'ಮರಿ ನೀರಜ್ ಚೋಪ್ರಾ' ಹಾಸನದ ಮನು, ಜಾವೆಲಿನ್‌ನಲ್ಲಿ ಕನ್ನಡಿಗನ ಮಿಂಚು..!

By Kannadaprabha NewsFirst Published Apr 9, 2022, 12:00 PM IST
Highlights

* ನೀರಜ್ ಚೋಪ್ರಾ ಹಾದಿಯಲ್ಲಿಯೇ ಸಾಗುತ್ತಿದ್ದಾರೆ ಕನ್ನಡದ ಯುವ ಜಾವೆಲಿನ್ ಪಟು ಮನು

* ನೀರಜ್‌ ಚೋಪ್ರಾ ಮಾಜಿ ಕೋಚ್ ಕಾಶಿನಾಥ್ ನಾಯ್ಕ್‌ರಿಂದ ಮನುಗೆ ಮಾರ್ಗದರ್ಶನ

* ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುವ ಗುರಿ ಹೊಂದಿರುವ 22 ವರ್ಷದ ಮನು

- ಸ್ಪಂದನ್ ಕಣಿಯಾರ್, ಕನ್ನಡಪ್ರಭ

ಬೆಂಗಳೂರು(ಏ.09): ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ನೀರಜ್‌ ಚೋಪ್ರಾ (Neeraj Chopra) ಗೆದ್ದ ಚಿನ್ನ ಭಾರತದ ಜಾವೆಲಿನ್‌ ಎಸೆತ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಅನೇಕ ಯುವ ಪ್ರತಿಭೆಗಳು ಜಾವೆಲಿನ್‌ ಎಸೆತವನ್ನು ಆಯ್ದುಕೊಳ್ಳುತ್ತಿದ್ದು, ಅದರಲ್ಲಿ ಕರ್ನಾಟಕದ ಮನು ಕೂಡ ಒಬ್ಬರು. ವೃತ್ತಿಪರ ತರಬೇತಿ ಪಡೆಯಲಾರಂಭಿಸಿದ ಮೂರನೇ ವರ್ಷದಲ್ಲೇ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದು, ನೀರಜ್‌ರ 88.06 ಮೀ. ದಾಖಲೆ ಮೀರುವ ಕನಸಿನೊಂದಿಗೆ ಮುನ್ನುಗ್ಗುತ್ತಿದ್ದಾರೆ.

22 ವರ್ಷದ ಮನು, ಈ ಋುತುವಿನಲ್ಲಿ ಈಗಾಗಲೇ ಎರಡು ಬಾರಿ ರಾಷ್ಟ್ರೀಯ ಕೂಟಗಳಲ್ಲಿ 80 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ಪದಕ ಗೆದ್ದಿದ್ದಾರೆ. ಇತ್ತೀಚೆಗೆ ತಿರುವನಂತಪುರದಲ್ಲಿ ನಡೆದ ಭಾರತೀಯ ಗ್ರ್ಯಾನ್‌ ಪ್ರಿ ಕೂಟದಲ್ಲಿ 82.43 ಮೀ. ದೂರಕ್ಕೆ ಎಸೆದು, ಜುಲೈನಲ್ಲಿ ಆರಂಭವಾಗಲಿರುವ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಶುರುವಾಗಲಿರುವ ಹಾಂಗ್ಝೂ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ, ಬುಧವಾರ ಕಲ್ಲಿಕೋಟೆಯಲ್ಲಿ ಮುಕ್ತಾಯಗೊಂಡ ಫೆಡರೇಷನ್‌ ಕಪ್‌ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿ ತಮ್ಮ ಲಯ ಮುಂದುವರಿಸಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ ಗುರಿ:

ಕಾಮನ್ವೆಲ್ತ್‌ ಗೇಮ್ಸ್‌ ಹಾಗೂ ಏಷ್ಯನ್‌ ಗೇಮ್ಸ್‌ಗಿಂತ ಹೆಚ್ಚಾಗಿ ಜುಲೈನಲ್ಲಿ ಅಮೆರಿಕದ ಯುಜೀನ್‌ನಲ್ಲಿ ನಡೆಯಲಿರುವ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುವುದು ಮನು ಅವರ ಗುರಿ. ಆ ಕೂಟಕ್ಕೆ ಪ್ರವೇಶಿಸಲು 85 ಮೀ. ಅರ್ಹತಾ ಗುರಿಯನ್ನು ಪೂರೈಸಬೇಕಿದೆ.

ಕಾಫಿ ತೋಟದಲ್ಲಿ ಕೆಲಸ ಮಾಡುತ್ತ ಶಾಲೆಗೆ:

ಮನು ಹಾಸನದ ಬೇಲೂರಿನವರು. ರೈತ ಕುಟುಂಬದ ಹಿನ್ನೆಲೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತ ಶಾಲೆಗೆ ಹೋಗುತ್ತಿದ್ದ ಬಾಲಕ. ‘ಕನ್ನಡಪ್ರಭ’ದೊಂದಿಗೆ ಮನು ಅವರು, ಜಾವೆಲಿನ್‌ ಎಸೆತದೊಂದಿಗೆ ತಮ್ಮ ನಂಟಿನ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ‘ಓದಿನಲ್ಲಿ ನನಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಕ್ರೀಡೆಯಲ್ಲೇ ಏನಾದರೂ ಸಾಧಿಸಬೇಕು ಎನಿಸುತ್ತಿತ್ತು. ದೈಹಿಕ ಶಿಕ್ಷಕರ ಸಲಹೆ ಮೇರೆಗೆ ಜಾವೆಲಿನ್‌ ಎಸೆತ ಶುರು ಮಾಡಿದೆ. ಮೊದಲ ಯತ್ನದಲ್ಲೇ ಕ್ರೀಡೆಯ ಬಗ್ಗೆ ಒಲವು ಬೆಳೆಯಿತು. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪದಕ ಗೆದ್ದಾಗ ಆಳ್ವಾಸ್‌ ಶಿಕ್ಷಣ ಸಂಸ್ಥೆಯವರು ನನ್ನನ್ನು ಕ್ರೀಡಾ ಸ್ಕಾಲರ್‌ಶಿಪ್‌ ಮೇಲೆ ಆಯ್ಕೆ ಮಾಡಿದರು’ ಎಂದು ಮನು ಹೇಳಿದರು.

Junior Hockey World Cup‌: ಭಾರತ ಮಹಿಳಾ ಹಾಕಿ ತಂಡಕ್ಕೆ ಹ್ಯಾಟ್ರಿಕ್‌ ಜಯ

ಸೇನಾ ಕ್ರೀಡಾ ಸಂಸ್ಥೆಗೆ ಆಯ್ಕೆ:

ಮನು ಬಗ್ಗೆ ಪರಿಚಿತರು 2010ರ ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತ, ಜಾವೆಲಿನ್‌ ಥ್ರೋ ಕೋಚ್‌ ಕಾಶಿನಾಥ್‌ ನಾಯ್ಕ್‌ ಅವರಿಗೆ ತಿಳಿಸಿದಾಗ, 2019ರಲ್ಲಿ ಅವರನ್ನು ಪುಣೆಯ ಸೇನಾ ಕ್ರೀಡಾ ಸಂಸ್ಥೆ (ಎಎಸ್‌ಐ)ಗೆ ಕರೆಸಿ ಪರೀಕ್ಷೆ ನಡೆಸಲಾಯಿತು. ಜಾವೆಲಿನ್‌ಗೆ ಬೇಕಿದ್ದ ಎತ್ತರ, ಮೈಕಟ್ಟು ಮನು ಅವರಲ್ಲಿದ್ದ ಕಾರಣ ಕಾಶಿನಾಥ್‌ ತರಬೇತಿ ಆರಂಭಿಸಿದರು. ಅಷ್ಟೊತ್ತಿಗಾಗಲೇ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮನು 65 ಮೀ. ಎಸೆದು ಗಮನ ಸೆಳೆದಿದ್ದರು. ‘ಮನು ಸರಿಯಾದ ಕೋಚ್‌, ತರಬೇತಿ ಇಲ್ಲದೆ 65 ಮೀ. ದೂರಕ್ಕೆ ಎಸೆದಿದ್ದಾರೆ ಎನ್ನುವುದು ಗಮನ ಸೆಳೆಯಿತು. ಅವರಲ್ಲೊಬ್ಬ ಉತ್ತಮ ಜಾವೆಲಿನ್‌ ಥ್ರೋ ಪಟುವನ್ನು ಕಂಡ ನಾನು, ಕೆಲ ದಿನಗಳ ತರಬೇತಿ ನೀಡಿ ಟ್ರಯಲ್ಸ್‌ ನಡೆಸಿದಾಗ 75 ಮೀ. ಆಸು ಪಾಸಿನಲ್ಲಿ ಎಸೆದರು. ಅವರನ್ನು ಹವಾಲ್ದಾರ್‌ ಆಗಿ ಸೇನೆಯಲ್ಲಿ ಭರ್ತಿ ಮಾಡಿಕೊಳ್ಳಲಾಯಿತು’ ಎಂದು ಕಾಶಿನಾಥ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ನಿರಂತರ ಸುಧಾರಣೆ!:

ವೃತ್ತಿಪರ ಅಥ್ಲೀಟ್‌ ಆಗಿ ಆರೇ ತಿಂಗಳಲ್ಲಿ ಮನು, ಲಖನೌದಲ್ಲಿ ನಡೆದಿದ್ದ ಅಂತರ-ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ 76.24 ಮೀ. ಎಸೆದು ಬೆಳ್ಳಿ ಜಯಿಸಿದ್ದರು. ‘ಅವರ ಪ್ರದರ್ಶನ ಗುಣಮಟ್ಟ ಸುಧಾರಿಸುತ್ತಿದೆ. ಕಳೆದ ವರ್ಷ ಸೇನಾ ಟ್ರಯಲ್ಸ್‌ನಲ್ಲಿ 78 ಮೀ. ಎಸೆದಿದ್ದರು. ಈ ವರ್ಷ 80 ಮೀ. ದಾಟಬೇಕು ಎನ್ನುವುದು ಮೊದಲ ಗುರಿಯಾಗಿತ್ತು. ಅವರು ಅದನ್ನು ಸಾಧಿಸಿದ್ದಾರೆ. ಇದೇ ಋುತುವಿನಲ್ಲಿ 85 ಮೀ. ತಲುಪಲಿದ್ದಾರೆ ಎನ್ನುವ ವಿಶ್ವಾಸವಿದೆ’ ಎಂದು ಕೋಚ್‌ ಕಾಶಿನಾಥ್‌ ಹೇಳಿದ್ದಾರೆ.

ಮನು ಸಾಧನೆ

- ಸರಿಯಾದ ಕೋಚ್‌, ತರಬೇತಿಯೇ ಇಲ್ಲದೆ 65 ಮೀ. ಎಸೆದಿದ್ದ ಮನು

- ಇದನ್ನು ಗಮನಿಸಿ ಜಾವೆಲಿನ್‌ ಕೋಚ್‌, ಕನ್ನಡಿಗ ಕಾಶೀನಾಥ್‌ ತರಬೇತಿ

- ಕೆಲವು ದಿನಗಳ ನಂತರ 75 ಮೀ. ದೂರಕ್ಕೆ ಎಸೆದು ಗಮನಾರ್ಹ ಪ್ರಗತಿ

- 6 ತಿಂಗಳಲ್ಲಿ 76.24 ಮೀ. ಎಸೆದು ಅಂತಾರಾಜ್ಯ ಕ್ರೀಡಾಕೂಟದಲ್ಲಿ ಬೆಳ್ಳಿ

- ಇತ್ತೀಚೆಗೆ ಇಂಡಿಯನ್‌ ಗ್ರ್ಯಾನ್‌ಪ್ರಿಯಲ್ಲಿ 82.43 ಮೀ. ಎಸೆದು ಸಾಧನೆ

ಪ್ರಾಯೋಜಕರು ಬೇಕಾಗಿದ್ದಾರೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಕನಸು ಕಾಣುತ್ತಿರುವ ಮನುಗೆ ಪ್ರಾಯೋಜಕರ ಅವಶ್ಯಕತೆ ಇದೆ. ‘ಎಎಸ್‌ಐನಲ್ಲಿ ತರಬೇತಿಗೆ ಯಾವುದೇ ಕೊರತೆ ಇಲ್ಲ. ಆದರೆ ಫಿಟ್ನೆಸ್‌ಗಾಗಿ ಆಹಾರ ಪೂರಕಗಳ ಅಗತ್ಯವಿದೆ. ಅದಕ್ಕೇ ತಿಂಗಳಿಗೆ 15000-20000 ರು. ಖರ್ಚು ಆಗುತ್ತದೆ. ಹೆಚ್ಚಿನ ಪೌಷ್ಟಿಕಾಂಶವುಳ್ಳ ಆಹಾರ ತಯಾರಿಸಿ ಸೇವಿಸಬೇಕೆಂದರೆ ಅದಕ್ಕೂ ಪ್ರತ್ಯೇಕವಾಗಿ ಖರ್ಚು ಮಾಡಬೇಕು. ಕುಟುಂಬ ನಿರ್ವಹಣೆಗೂ ಹಣ ಕಳುಹಿಸಬೇಕಿದೆ. ನಾನು ಕೆಲಸಕ್ಕೆ ಸೇರುವ ಮೊದಲು ತಂದೆ ಬೇರೆಯವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈಗ ಬಿಡಿಸಿದ್ದೇನೆ. ಕ್ರೀಡಾಪಟುಗಳು ಸಾಧನೆ ಮಾಡಿದ ಬಳಿಕ ಬಹುಮಾನಗಳ ಸುರಿಮಳೆಯನ್ನೇ ಸುರಿಸಲಾಗುತ್ತದೆ. ಆದರೆ ಸಾಧನೆಗೆ ಬೇಕಿರುವ ಆರ್ಥಿಕ ನೆರವು ಸಿಗುವುದು ಬಹಳ ಕಷ್ಟವಿದೆ’ ಎಂದು ಮನು ಬೇಸರ ವ್ಯಕ್ತಪಡಿಸಿದರು.

click me!