ಕುಸ್ತಿಪಟುಗಳ ಪ್ರತಿಭಟನೆ ರಾಜಕೀಯ ತಿರುವು ಪಡೆದಿದೆ. ಇದೀಗ ರೈತ ಮುಖಂಡ ನರೇಶ್ ಟಿಕಾಯತ್ ಪ್ರತಿಭಟನೆ ರೂಪುರೇಶೆ ಬದಲಿಸಿದ್ದಾರೆ. ಕುಸ್ತಿಪಟುಗಳ ಬೇಡಿಕೆ ಈಡೇರದಿದ್ದರೆ ದೆಹಲಿ ಹಾಗೂ ರಾಷ್ಟ್ರರಾಜಧಾನಿ ವ್ಯಾಪ್ತಿಗೆ ಹಾಲು ಹಾಗೂ ತರಕಾರಿ ಪೂರೈಕೆ ಸ್ಥಗಿತಗೊಳಿಸುವುದಾಗಿ ವಾರ್ನಿಂಗ್ ನೀಡಿದ್ದಾರೆ.
ನವದೆಹಲಿ(ಮೇ.31) ಕುಸ್ತಿಪಟುಗಳ ಪ್ರತಿಭಟನೆಗೆ ಪರ ವಿರೋಧಗಳಿದ್ದರೂ ಇದುವರೆಗೆ ಕುಸ್ತಿಪಟುಗಳೇ ತಮ್ಮ ಮುಂದಿನ ಹೋರಾಟ ಘೋಷಣೆ ಮಾಡುತ್ತಿದ್ದರು.ಬಂಧನ ಆಗ್ರಹಿಸಿ ಪ್ರತಿಭಟನೆ, ಸಂಸತ್ ಚಲೋ, ಪದಕಗಳನ್ನು ಗಂಗಾ ನದಿಗೆ ಎಸೆಯುವ ಮೂಲಕ ಪ್ರತಿಭಟನೆ ಸೇರಿದಂತೆ ಹಲವು ಆಂದೋಲನ ನಡೆಸಿದ್ದಾರೆ. ಇದೀಗ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ರೈತ ಮುಖಂಡರ ಘೋಷಣೆ ಶುರುವಾಗಿದೆ. ಪದಕ ನದಿಗೆ ಎಸೆಯುವ ಪ್ರತಿಭಟನೆ ವೇಳೆ ಪ್ರತ್ಯಕ್ಷವಾದ ರೈತ ಮುಖಂಡ, ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್, ಇದೀಗ ಬೇಡಿಕೆ ಈಡೇರದಿದ್ದರೆ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಗೆ ಹಾಲು ಹಾಗೂ ತರಕಾರಿ ಪೂರೈಕೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಜೂನ್ 5 ರಂದು ದೆಹಲಿ ಗಡಿ ಘೇರಾವ್ ಹೋರಾಟ ಆರಂಭಿಸುವುದಾಗಿ ನರೇಶ್ ಟಿಕಾಯತ್ ಘೋಷಿಸಿದ್ದಾರೆ. ಕುಸ್ತಿಪಟುಗಳು ಪದಕವನ್ನು ಗಂಗಾ ನದಿಗೆ ಎಸೆದು ಪ್ರತಿಭಟನೆ ಮಾಡುವ ನಿರ್ಧಾರದಿಂದ 5 ದಿನಗಳ ಕಾಲ ಹಿಂದೆ ಸರಿದಿದ್ದಾರೆ. ಅವರಿಗೆ 5 ದಿನದ ಕಾಲಾವಕಾಶ ಕೊಡುವಂತೆ ಮನವಿ ಮಾಡಿ ಪದಕ ನದಿಗೆ ಎಸೆಯುವುದನ್ನು ತಡೆದಿದ್ದೇನೆ. ಜೂನ್ 5ರೊಳಗೆ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಂಧನವಾಗದಿದ್ದರೆ, ಹರಿದ್ವಾರಕ್ಕೆ ತೆರಳಿ ಪದಕ ಗಂಗಾ ನದಿಗೆ ಎಸೆಯುವುದಾಗಿ ನರೇಶ್ ಟಿಕಾಯತ್ ಘೋಷಿಸಿದ್ದಾರೆ. ಇದೇ ವೇಳೆ ಕುಸ್ತಿಪಟುಗಳು ದೆಹಲಿ ಗಡಿ ಘೇರಾವ್ ಪ್ರತಿಭಟನೆ ಆರಂಭಿಸಲಿದ್ದಾರೆ. ಜೂನ್ 5 ರಿಂದ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಗೆ ಹಾಲು ಹಾಗೂ ತರಕಾರಿ ಪೂರೈಕೆಗೆ ಅವಕಾಶ ನೀಡುವುದಿಲ್ಲ ಎಂದು ನರೇಶ್ ಟಿಕಾಯತ್ ಹೇಳಿದ್ದಾರೆ.
undefined
ನಿರ್ಲಜ್ಜತೆಯ ವಿರಾಟರೂಪ, ಬೇಸರ ತರುತ್ತೆ; ಮಹಿಳಾ ರೆಸ್ಲರ್ ಎಳೆದಾಟಕ್ಕೆ ಕವಿರಾಜ್, ಸುನಿ ಅಸಮಧಾನ
ದೇಶಕ್ಕೆ ಪದಕ ತಂದ ಕುಸ್ತಿಪಟುಗಳು ಬೀದಿಯಲ್ಲಿ ಕುಳಿತು ಹೋರಾಟ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಇವರ ಪ್ರತಿಭಟನೆಗೆ ಸೊಪ್ಪು ಹಾಕಿಲ್ಲ. ಬದಲಾಗಿ ಬ್ರಿಜ್ ಭೂಷಣ್ ಸಿಂಗ್ ರಕ್ಷಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಹಲವು ಕಾರಣಗಳನ್ನು ನೀಡಿ ಬಂಧನದಿಂದ ಬಚಾವ್ ಮಾಡಿದ್ದಾರೆ. ಕುಸ್ತಿಪಟುಗಳು ದೇಶಾದ್ಯಂತ ಬೆಂಬಲ ವ್ಯಕ್ತವಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಧೋರಣೆ ಇದೀಗ ದೇಶದ ಜನರಿಗೆ ಅರ್ಥವಾಗಿದೆ ಎಂದು ನರೇಶ್ ಟಿಕಾಯತ್ ಹೇಳಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಬ್ರಿಜ್ ಭೂಷಣ್ ಬಂಧಿಸಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ರಿಜ್‌ಭೂಷಣ್‌ರನ್ನು ಬಂಧಿಸದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ತಾವು ಈ ಹಿಂದೆ ಗೆದ್ದ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಒಲಿಂಪಿಕ್ಸ್‌ನ ಪದಕಗಳನ್ನು ಗಂಗಾ ನದಿಗೆ ಎಸೆಯುವ ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದಕ್ಕಾಗಿ ಕುಸ್ತಿಪಟುಗಳು ಹರಿದ್ವಾರ ತಲುಪಿದ್ದರು. ಈ ವೇಳೆ ರೈತ ಹೋರಾಟಗಾರ ನರೇಶ್ ಟಿಕಾಯತ್ ಮುಂತಾದವರು ಐದು ದಿನದಲ್ಲಿ ಸಮಸ್ಯೆಗೆ ಪರಿಹಾರ ದೊರಕಿಸುವ ಭರವಸೆ ನೀಡಿ ಪದಕ ಎಸೆಯದಂತೆ ಮನವೊಲಿಸಿದರು. ಅದರಂತೆ ಪದಕ ಎಸೆತ ನಿರ್ಧಾರ ಕೈಬಿಟ್ಟಕುಸ್ತಿಪಟುಗಳು, ಶೀಘ್ರದಲ್ಲೇ ದೆಹಲಿಯ ಇಂಡಿಯಾ ಗೇಟ್ ಬಳಿ ಆಮರಣ ಉಪವಾಸ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಟಿಕಾಯತ್ ಎಂಟ್ರಿಯಿಂದ ಕುಸ್ತಿಪಟು ಪ್ರತಿಭಟೆನೆಯಲ್ಲಿ ಯು ಟರ್ನ್, ಪದಕ ನದಿಗೆ ಎಸೆಯುವ ಹೋರಾಟಕ್ಕೆ ಬ್ರೇಕ್!