ಕೊರೋನಾ ವೈರಸ್ ಭೀತಿ ನಡುವೆ ಪ್ರತಿಷ್ಠಿತ ಟೊಕಿಯೋ ಒಲಿಂಪಿಕ್ಸ್ ಕೂಟಕ್ಕೆ ಚಾಲನೆ ಸಿಕ್ಕಿದೆ. ಒಲಿಂಪಿಕ್ಸ್ ಜ್ಯೋತಿಯನ್ನು ಆಯೋಜಕರಿಗೆ ಹಸ್ತಾಂತರಿಸಲಾಗಿದೆ. ಹಲವು ನಿರ್ಬಂಧಗಳ ನಡುವೆ ಜ್ಯೋತಿ ಹಸ್ತಾಂತರಿಸಲಾಗಿದೆ.
ಅಥೆನ್ಸ್(ಮಾ.20): ಒಲಿಂಪಿಕ್ ಜ್ಯೋತಿಯನ್ನು ಗುರುವಾರ ಗ್ರೀಸ್ 2020ರ ಟೋಕಿಯೋ ಒಲಿಂಪಿಕ್ಸ್ ಆಯೋಜಕರಿಗೆ ಹಸ್ತಾಂತರಿಸಿತು. 1896ರಲ್ಲಿ ಚೊಚ್ಚಲ ಒಲಿಂಪಿಕ್ಸ್ ಕ್ರೀಡಾಕೂಟ ನಡೆದ ಪ್ಯಾನಾಥೆನಿಯಾಕ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು. ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿರಲಿಲ್ಲ.
ಕೊರೋನಾ ಆತಂಕವಿದ್ದರೂ ಒಲಿಂಪಿಕ್ಸ್ ನಡೆದರೆ ಭಾರತದ ಸ್ಪರ್ಧೆ ಖಚಿತ!
ಗ್ರೀಸ್‌ನ ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ ಲೆಫ್ಟ್‌ಎರಿಸ್ ಪೆಟ್ರೊಯುನಿಯಾಸ್ ಜ್ಯೋತಿ ಹಿಡಿದು ಒಂದು ಸುತ್ತು ಓಡಿದರು. ಬಳಿಕ ಒಲಿಂಪಿಕ್ ಪೋಲ್ ವಾಲ್ಟ್ ಚಾಂಪಿಯನ್ ಕ್ಯಾಥರೀನಾ ಸ್ಟೆಫಾನಿಡಿ ಜ್ಯೋತಿಯನ್ನು ಬೆಳಗಿಸಿದರು. ಬಳಿಕ ಜ್ಯೋತಿಯನು ಟೋಕಿಯೋ ಗೇಮ್ಸ್‌ನ ಪ್ರತಿನಿಧಿ, ಜಪಾನ್‌ನ ಮಾಜಿ ಈಜುಪಟು ನೊವೊಕೊ ಇಮೊಟೊಗೆ ಹಸ್ತಾಂತರಿಸಲಾಯಿತು.
ಇಮೊಟೊ 1996 ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಇಮೊಟೊ ಗ್ರೀಸ್‌ನಲ್ಲೇ ವಾಸಿಸುವ ಕಾರಣ ಅವರನ್ನು ಕೊನೆ ಕ್ಷಣದಲ್ಲಿ ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೇಳಿಕೊಳ್ಳಲಾಯಿತು. ಕೊರೋನಾ ಸೋಂಕಿನ ಭೀತಿಯಿಂದಾಗಿ ಜಪಾನ್‌ನಿಂದ ಯಾರೊಬ್ಬರು ಗ್ರೀಸ್‌ಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ ಎಂದು ಟೋಕಿಯೋ ಒಲಿಂಪಿಕ್ಸ್ ಆಯೋಜನಾ ಸಮಿತಿ ತಿಳಿಸಿದೆ.