ಅಮ್ಮನ ದಾರಿಯಲ್ಲೇ ಸಾಗಿದ ಮಗಳು, ದುಬೈ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಸಹನಾ ಕುಮಾರಿ ಪುತ್ರಿ ಪಾವನಾ!

By Santosh NaikFirst Published Apr 25, 2024, 10:10 PM IST
Highlights

ದುಬೈನಲ್ಲಿ ನಡೆಯುತ್ತಿರುವ 20 ವಯೋಮಿತಿ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ರಾಜ್ಯದ ಪಾವನಾ ನಾಗರಾಜ್‌ ಚಿನ್ನದ ಪದಕ ಗೆದ್ದಿದ್ದಾರೆ. ಆ ಮೂಲಕ ಅಥ್ಲೆಟಿಕ್ಸ್‌ನಲ್ಲಿ ತಮ್ಮ ತಾಯಿ ಸಹನಾ ಕುಮಾರಿ ಹಾದಿಯಲ್ಲಿಯೇ ಸಾಗಿದ್ದಾರೆ.
 

ಬೆಂಗಳೂರು (ಏ.25): ಭಾರತದ ಪಾವನಾ ನಾಗರಾಜ್‌ ದುಬೈನಲ್ಲಿ ನಡೆಯುತ್ತಿರುವ 20 ವಯೋಮಿತಿ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.  6.32 ಮೀಟರ್‌ ದೂರ ಹಾರುವ ಮೂಲಕ ಪಾವನಾ ನಾಗರಾಜ್‌ ಚಿನ್ನದ ಪದಕ ಜಯಿಸಿದರು. ಹೈಜಂಪ್‌ ಸ್ಪರ್ಧೆಯಲ್ಲಿ ಈಗಾಗಲೇ 14 ವಯೋಮಿತಿ ಹಾಗೂ 16 ವಯೋಮಿತಿ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿರುವ ಪಾವನಾ ನಾಗರಾಜ್‌, ಮಾಜಿ ಅಥ್ಲೀಟ್‌ ಸಹನಾ ಕುಮಾರಿ ಅವರ ಪುತ್ರಿ. ಆದರೆ ದುಬೈನಲ್ಲಿ ಅವರು ಲಾಂಗ್‌ ಜಂಪ್‌ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿರುವುದು ವಿಶೇಷವಾಗಿದೆ. ಮಂಗಳೂರು ಮೂಲದ ಸಹನಾ ಕುಮಾರಿ ಅವರ ಹೆಸರಿನಲ್ಲಿಯೇ ಇಂದಿಗೂ ರಾಷ್ಟ್ರೀಯ ಹೈಜಂಪ್‌ ದಾಖಲೆಯಿದ್ದರೆ, ಅವರ ತಂದೆ ಬಿಜಿ ನಾಗರಾಜ್‌ 100 ಮೀಟರ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದಾರೆ.

ವಿಶೇಷವೇನೆಂದರೆ, 2005ರಲ್ಲಿ ಅಂತರ ರೈಲ್ವೇಸ್‌ ಅಥ್ಲೆಟಿಕ್ಸ್‌ ಮೀಟ್‌ನಲ್ಲಿ ಭಾಗವಹಿಸಲು ನವದೆಹಲಿಗೆ ತೆರಳಿದ್ದಾಗ, ಸಹನಾ ಕುಮಾರಿ ಒಂದು ತಿಂಗಳ ಗರ್ಭಿಣಿಯಾಗಿದ್ದರು. ನಂತರದ ದಿನಗಳಲ್ಲಿ ಹೈಜಂಪ್‌ನ ಶ್ರೇಷ್ಠ ಅಥ್ಲೀಟ್‌ ಎನಿಸಿಕೊಂಡ ಸಹನಾಕುಮಾರಿ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿಯೂ ಸ್ಪರ್ಧೆ ಮಾಡಿದ್ದರು. ಈಗ ಅವರ ಪುತ್ರಿ ಪಾವನಾ ನಾಗರಾಜ್‌ ತಾಯಿಯ ಹಾದಿಯನ್ನೇ ಹಿಡಿದಿದ್ದಾರೆ. ಹೈಜಂಪ್‌ ಮಾತ್ರವಲ್ಲದೆ, ಲಾಂಗ್‌ ಜಂಪ್‌ ಹಾಗೂ ಹೆಪ್ಟಾಥ್ಲಾನ್‌ನಲ್ಲೂ ಅವರು ಮಿಂಚುತ್ತಿದ್ದಾರೆ.

ಇನ್ನು ಮಗಳ ಸಾಧನೆ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದ ಸಹನಾ ಕುಮಾರಿ, 'ಆಕೆ ಚಿಕ್ಕವಳಾಗಿದ್ದಾಗ ನನ್ನ ಅಭ್ಯಾಸದ ಅವಧಿಗೆ ಕರೆದುಕೊಂಡು ಹೋಗ್ತಿದ್ದೆ. ಒಮ್ಮೊಮ್ಮೆ ಟೂರ್ನಮೆಂಟ್‌ಗೂ ಕರೆದುಕೊಂಡು ಹೋಗುತ್ತಿದ್ದೆ. 2009ರಲ್ಲಿ ಬೆಂಗಳೂರಿನಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಗ್ರ್ಯಾನ್‌ ಪ್ರಿಕ್ಸ್‌ನಲ್ಲಿ ನಾನು ಬೆಳ್ಳಿ ಗೆದ್ದಾಗ, ಈಕೆ ಮೈದಾನಕ್ಕೆ ಓಡಿ ಬಂದಿದ್ದಳು. ಅಲ್ಲಿಯೇ ಹೈಜಂಪ್‌ ಅಭ್ಯಾಸ ಮಾಡಲು ಆರಂಭಿಸಿದ್ದಳು. ಈ ಹಂತದಲ್ಲಿಯೇ ಆಕೆ ನಾನು ಹೈಜಂಪರ್‌ ಆಗುತ್ತೇನೆ ಎಂದಿದ್ದಳು' ಎಂದು 42  ವರ್ಷದ ಮಾಜಿ ಅಥ್ಲೀಟ್‌ ಹೇಳಿದ್ದರು.

ಸಾರಾ ತೆಂಡೂಲ್ಕರ್‌ ಜೊತೆ ಬ್ರೇಕಪ್‌? ಶುಬ್ಮನ್‌ ಗಿಲ್‌ಗೆ ಹೊಸ ಗರ್ಲ್‌ಫ್ರೆಂಡ್‌?

ಮಗಳನ್ನು ರನ್ನರ್‌ ಮಾಡಬೇಕು ಎನ್ನುವುದು ಪತಿಯ ಆಸೆಯಾಗಿತ್ತು. ಆದರೆ, ಆಕೆಗೆ ಚಿಕ್ಕ ವಯಸ್ಸಿನಿಂದಲೇ ಹೈಜಂಪ್‌ ಮೇಲೆ ಆಸಕ್ತಿ ಬಂದಿತ್ತು. 2010ರಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ಗಾಗಿ ನಾನು ಅಭ್ಯಾಸ ನಡೆಸುತ್ತಿದ್ದ ವೇಳೆ ಪಾವನಾ ಇನ್ನೂ 5 ವರ್ಷದ ಚಿಕ್ಕ ಹುಡುಗಿ. ಈ ವೇಳೆ ನಮ್ಮ ಜಂಪ್ಸ್‌ ಕೋಚ್‌ ಆಗಿದ್ದ ಎವಜೆನಿ ನಿಕಿಟಿನ್‌, ಈಕೆಯ ಜಂಪ್‌ನ ಮೇಲೆ ಆಸಕ್ತಿ ವಹಿಸಿದ್ದರು ಎಂದು ಸಹನಾ ಕುಮಾರಿ ಹೇಳಿದ್ದರು.

17 ವರ್ಷದಲ್ಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌!

click me!