ಕಂಠೀರವ ಟ್ರ್ಯಾಕ್‌ ರಿಪೇರಿಯಲ್ಲೂ ಎಡವಟ್ಟು!

By Kannadaprabha News  |  First Published Mar 10, 2020, 5:45 PM IST

ಕಂಠೀರವ ಕ್ರೀಡಾಂಗಣದ ಎಡವಟ್ಟು ಮತ್ತೊಮ್ಮೆ ಜಗ್ಗಜ್ಜಾಹೀರಾಗಿದೆ. ಟ್ರ್ಯಾಕ್‌ ಸಾಮಾಗ್ರಿ ಬರುವ ಮೊದಲೇ ಪ್ರಸ್ತುತ ಇರುವ ಟ್ರ್ಯಾಕ್‌ ಅನ್ನು ಕೀಳುವ ಕಾರ್ಯವನ್ನು ಆರಂಭಿಸಲಾಗುತ್ತಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.


ಧನಂಜಯ್.ಎಸ್. ಹಕಾರಿ

ಬೆಂಗಳೂರು(ಮಾ.10): ರಾಜ್ಯದ ಕಂಠೀರವ ಕ್ರೀಡಾಂಗಣದಲ್ಲಿ ಅಂತೂ ಇಂತೂ ಹೊಸದಾಗಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುವ ಕಾರ್ಯಕ್ಕೆ ಸೋಮವಾರ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್‌ ಚಾಲನೆ ನೀಡಿದರು. ಆದರೆ ಟ್ರ್ಯಾಕ್‌ ರಿಪೇರಿ ಕಾರ್ಯದಲ್ಲೂ ಇಲಾಖೆ ಎಡವಟ್ಟು ಮಾಡುತ್ತಿದೆ. ಹೊಸದಾಗಿ ಅಳವಡಿಸುವ ಟ್ರ್ಯಾಕ್‌ ಅನ್ನು ಇಟಲಿಯಿಂದ ತರಿಸಲಾಗುತ್ತಿದೆ. ಆದರೆ ಕೊರೋನಾ ಸೋಂಕಿನಿಂದಾಗಿ ಆಮದು ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಟ್ರ್ಯಾಕ್‌ ಸಾಮಾಗ್ರಿ ಬರುವ ಮೊದಲೇ ಪ್ರಸ್ತುತ ಇರುವ ಟ್ರ್ಯಾಕ್‌ ಅನ್ನು ಕೀಳುವ ಕಾರ್ಯವನ್ನು ಆರಂಭಿಸಲಾಗುತ್ತಿದೆ.

Tap to resize

Latest Videos

ಒಂದೂವರೆ ತಿಂಗಳು ಬೇಕು

ನೂತನ ಸಿಂಥೆಟಿಕ್‌ ಟ್ರ್ಯಾಕ್‌ನ ಅಳವಡಿಕೆಗೆ ರಾಜ್ಯ ಸರ್ಕಾರ ಸುಮಾರು 5 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿದೆ. ದೆಹಲಿ ಮೂಲದ ಅಡ್ವಾನ್ಸ್ಡ್ ಸ್ಪೋರ್ಟ್‌ ಟೆಕ್ನಾಲಜಿ ಸಂಸ್ಥೆ ಕಾಮಗಾರಿಯ ಜವಾಬ್ದಾರಿ ಹೊತ್ತಿದೆ. ಟ್ರ್ಯಾಕ್‌ ಸಾಮಾಗ್ರಿ ಬೆಂಗಳೂರು ತಲುಪಲು ಕನಿಷ್ಠ ಒಂದೂವರೆ ತಿಂಗಳಾದರೂ ಬೇಕು, ಆದರೆ ಕೊರೋನಾ ಸೋಂಕಿನಿಂದಾಗಿ ಇನ್ನೂ ತಡವಾಗಬಹುದು ಎಂದು ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರು ಸುವರ್ಣ ನ್ಯೂಸ್.ಕಾಂ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕಂಠೀರವದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರಕ್ಕೆ ಡಿಸಿಎಂ ಚಾಲನೆ

ಮಳೆಗಾಲದಲ್ಲಿ ಟ್ರ್ಯಾಕ್‌ ಅಳವಡಿಕೆ?

ನೂತನ ಟ್ರ್ಯಾಕ್‌ ಅಳವಡಿಕೆಗೆ ಕನಿಷ್ಠ 130 ದಿನಗಳ ಸಮಯ ಬೇಕು ಎಂದು ಅಡ್ವಾನ್ಸ್ಡ್ ಸ್ಪೋರ್ಟ್ಸ್ ಟೆಕ್ನಾಲಜಿ ಸಂಸ್ಥೆ ತಿಳಿಸಿದೆ. ಟ್ರ್ಯಾಕ್‌ ಸಾಮಾಗ್ರಿ ಬೆಂಗಳೂರು ತಲುಪುವ ಮೊದಲೇ ಮಳೆ ಆರಂಭವಾದರೆ ಕಾಮಗಾರಿ ಮತ್ತಷ್ಟು ತಡವಾಗಲಿದೆ. ಇಲಾಖೆ ಮೂಲಗಳ ಪ್ರಕಾರ ನೂತನ ಟ್ರ್ಯಾಕ್‌ ಸಿದ್ಧಗೊಳ್ಳಲು ಕನಿಷ್ಠ 6ರಿಂದ 7 ತಿಂಗಳಾದರೂ ಬೇಕು. ಹೊಸ ಟ್ರ್ಯಾಕ್‌ ಅಳವಡಿಕೆ ಮಾಡುತ್ತೇವೆ ಎಂದು ಕ್ರೀಡಾ ಇಲಾಖೆ 10 ತಿಂಗಳ ಹಿಂದೆ ಹೇಳಿತ್ತು.

ಕ್ರೀಡಾಕೂಟಗಳಿಗೆ ತಡೆ!

ಮುಂದಿನ 6 ರಿಂದ 8 ತಿಂಗಳುಗಳ ಕಾಲ ಕಂಠೀರವ ಕ್ರೀಡಾಂಗಣದಲ್ಲಿ ಯಾವುದೇ ಅಥ್ಲೆಟಿಕ್ಸ್‌ ಕ್ರೀಡಾಕೂಟಗಳು ನಡೆಸಲು ಸಾಧ್ಯವಿಲ್ಲ. ಕ್ರೀಡಾಕೂಟಗಳನ್ನು ಬೇರೆ ಊರುಗಳಿಗೆ ಸ್ಥಳಾಂತರಿಸಲು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ(ಕೆಎಎ) ಗಂಭೀರ ಚಿಂತನೆ ನಡೆಸಿದೆ. ಮಾ.20 ಹಾಗೂ 21ರಂದು ಕಂಠೀರವದಲ್ಲಿ ನಡೆಯಬೇಕಿದ್ದ ಅಂಡರ್‌-20 ರಾಜ್ಯ ಅಥ್ಲೆಟಿಕ್ಸ್‌ ಕ್ರೀಡಾಕೂಟವನ್ನು ಮಾ.21, 22ರಂದು ಉಡುಪಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜೂ.25ರಿಂದ 28ರ ವರೆಗೂ 60ನೇ ರಾಷ್ಟ್ರೀಯ ಹಿರಿಯರ ಅಂತರ್‌ ರಾಜ್ಯ ಕ್ರೀಡಾಕೂಟವನ್ನು ಹೊಸ ಟ್ರ್ಯಾಕ್‌ನಲ್ಲಿ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕೆಎಎ ಕಾರ‍್ಯದರ್ಶಿ ರಾಜವೇಲು ತಿಳಿಸಿದ್ದಾರೆ. ಆದರೆ ಕ್ರೀಡಾಕೂಟ ಕಂಠೀರವದಲ್ಲಿ ನಡೆಯುವುದು ಅನುಮಾನವೆನಿಸಿದೆ.

ಬೆಂಗಳೂರಿನ ಕಂಠೀರವದ ಸಿಂಥೆಟಿಕ್‌ ಟ್ರ್ಯಾಕ್‌ ಮತ್ತಷ್ಟು ವಿಳಂಬ?

ಅಭ್ಯಾಸಕ್ಕೆ ಗುಂಡಿ ಬಿದ್ದಿರುವ 200 ಮೀ. ಟ್ರ್ಯಾಕ್‌ ಬಳಸಿ!

ಕಂಠೀರವ ಕ್ರೀಡಾಂಗಣದಲ್ಲಿರುವ 400 ಮೀ. ಟ್ರ್ಯಾಕ್‌ ಗುಂಡಿ ಬಿದ್ದು ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆಯಾಗಿತ್ತು ಎನ್ನುವ ಕಾರಣಕ್ಕೆ ಹೊಸ ಟ್ರ್ಯಾಕ್‌ ಅಳವಡಿಸಲು ಕ್ರೀಡಾ ಇಲಾಖೆ ಮುಂದಾಗಿದೆ. ಹೊಸ ಟ್ರ್ಯಾಕ್‌ ಅಳವಡಿಕೆಯಾಗಲು ಕನಿಷ್ಠ 6ರಿಂದ 8 ತಿಂಗಳ ಸಮಯ ಬೇಕು. ಅಲ್ಲಿಯವರೆಗೂ ಅಥ್ಲೀಟ್‌ಗಳಿಗೆ ಕ್ರೀಡಾಂಗಣದ ಆವರಣದಲ್ಲಿರುವ 200 ಮೀ. ಟ್ರ್ಯಾಕ್‌ ಬಳಸಲು ಸೂಚಿಸಲಾಗಿದೆ. ವಿಪರ್ಯಾಸ ಎಂದರೆ ಆ ಟ್ರ್ಯಾಕ್‌ ಕೂಡ ಗುಂಡಿ ಬಿದ್ದಿದೆ. 400 ಮೀ. ಟ್ರ್ಯಾಕ್‌ನಲ್ಲಿ ಪ್ರತಿ ದಿನ 250ಕ್ಕೂ ಹೆಚ್ಚು ಅಥ್ಲೀಟ್‌ಗಳು ಅಭ್ಯಾಸ ನಡೆಸುತ್ತಾರೆ. ಅಷ್ಟೊಂದು ಜನ 200 ಮೀ. ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಜಾವೆಲಿನ್‌ ಥ್ರೋ, ಡಿಸ್ಕಸ್‌ ಥ್ರೋ ಸೇರಿದಂತೆ ಇನ್ನೂ ಕೆಲ ಕ್ರೀಡೆಗಳ ಅಥ್ಲೀಟ್‌ಗಳಿಗೂ ಸಮಸ್ಯೆ ಎದುರಾಗಲಿದೆ.

ಕ್ರೀಡಾ ಇಲಾಖೆಯ ಕಾರ್ಯಕ್ಕೆ ಅಥ್ಲೀಟ್‌ಗಳು ಹಾಗೂ ಕೋಚ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಟ್ರ್ಯಾಕ್‌ ಅಳವಡಿಕೆಯಾಗುವ ವರೆಗೂ ಸೂಕ್ತ ಪರಾರ‍ಯಯ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.

ಹೊಸ ಟ್ರ್ಯಾಕ್‌ ಅಳವಡಿಕೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಗಿದೆ. 4 ತಿಂಗಳಿಗಿಂತ ಮುಂಚಿತವಾಗಿಯೇ ಟ್ರ್ಯಾಕ್‌ ಕಾರ್ಯ ಪೂರ್ಣಗೊಳಿಸುವ ವಿಶ್ವಾಸವಿದೆ. ಮಳೆ ಬಂದರೆ 2 ದಿನ ಕಾಮಗಾರಿ ನಿಲ್ಲಿಸಿ ನಂತರ ಆರಂಭಿಸಲಾಗುವುದು.

- ಶ್ರೀನಿವಾಸ್‌, ಕ್ರೀಡಾ ಇಲಾಖೆ ನಿರ್ದೇಶಕ

ಹೊಸದಾಗಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಆದರೆ ಅಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಮುಂಬರುವ ಕ್ರೀಡಾಕೂಟಗಳಿಗೆ ಸಿದ್ಧತೆ ನಡೆಸಲು ತೊಂದರೆಯಾಗದಂತೆ ಇಲಾಖೆ ನೋಡಿಕೊಳ್ಳಬೇಕು.

- ಹೆಸರು ಹೇಳಲಿಚ್ಚಿಸದ ಅಥ್ಲೀಟ್‌
 

click me!