Korea Open 2022: ಪಿವಿ ಸಿಂಧು, ಕಿದಂಬಿ ಶ್ರೀಕಾಂತ್‌ಗೆ ಸೋಲು

By Kannadaprabha NewsFirst Published Apr 10, 2022, 8:26 AM IST
Highlights

* ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯ

* ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಪಿ ವಿ ಸಿಂಧು, ಕಿದಂಬಿ ಶ್ರೀಕಾಂತ್

* 2ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಪಿ.ವಿ.ಸಿಂಧು ಅವರ ಕನಸು ಭಗ್ನ

ಸಿಂಚೊನ್‌(ಏ.10): ಕೊರಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Korea Open Badminton Tournament) ಭಾರತದ ಶಟ್ಲರ್‌ಗಳ ಅಭಿಯಾನ ಸೆಮಿಫೈನಲ್‌ನಲ್ಲಿ ಕೊನೆಗೊಂಡಿದೆ. 2ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಪಿ.ವಿ.ಸಿಂಧು (PV Sindhu) ಅವರ ಕನಸು ಭಗ್ನಗೊಂಡಿದೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು, ದಕ್ಷಿಣ ಕೊರಿಯಾದ ಆನ್‌ ಸೆ ಯಂಗ್‌ ವಿರುದ್ಧ 14-21, 17-21 ಗೇಮ್‌ಗಳಲ್ಲಿ ಪರಾಭವಗೊಂಡರು. 20 ವರ್ಷದ ಯಂಗ್‌ ವಿರುದ್ಧ ಸಿಂಧುಗೆ ಇದು ಸತತ 4ನೇ ಸೋಲು.

ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ (Kidambi Srikanth), ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟೀ ಎದುರು 19-21, 16-21 ಗೇಮ್‌ಗಳಿಂದ ಸೋಲನುಭವಿಸಿದರು. ಮೊದಲ ಗೇಮ್‌ನಲ್ಲಿ ಜೊನಾಥನ್ ಕ್ರಿಸ್ಟೀ ಎದುರು ಶ್ರೀಕಾಂತ್ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದರು, ಆದರೆ ಆ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಇಂಡೋನೇಷ್ಯಾದ ಶಟ್ಲರ್ ಯಶಸ್ವಿಯಾದರು. ಕೇವಲ 50 ನಿಮಿಷ ನಡೆದ ಕಾದಾಟದಲ್ಲಿ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು. ಶ್ರೀಕಾಂತ್‌ ಇತ್ತೀಚೆಗೆ ನಡೆದ ಸ್ವಿಸ್‌ ಓಪನ್‌ನಲ್ಲಿಯೂ (Swiss Open) ಕ್ರಿಸ್ಟೀ ವಿರುದ್ಧ ಸೆಮೀಸ್‌ನಲ್ಲಿ ಸೋತಿದ್ದರು. ಇದೀಗ ಮತ್ತೊಮ್ಮೆ ಶ್ರೀಕಾಂತ್‌ ಸೆಮೀಸ್‌ನಲ್ಲಿ ಮುಗ್ಗರಿಸಿದ್ದಾರೆ. 

ವಿಶ್ವ ಡಬಲ್ಸ್‌ ಸ್ಕ್ವಾಶ್‌: 2 ಪ್ರಶಸ್ತಿ ಗೆದ್ದ ಭಾರತ

ಗ್ಲಾಸ್ಗೋ: ಅವಳಿ ಮಕ್ಕಳಿಗೆ ಜನ್ಮ ನೀಡಿದ 6 ತಿಂಗಳೊಳಗಾಗಿ ಭಾರತದ ಸ್ಕ್ವಾಶ್ ತಾರೆ ದೀಪಿಕಾ ಪಳ್ಳಿಕಲ್‌ ವಿಶ್ವ ಡಬಲ್ಸ್‌ ಸ್ಕ್ವಾಶ್ ಚಾಂಪಿಯನ್‌ಶಿಪ್‌ನಲ್ಲಿ ಅವಳಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಶನಿವಾರ ನಡೆದ ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಸೌರವ್‌ ಘೋಷಲ್‌ ಜೊತೆಗೂಡಿ ಇಂಗ್ಲೆಂಡ್‌ನ ಆ್ಯಡ್ರಿಯಾನ್‌ ವಾಲ್ಲರ್‌ ಮತ್ತು ಅಲಿಸನ್‌ ವಾಟ​ರ್ಸ್‌ ಜೋಡಿ ವಿರುದ್ಧ 11-6, 11-8 ಅಂತರದಲ್ಲಿ ಜಯಗಳಿಸಿದರು. ಬಳಿಕ ನಡೆದ ಮಹಿಳಾ ವಿಭಾಗದ ಫೈನಲ್‌ನಲ್ಲಿ ಜೋಶ್ನಾ ಚಿನ್ನಪ್ಪ ಜೊತೆ ಸೇರಿ ಇಂಗ್ಲೆಂಡ್‌ನ ಸಾರಾ ಪೆರ್ರಿ-ವಾಟರ್ಸ್‌ ಜೋಡಿ ವಿರುದ್ಧ 11-9, 4-11, 11-8 ಅಂತರದಲ್ಲಿ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ರಾಷ್ಟ್ರೀಯ ಬಾಸ್ಕೆಟ್‌ಬಾಲ್‌: ಕರ್ನಾಟಕಕ್ಕೆ ಸೋಲು

ಚೆನ್ನೈ: 71ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿತು. ಶನಿವಾರ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡ 75-88 ಅಂಕಗಳ ಅಂತರದಲ್ಲಿ ಪರಾಭವಗೊಂಡಿತು. ರಾಜ್ಯದ ಪರ ಅಭಿಷೇಕ್‌ ಗೌಡ 22, ಹರೀಶ್‌ 18 ಅಂಕ ಗಳಿಸಿದರು. ಮಹಿಳಾ ವಿಭಾಗದ 5 ಮತ್ತು 8ನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಮಧ್ಯಪ್ರದೇಶ ವಿರುದ್ಧ 69-60 ಅಂಕಗಳಲ್ಲಿ ಜಯ ಸಾಧಿಸಿತು.

ಸತತ 2ನೇ ಫಿಫ್ಟಿಸಿಡಿಸಿದ ಸೂರ್ಯ

ಪುಣೆ: ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವುದನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಸೂರ್ಯಕುಮಾರ್‌ ಯಾದವ್‌, ಆರ್‌ಸಿಬಿ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದರು. ಈ ಆವೃತ್ತಿಯಲ್ಲಿ ಸತತ 2ನೇ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. 79 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ತಂಡವನ್ನು 150 ರನ್‌ ತಲುಪಿಸಿದರು. ಕೇವಲ 37 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್‌ನೊಂದಿಗೆ 68 ರನ್‌ ಸಿಡಿಸಿ ಔಟಾಗದೆ ಉಳಿದರು. ಕಳೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ 36 ಎಸೆತಗಳಲ್ಲಿ 52 ರನ್‌ ಗಳಿಸಿದ್ದರು.

Womens Junior World Cup: ದಕ್ಷಿಣ ಕೊರಿಯಾ ಸೆಮಿಫೈನಲ್‌ಗೆ ಭಾರತ ಲಗ್ಗೆ!

ಗಾಯದ ಸಮಸ್ಯೆಯಿಂದಾಗಿ ಒಂದು ತಿಂಗಳು ಕ್ರಿಕೆಟ್‌ನಿಂದ ದೂರವಿದ್ದ ಸೂರ್ಯ, ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ಕಾರಣದಿಂದಾಗಿ ಅವರು ಈ ಆವೃತ್ತಿಯ ಮೊದಲೆರಡು ಪಂದ್ಯಗಳಿಗೆ ಗೈರಾಗಿದ್ದರು. ಆ ಬಳಿಕ ತಂಡ ಕೂಡಿಕೊಂಡು ಕ್ವಾರಂಟೈನ್‌ ಪೂರ್ಣಗೊಳಿಸಿ, ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಅಬ್ಬರದ ಆಟ ಪ್ರದರ್ಶಿಸಿದ್ದರು. ಸೂರ್ಯ ಅವರ ಆಕರ್ಷಕ ಇನ್ನಿಂಗ್ಸ್‌ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

click me!