The Paris Olympics 2024 ended with a high profile closing ceremony: 17 ದಿನಗಳ ಕಾಲ ಅದ್ಧೂರಿಯಾಗಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. 33ನೇ ಆವೃತ್ತಿಯ ಒಲಿಂಪಿಕ್ಸ್ ಭಾನುವಾರ ಸಂಜೆ ಮುಕ್ತಾಯಗೊಂಡಿದ್ದು, ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: ‘ಕ್ರೀಡಾ ಕುಂಭಮೇಳ’ ಎಂದೇ ಕರೆಸಿಕೊಳ್ಳುವ ಜಾಗತಿಕ ಮಟ್ಟದ ಅತಿ ದೊಡ್ಡ ಕ್ರೀಡಾ ಹಬ್ಬ ಒಲಿಂಪಿಕ್ಸ್‌ಗೆ ತೆರೆ ಬಿದ್ದಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ 33ನೇ ಆವೃತ್ತಿಯ ಒಲಿಂಪಿಕ್ಸ್ ಭಾನುವಾರ ಸಂಜೆ ಮುಕ್ತಾಯಗೊಂಡಿತು. ಕೆಲವು ಹೊಸತನ, ಹಲವು ವಿವಾದಗಳ ನಡುವೆಯೂ ಫ್ರಾನ್ಸ್ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿತು.
ಜು.26ರಂದು ಸೀನ್ ನದಿಯ ಮೇಲೆ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಲಭಿಸಿತ್ತು. 17 ದಿನಗಳ ಕಾಲ ನಗರದ ವಿವಿಧ ಕ್ರೀಡಾಂಗಣಗಳಲ್ಲಿ ಗೇಮ್ಸ್ ಆಯೋಜನೆಗೊಂಡಿತ್ತು. ಭಾನುವಾರ ರಾತ್ರಿ ಪ್ಯಾರಿಸ್ ನಗರದಲ್ಲಿರುವ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಗೇಮ್ಸ್‌ನ ಮುಕ್ತಾಯನ್ನು ಘೋಷಿಸಲಾಯಿತು.
ಒಟ್ಟು 206 ದೇಶಗಳ 10,700ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಒಟ್ಟು 32 ಕ್ರೀಡೆಗಳ 339 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಪ್ಯಾರಿಸ್ ಹಾಗೂ ಇತರ ಕಡೆಗಳ ಒಟ್ಟು 35 ಕ್ರೀಡಾಂಗಣಗಳು ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದವು. ಪ್ರತಿ ಆವೃತ್ತಿಯಂತೆ ಈ ಬಾರಿಯೂ ಅಮೆರಿಕ, ಚೀನಾ ಅಥ್ಲೀಟ್‌ಗಳೇ ಪದಕ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ಆತಿಥೇಯ ರಾಷ್ಟ್ರ ಫ್ರಾನ್ಸ್, ಜಪಾನ್, ಬ್ರಿಟನ್, ಆಸ್ಟ್ರೇಲಿಯಾ ಕೂಡಾ ಪದಕ ಗೆಲುವಿನಲ್ಲಿ ಹಿಂದೆ ಬೀಳಲಿಲ್ಲ.
ಪಾಕ್ 'ಭರ್ಜಿ ಬಾಹುಬಲಿ' ಚಿನ್ನ ಗೆಲ್ಲಲು ಕಾರಣ ನಮ್ಮ ಗೋಲ್ಡನ್ ಬಾಯ್ ನೀರಜ್ ಚೋಪ್ರಾ!
ಲಾಸ್ ಏಂಜಲೀಸ್‌ನಲ್ಲಿ 2028ರ ಒಲಿಂಪಿಕ್ಸ್
ಮುಂದಿನ ಆವೃತ್ತಿಯ ಒಲಿಂಪಿಕ್ ಕ್ರೀಡಾಕೂಟ 2008ರಲ್ಲಿ ಅಮೆರಿಕ ಲಾಸ್ ಏಂಜಲೀಸ್‌ಲ್ಲಿ ನಡೆಯಲಿದೆ. ಈ ಮೂಲಕ 5ನೇ ಬಾರಿ ಅಮೆರಿಕ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ. ಈ ಮೊದಲು 1904ರಲ್ಲಿ ಸೇಂಟ್ ಲೂಯಿಸ್, 1932 ಹಾಗೂ 1984ರಲ್ಲಿ ಲಾಸ್ ಏಂಜಲೀಸ್, 1996ರಲ್ಲಿ ಅಟ್ಲಾಂಟಾದಲ್ಲಿ ಗೇಮ್ಸ್ ನಡೆದಿತ್ತು.
ಆರಂಭದಿಂದ ಕೊನೆವರೆಗೂ ಸಾಲು ಸಾಲು ವಿವಾದಗಳು
ಈ ಬಾರಿ ಕ್ರೀಡಾಕೂಟ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿತು. ಒಲಿಂಪಿಕ್ಸ್‌ಗೂ ಮುನ್ನವೇ ನ್ಯೂಜಿಲೆಂಡ್ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯರು ಅಭ್ಯಾಸ ನಡೆಸುತ್ತಿದ್ದಾಗ, ಅದರ ದೃಶ್ಯಗಳನ್ನು ಕೆನಡಾ ತಂಡ ಡ್ರೋನ್ ಕ್ಯಾಮರಾ ಮೂಲಕ ಸೆರೆ ಹಿಡಿದಿದ್ದು ವಿವಾದವಾಗಿತ್ತು. ಉದ್ಘಾಟನಾ ಸಮಾರಂಭದ ಪಥಸಂಚಲನದ ವೇಳೆ ಆಯೋಜಕರು ದಕ್ಷಿಣ ಕೊರಿಯಾವನ್ನು ಉತ್ತರ ಕೊರಿಯಾದ ಹೆಸರಿನಲ್ಲಿ ಸಂಬೋಧಿಸಿದ್ದು ದ.ಕೊರಿಯಾದ ಆಕ್ರೋಶಕ್ಕೆ ಕಾರಣವಾಯಿತು. ಉದ್ಘಾಟನೆಯ ವೇಳೆ ಪ್ರದರ್ಶಿಸಿದ ಟ್ಯಾಬ್ಲೋಗಳು ಧಾರ್ಮಿಕ ನಂಬಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟೀಕೆಗೆ ಗುರಿಯಾಯಿತು. ಅಂಪೈರಿಂಗ್‌ನಲ್ಲಿ ತಾರತಮ್ಯದ ಬಗ್ಗೆ ವಿವಿಧ ದೇಶಗಳ ಅಥ್ಲೀಟ್‌ಗಳಿಂದ ದೂರುಗಳು ಕೇಳಿ ಬಂದವು.
Paris Olympics 2024: ಬ್ರೇಕ್ ಡ್ಯಾನ್ಸ್ ಸ್ಪರ್ಧೆ ವೇಳೆ ಫ್ರೀ ಆಫ್ಘನ್ ವುಮೆನ್ ಬಟ್ಟೆ ಧರಿಸಿದ ಅಥ್ಲೀಟ್ ಅನರ್ಹ!
ಅಲ್ಜೇರಿಯಾದ ಬಾಕ್ಸರ್ ಇಮಾನೆ ಖೆಲಿಫ್‌ರ ಲಿಂಗತ್ವ ವಿಚಾರ ಪರ-ವಿರೋಧ ಚರ್ಚೆಗಳಿಗೆ ಎಡೆಮಾಡಿಕೊಟ್ಟರೆ, ಆಸ್ಟ್ರೇಲಿಯಾ ಹಾಕಿ ತಂಡದ ಆಟಗಾರನೋರ್ವ ಮಾದಕ ವಸ್ತು ಖರೀದಿ ವೇಳೆ ಸಿಕ್ಕಿ ಬಿದ್ದಿದ್ದು ಮತ್ತೊಂದು ವಿವಾದ. ಇನ್ನು, ಸೀನ್ ನದಿ ಈಜಲು ಯೋಗ್ಯ ಎಂದು ಫ್ಯಾರಿಸ್ ಆಡಳಿತ ಹೇಳಿತ್ತಾದರೂ, ನದಿಯಲ್ಲಿ ನಡೆದ ಸ್ಪರ್ಧೆ ಬಳಿಕ ಹಲವು ಅಥ್ಲೀಟ್‌ಗಳು ಅಸ್ವಸ್ಥಗೊಂಡು, ವಾಂತಿ ಮಾಡುವಂತಾಯಿತು. ಇದೇ ವೇಳೆ, ಅಥ್ಲೀಟ್‌ಗಳು ಉಳಿದುಕೊಳ್ಳಲು ನಿರ್ಮಿಸಿದ್ದ ಕ್ರೀಡಾ ಗ್ರಾಮದಲ್ಲಿನ ವ್ಯವಸ್ಥೆಗಳ ಬಗ್ಗೆಯೂ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.