
ಪ್ಯಾರಿಸ್: ಈ ಬಾರಿ ಚಿನ್ನದ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ತಾರಾ ಶಟ್ಲರ್ ಸುಹಾಸ್ ಯತಿರಾಜ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಸೋಮವಾರ ಪುರುಷರ ಎಸ್‌ಎಲ್4 ವಿಭಾಗದ ಫೈನಲ್‌ನಲ್ಲಿ ಕರ್ನಾಟಕದ 41 ವರ್ಷದ ಸುಹಾಸ್ ಫ್ರಾನ್ಸ್‌ನ ಲುಕಾಸ್ ಮಾಜುರ್ ವಿರುದ್ಧ 9-21, 13-21ರಲ್ಲಿ ಸೋಲನುಭವಿಸಿದರು. ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಸುಕಾಂತ್ ಕದಂ ವಿರುದ್ಧ ಜಯಗಳಿಸಿದ್ದ ಸುಹಾಸ್‌ಗೆ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗಲಿಲ್ಲ.
ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಬೆಳ್ಳಿ ಪದಕ ಗೆದ್ದಿದ್ದರು. ಟೋಕಿಯೋದಲ್ಲೂ ಲುಕಾಸ್ ವಿರುದ್ಧವೇ ಫೈನಲ್‌ನಲ್ಲಿ ಸೋಲು ಎದುರಾಗಿತ್ತು. ಈ ಬಾರಿ ಸೇಡು ತೀರಿಸಿ, ಚಿನ್ನ ಗೆಲ್ಲುವ ಸುಹಾಸ್ ಕನಸು ನನಸಾಗಲಿಲ್ಲ.
ಅಂಕವೈಕಲ್ಯವನ್ನು ಮೆಟ್ಟಿನಿಂತು ಸಾಧನೆ ಶಿಖರವೇರಿದ ಸುಹಾಸ್
ಸಾಧಿಸಬೇಕೆಂಬ ಛಲವಿದ್ದರೆ ಏನನ್ನೂ ಮಾಡಬಹುದು ಎಂಬುದಕ್ಕೆ ಸುಹಾಸ್ ಸಾಕ್ಷಿ. 1983ರಲ್ಲಿ ಹಾಸನದಲ್ಲಿ ಹುಟ್ಟಿದ್ದ ಸುಹಾಸ್, ಬೆಳೆದದ್ದು ಶಿವಮೊಗ್ಗದಲ್ಲಿ. ಹುಟ್ಟುವಾಗಲೇ ಅವರಿಗೆ ಕಾಲಿನಲ್ಲಿ ನ್ಯೂನ್ಯತೆಯಿತ್ತು. ಬಲಗಾಲಿನ ಪಾದ ಊದಿಕೊಂಡಿತ್ತು. ಹಾಸನ, ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಸುಹಾಸ್, 2007ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಸದ್ಯ ಅವರು ಉತ್ತರ ಪ್ರದೇಶದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. 2016ರಲ್ಲಿ ಮೊದಲ ಬಾರಿ ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದಿದ್ದ ಸುಹಾಸ್ ಬಳಿಕ ಪ್ಯಾರಾಲಿಂಪಿಕ್ಸ್‌ನಲ್ಲಿ 2, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದು ಹಾಗೂ ಪ್ಯಾರಾ ಏಷ್ಯಾಡ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ
ಇದೀಗ ಸುಹಾಸ್ ಯತಿರಾಜ್, ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಂಚಿನ ಪದಕ ಪಂದ್ಯದಲ್ಲಿ ಸೋತ ನಿತ್ಯಾ-ಶಿವರಾಜನ್
ಬ್ಯಾಡ್ಮಿಂಟನ್‌ನ ಮಿಶ್ರ ಡಬಲ್ಸ್ ಎಸ್‌ಎಚ್6 ವಿಭಾಗದ ಕಂಚಿನ ಪದಕ ಪಂದ್ಯದಲ್ಲಿ ಭಾರತದ ನಿತ್ಯಾ-ಶಿವರಾಜನ್ ಸೋಮವಾರ ಇಂಡೋನೇಷ್ಯಾದ ಸುಭಾನ್-ರಿನಾ ಜೋಡಿ ವಿರುದ್ಧ 17-21, 12-21ರಲ್ಲಿ ಸೋಲನುಭವಿಸಿದರು.
ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ 7 ತಿಂಗಳ ಗರ್ಭಿಣಿ..! ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ..!
ಇನ್ನು, ಮಹಿಳೆಯರ ಎಸ್‌ಎಚ್6 ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ನಿತ್ಯಾ ಅವರು ಚೀನಾದ ಶುವಾಂಗ್‌ಬೊ ವಿರುದ್ಧ 13-21, 19-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಅವರು ಮಂಗಳವಾರ ಕಂಚಿನ ಪದಕ ಪಂದ್ಯದಲ್ಲಿ ಇಂಡೋನೇಷ್ಯಾದ ಮಾರ್ಲಿನಾ ರಿನಾ ವಿರುದ್ಧ ಸೆಣಸಾಡಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.