ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದೆ. ಭಾರತ ಈ ಬಾರಿ ಅದ್ಭುತ ಪ್ರದರ್ಶನ ತೋರಿದ್ದರ ಹಿಂದಿನ ಗುಟ್ಟೇನು ನೋಡೋಣ ಬನ್ನಿ
ಪ್ಯಾರಿಸ್ ಗೇಮ್ಸ್‌ನಲ್ಲಿ ಭಾರತ 25 ಪದಕ ಗೆಲ್ಲುವ ನಿರೀಕ್ಷೆ ಇತ್ತಾದರೂ, ಅದಕ್ಕಿಂತಲೂ ಹೆಚ್ಚಿನ ಮೆಡಲ್ ಸಾಧನೆ ಮಾಡಿದೆ. ಈ ಅನಿರೀಕ್ಷಿತ ಪದಕ ಸಾಧನೆಯ ಹಿಂದೆ ಹಲವು ಮಹತ್ವದ ವಿಚಾರಗಳಿವೆ.
1. ಸರ್ಕಾರದ ಪ್ರೋತ್ಸಾಹ
undefined
ಕೇಂದ್ರ ಸರ್ಕಾರ ಈಗ ಕ್ರೀಡೆಗೆ ಹೆಚ್ಚಿನ ಮಹತ್ವದ ನೀಡುತ್ತಿದೆ. ಬಜೆಟ್‌ನಲ್ಲಿ ವಿವಿಧ ಯೋಜನೆಗಳ ಮೂಲಕ ಹೆಚ್ಚಿನ ಅನುದಾನ ಒದಗಿಸಿದ್ದಲ್ಲದೇ, ಅಥ್ಲೀಟ್‌ಗಳ ಅಭ್ಯಾಸಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮಾಡಿತು. ಕ್ರೀಡಾಪಟುಗಳಲ್ಲಿ ಆರ್ಥಿಕ ಹಾಗೂ ಮಾನಸಿಕವಾಗಿ ಶಕ್ತಿ ತುಂಬಿದ್ದು ಕ್ರೀಡಾಕೂಟದಲ್ಲಿ ಫಲ ನೀಡಿತು.
2. ಹೆಚ್ಚುವರಿ ಕೋಚ್, ಸಿಬ್ಬಂದಿ
ಭಾರತ ಈ ಬಾರಿ ಹೆಚ್ಚುವರಿ ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿಯನ್ನು ಪ್ಯಾರಿಸ್‌ಗೆ ಕಳುಹಿಸಿತ್ತು. ಟೋಕಿಯೋ ಗೇಮ್ಸ್‌ನಲ್ಲಿ 45 ಸಿಬ್ಬಂದಿ ಇದ್ದರೆ, ಈ ಬಾರಿ 77 ಕೋಚ್‌ಗಳು ಹಾಗೂ ಸಿಬ್ಬಂದಿಗಳಿದ್ದರು. ಇದು ಭಾರತಕ್ಕೆ ವರವಾಗಿ ಪರಿಣಮಿಸಿತು.
ಪ್ಯಾರಿಸ್‌ನಲ್ಲಿ ಭಾರತ ಚಾರಿತ್ರಿಕ ಸಾಧನೆ: ಶಹಬ್ಬಾಸ್ ಪ್ಯಾರಾ ಅಥ್ಲೀಟ್ಸ್!
3. ಪುನಶ್ಚೇತನ ಕೇಂದ್ರ
ಇದೇ ಮೊದಲ ಬಾರಿ ಭಾರತೀಯ ಕ್ರೀಡಾಪಟುಗಳಿಗಾಗಿ ಪ್ಯಾರಿಸ್ ಕ್ರೀಡಾ ಗ್ರಾಮದಲ್ಲಿ ಪುನಶ್ಚೇತನ ಕೇಂದ್ರ ತೆರೆಯಲಾಗಿತ್ತು. ಪ್ಯಾರಾಲಿಂಪಿಕ್ಸ್ ನಡುವೆ ಕ್ರೀಡಾಪಟುಗಳು ಗಾಯಗೊಂಡರೆ ಅವರಿಗೆ ಬೇಕಾದ ಎಲ್ಲಾ ಆರೈಕೆ, ಚಿಕಿತ್ಸೆ ನೀಡಿ ಉಪಚರಿಸಲಾಗುತ್ತಿತ್ತು. ಮಾನಸಿಕವಾಗಿಯೂ ಅವರನ್ನು ಸಿದ್ಧಗೊಳಿಸಲು ವೈದ್ಯರಿದ್ದರು.
3. ಅನುಭವಿ ಅಥ್ಲೀಟ್‌ಗಳು
ಈ ಹಿಂದಿನ ಪ್ಯಾರಾಲಿಂಪಿಕ್ಸ್ ಸೇರಿ ಜಾಗತಿಕ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದ ಕ್ರೀಡಾಪಟುಗಳು ಈ ಬಾರಿಯೂ ಗೇಮ್ಸ್‌ನಲ್ಲಿ ಪಾಲ್ಗೊಂಡರು. ಜಾಗತಿಕ ಮಟ್ಟದ ಕೂಟಗಳಲ್ಲಿ ಒತ್ತಡ ಹೆಚ್ಚಿದ್ದರೂ, ಅನುಭವದ ಬಲದಿಂ ಅದನ್ನು ನಿಭಾಯಿಸಿದ್ದು ಪದಕ ಗೆಲ್ಲಲು ಕಾರಣವಾಯಿತು.
4. ಅಥ್ಲೆಟಿಕ್ಸ್‌ನಲ್ಲಿ ಸುಧಾರಣೆ
ಭಾರತ ಜಾಗತಿಕ ಕ್ರೀಡಾಕೂಟಗಳ ಅಥ್ಲೆಟಿಕ್ಸ್‌ನಲ್ಲಿ ಹೆಚ್ಚಿನ ಸಾಧನೆ ಮಾಡಿದ್ದೇ ಇಲ್ಲ. ಆದರೆ ಈ ಬಾರಿ ಭಾರತಕ್ಕೆ ಹೆಚ್ಚಿನ ಯಶಸ್ಸು ತಂದುಕೊಟ್ಟಿದ್ದೇ ಅಥ್ಲೆಟಿಕ್ಸ್. ಕಳೆದ ಬಾರಿ 1 ಚಿನ್ನ ಸೇರಿ ಒಟ್ಟು 8 ಪದಕ ಗೆದ್ದಿದ್ದ ಭಾರತ, ಈ ಸಲ 4 ಚಿನ್ನ ಸೇರಿ 17 ಪದಕ ಬಾಚಿಕೊಂಡಿತು.
ಈ ಬಾರಿಯೂ ಚೀನಾ ನಂಬರ್ 1: 94 ಚಿನ್ನ ಸೇರಿ ಒಟ್ಟು 217 ಪದಕ
ಸತತ 6ನೇ ಪ್ಯಾರಾಲಿಂಪಿಕ್ಸ್‌ನಲ್ಲೂ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಈ ಸಲ ಚೀನಾದ ಕ್ರೀಡಾಪಟುಗಳು ಬರೋಬ್ಬರಿ 94 ಚಿನ್ನ, 74 ಬೆಳ್ಳಿ ಹಾಗೂ 49 ಕಂಚಿನ ಪದಕದೊಂದಿಗೆ ಒಟ್ಟು 217 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಗ್ರೇಟ್ ಬ್ರಿಟನ್ 47 ಚಿನ್ನದೊಂದಿಗೆ ಒಟ್ಟು 120 ಪದಕ ಗೆದ್ದು 2ನೇ ಸ್ಥಾನಿಯಾದರೆ, ಅಮೆರಿಕ 36 ಚಿನ್ನದೊಂದಿಗೆ 102 ಪದಕ ಗೆದ್ದು ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿತು.
ಲಾಸ್ ಏಂಜಲೀಸ್‌ನಲ್ಲಿ ಮುಂದಿನ ಪ್ಯಾರಾಲಿಂಪಿಕ್ಸ್
2028ರ ಪ್ಯಾರಾಲಿಂಪಿಕ್ಸ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ರಾಷ್ಟ್ರವೇ ಪ್ಯಾರಾಲಿಂಪಿಕ್ಸ್ ಆಯೋಜಿಸಬೇಕೇಂಬ ನಿಯಮವಿದೆ. 2028ರ ಒಲಿಂಪಿಕ್ಸ್ ಆತಿಥ್ಯ ಹಕ್ಕು ಲಾಸ್ ಏಂಜಲೀಸ್ ಪಡೆದಿರುವುದರಿಂದ ಪ್ಯಾರಾಲಿಂಪಿಕ್ಸ್ ಕೂಡಾ ಅಲ್ಲೇ ನಡೆಯಲಿದೆ.