ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 7 ತಿಂಗಳ ತುಂಬು ಗರ್ಭಿಣಿ ಪದಕ ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಈಗಾಗಲೇ ಬದುಕನ್ನೇ ಗೆದ್ದವರ ನಡುವಿನ ಹೋರಾಟ ಎನಿಸಿಕೊಂಡಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಹಲವು ಸ್ಪೂರ್ತಿದಾಯಕ ಚಾಂಪಿಯನ್ನರಿಗೆ ಸಾಕ್ಷಿಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್‌ನಲ್ಲಿ ಬರುವ ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ ಎನ್ನುವ ಪ್ರಖ್ಯಾತ ಡೈಲಾಗ್ ಕೇಳಿದ್ದೇವೆ. ಅದೇ ರೀತಿ ಇದೀಗ ಬ್ರಿಟನ್ ಮೂಲದ 7 ತಿಂಗಳು ಗರ್ಭಿಣಿ ಆರ್ಚರಿ ಪಟು ಇದೀಗ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಹೌದು, ಗ್ರೇಟ್ ಬ್ರಿಟನ್ ಮಹಿಳಾ ಆರ್ಚರಿ ಪಟು ಜೂಡಿ ಗ್ರಿನ್‌ಹ್ಯಾಮ್, ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲೇ ಪದಕ ಗೆದ್ದ ಮೊದಲ ಗರ್ಭಿಣಿ ಮಹಿಳೆ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಮಹಿಳೆಯರ ವೈಯುಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಜೂಡಿ ಗ್ರಿನ್‌ಹ್ಯಾಮ್, ಕಂಚಿನ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಖುಷಿಯ ವಿಚಾರವನ್ನು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.

Scroll to load tweet…

"ಧೋನಿ ಕನ್ನಡಿಯಲ್ಲೊಮ್ಮೆ ತಮ್ಮ ಮುಖ ನೋಡಿಕೊಳ್ಳಲಿ": ಮತ್ತೆ ಮಹಿ ಮೇಲೆ ಕೆಂಡಕಾರಿದ ಯುವಿ ಅಪ್ಪ ಯೋಗರಾಜ್!

ಏಳು ತಿಂಗಳ ತುಂಬು ಗರ್ಭಿಣಿ, 31 ವರ್ಷದ ಜೂಡಿ ಗ್ರಿನ್‌ಹ್ಯಾಮ್, ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಪ್ರತಿಸ್ಪರ್ಧಿ ಹಾಗೂ ಗೆಳತಿಯೂ ಆಗಿರುವ ಫೋಬೆ ಪೀಟರ್‌ಸನ್ ಪೈನೆ ಎದುರು 142-141 ಕೂದಲೆಳೆ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪದಕ ಜಯಿಸಿದ ಬಳಿಕ ಮಾತನಾಡಿದ ಜೂಡಿ ಗ್ರಿನ್‌ಹ್ಯಾಮ್, "ನನಗೆ ನನ್ನ ಪ್ರದರ್ಶನದ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಈ ಹಂತಕ್ಕೆ ಬರುವ ಹಾದಿ ಸುಲಭವಾಗಿರಲಿಲ್ಲ. ನಾನು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಎಲ್ಲಿಯವರೆಗೆ ನಾನು ಆರೋಗ್ಯವಾಗಿರುತ್ತೇನೋ, ಮಗುವು ಆರೋಗ್ಯವಾಗಿರುತ್ತೋ ಅಲ್ಲಿಯವರೆಗೂ ನಾನು ಸ್ಪರ್ಧಿಸಬೇಕು ಅಂದುಕೊಂಡಿದ್ದೆ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ನೀಡಿದರೆ ಖಂಡಿತವಾಗಿಯೂ ಪದಕ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿತ್ತು" ಎಂದು ಜೂಡಿ ಗ್ರಿನ್‌ಹ್ಯಾಮ್ ಹೇಳಿದ್ದಾರೆ.