು ಸಿಬ್ಬಂದಿ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ವಕ್ಕರಿಸಿದ ಕೊರೋನಾ ಸೋಂಕು; ಮೂವರು ಈಗ ಐಸೋಲೇಷನ್..!
ರಾಜ್ಯ ಈಜು ಸಂಸ್ಥೆ ಅಡಿಯಲ್ಲಿ ಸುಮಾರು 50 ರಿಂದ 52 ಈಜುಕೊಳಗಳಿವೆ. ಇದರಲ್ಲಿ 20 ರಿಂದ 30 ಈಜುಕೊಳಗಳು ಕಾರ್ಯ ನಿರ್ವಹಣೆಯಲ್ಲಿವೆ. ಬೆಂಗಳೂರಿನಲ್ಲಿ 15 ಈಜುಕೊಳಗಳು, ಈಜು ಸಂಸ್ಥೆಯ ಮಾನ್ಯತೆ ಪಡೆದಿವೆ. ಸದ್ಯ ಇದರಲ್ಲಿ ಸುಮಾರು 10 ಈಜುಕೊಳಗಳು ಕಾರ್ಯನಿರ್ವಹಿಸುತ್ತಿವೆ. ಮಂಗಳೂರಿನ ಅಕ್ವೆಟಿಕ್ ಕ್ಲಬ್, ಮೈಸೂರಿನ ಎಐಎಂಎಸ್ ಈಜುಕೊಳಗಳು ಮಾತ್ರ ಪ್ರಸ್ತುತ ಕಾರ್ಯ ನಿರ್ವಹಣೆಯಲ್ಲಿವೆ. ಉಳಿದಂತೆ ಮಂಗಳೂರಿನ ಜೈ ಹಿಂದ್, ಮಂಗಳಾ ಕ್ಲಬ್, ಪುತ್ತೂರಿನ ಅಕ್ವೆಟಿಕ್ ಸೆಂಟರ್, ದಾವಣಗೆರೆಯ ಧವನ್ಸ್ ಅಕ್ವೆಟಿಕ್ ಕ್ಲಬ್, ಬೆಳಗಾವಿಯ ಸ್ವಿಮ್ಮರ್ಸ್ ಕ್ಲಬ್, ಎಬಿಬಿಎ ಸ್ಪೋರ್ಟ್ಸ್ ಹಾಗೂ ಪ್ಯಾಷನೇಟ್ ಕ್ಲಬ್‌ಗಳು ನಿರ್ವಹಣೆ ಖರ್ಚನ್ನು ಸರಿದೂಗಿಸಲು ಸಾಧ್ಯವಾಗದೆ ಈಜುಕೊಳ ತೆರೆದಿಲ್ಲ.
ವಿದ್ಯುತ್ ಬಿಲ್ ಕಟ್ಟಲಾಗುತ್ತಿಲ್ಲ: ಈಜುಕೊಳದಿಂದ ಬರುತ್ತಿರುವ ಸದ್ಯದ ಆದಾಯ ವಿದ್ಯುತ್ ಬಿಲ್ ಕಟ್ಟಲಾಗುತ್ತಿಲ್ಲ. ಇನ್ನು ಎಲ್ಲಿಂದ ಸಿಬ್ಬಂದಿಗೆ ವೇತನ ನೀಡುವುದು. ಈಜುಕೊಳ ಓಪನ್ ಮಾಡಿಕೊಂಡು ಈಜುಪಟುಗಳು ಯಾರು ಬರುತ್ತಿಲ್ಲ. ಈಜುಕೊಳವನ್ನು ನಂಬಿಕೊಂಡರೇ ಜೀವನ ನಡೆಸುವುದು ದುಸ್ಥರವಾಗಿದೆ. ಸರ್ಕಾರ ಈ ಕೂಡಲೇ ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಈಜುಕೊಳದ ಸಿಬ್ಬಂದಿಯೊಬ್ಬರು ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕೊರೋನಾ ಸಂಕಷ್ಟ ಕಾಲದಲ್ಲಿ ಈಜುಕೊಳಗಳ ಆರ್ಥಿಕ ನಷ್ಟ ಸರಿದೂಗಿಸಲು ಸರ್ಕಾರ ಕೆಲವೊಂದು ರಿಯಾಯಿತಿಯನ್ನಾದರೂ ನೀಡಬೇಕು. ವಿದ್ಯುತ್ ಬಿಲ್, ನೀರಿನ ಬಿಲ್‌ನಲ್ಲಿ ರಿಯಾಯಿತಿ, ಸಿಬ್ಬಂದಿಗಳ ಆರ್ಥಿಕತೆಯನ್ನು ಸದೃಢಗೊಳಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತರಬೇಕು. ಆಗ ಮಾತ್ರ ಸಿಬ್ಬಂದಿಗಳ ಸಂಕಷ್ಟವನ್ನು ಸ್ವಲ್ಪ ಮಟ್ಟಿಗೆ ಬಗೆಹರಿಸಿದಂತಾಗಲಿದೆ ಎನ್ನುವುದು ಸಿಬ್ಬಂದಿಯೊಬ್ಬರ ಅಳಲಾಗಿದೆ.
ರಾಜ್ಯದಲ್ಲಿ ಈಜುಕೊಳಗಳು ಆರಂಭವಾಗಿದೆ. ಆದರೂ ಸಿಬ್ಬಂದಿಯ ಕಷ್ಟ ಮಾತ್ರ ತೀರಿಲ್ಲ. ಸದ್ಯ ಈಜುಕೊಳಗಳ ಸಿಬ್ಬಂದಿಗಳಿಗೆ ಈಜು ಸಂಸ್ಥೆ ನೆರವಿನ ಹಸ್ತ ಚಾಚಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಪರಿಹಾರ ದೊರೆಯುವ ನಿರೀಕ್ಷೆಯಿದೆ- ಗೋಪಾಲ್ ಬಿ. ಹೊಸೂರ್, ರಾಜ್ಯ ಈಜು ಸಂಸ್ಥೆ ಅಧ್ಯಕ್ಷ