
- ಸ್ಪಂದನ್ ಕಣಿಯಾರ್, ಕನ್ನಡಪ್ರಭ
ಬೆಂಗಳೂರು(ಫೆ.04): ಸ್ಕೀಯಿಂಗ್ ಎನ್ನೋದು ದಕ್ಷಿಣ ಭಾರತದವರಿಗೆ ಹೆಚ್ಚು ಪರಿಚಯವಿಲ್ಲದೆ ಕ್ರೀಡೆ. ಹಿಮದ ಮೇಲೆ ಶರವೇಗದಲ್ಲಿ ಸಾಗುವ ಸಾಹಸಮಯ ಕ್ರೀಡೆಯಲ್ಲಿ ಕರ್ನಾಟಕದವರ ಸಾಧನೆ ಬಹಳ ಅಪರೂಪ. ಅಂತಹ ಸಾಧನೆಯ ಹಾದಿಯಲ್ಲಿ ಬೆಂಗಳೂರಿನ ಜಿಯಾ ಆರ್ಯನ್ ಇದ್ದು, ಫೆ.5ರಿಂದ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟ ಹಾಗೂ ಖೇಲೋ ಇಂಡಿಯಾದಲ್ಲಿ ಸ್ಪರ್ಧಿಸಲಿದ್ದಾರೆ.
ರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟದ ಆಲ್ಪೈನ್ ಸ್ಕೀಯಿಂಗ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಜಿಯಾ ಪಾತ್ರರಾಗಲಿದ್ದಾರೆ. ಆಲ್ಪೈನ್ ಸ್ಕೀಯಿಂಗ್ (ಸ್ಲಾಲೋಮ್ ಹಾಗೂ ಜೈಂಟ್ ಸ್ಲಾಲೋಮ್) ಸಬ್ ಜೂನಿಯರ್ ವಿಭಾಗದಲ್ಲಿ ಜಿಯಾ ಕಣಕ್ಕಿಳಿಯಲಿದ್ದಾರೆ.
ಮುಷ್ತಾಕ್ ಅಲಿ ಟ್ರೋಫಿ ಗೆಲುವನ್ನು ಕೊನೆಯುಸಿರೆಳೆದ ತಾಯಿಗೆ ಅರ್ಪಿಸಿದ ಅಶ್ವಿನ್..!
ಕಾಶ್ಮೀರದಲ್ಲಿ ಅಭ್ಯಾಸ: 11 ವರ್ಷದ ಜಿಯಾ ಕಾಶ್ಮೀರದ ಪಹಲ್ಗಂನಲ್ಲಿರುವ ಜವಾಹರ್ ಪ್ರರ್ವತಾರೋಹಣ ಮತ್ತು ಚಳಿಗಾಲದ ಕ್ರೀಡಾ ಸಂಸ್ಥೆಯಲ್ಲಿ ಕಳೆದ 2 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ. ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಜಿಯಾ, 2024ರಲ್ಲಿ ದಕ್ಷಿಣ ಕೊರಿಯಾದ ಗಾಂಗ್ವನ್‌ನಲ್ಲಿ ನಡೆಯಲಿರುವ ಕಿರಿಯರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದಾರೆ. ಕ್ರೀಡಾಕೂಟಕ್ಕೆ ಅರ್ಹತೆ ಪಡೆದರೆ, ಆ ಸಾಧನೆ ಮಾಡುವ ಭಾರತದ ಮೊದಲ ಕ್ರೀಡಾಪಟು ಎನಿಸಲಿದ್ದಾರೆ.
ಏನಿದು ಆಲ್ಪೈನ್ ಸ್ಕೀಯಿಂಗ್?
ಹಿಮ ಗುಡ್ಡದ ಮೇಲಿಂದ ಸ್ಕೀ (ಉಪಕರಣ)ದ ಸಹಾಯದಿಂದ ಜಾರುವ ಕ್ರೀಡೆಯನ್ನು ಆಲ್ಪೈನ್ ಸ್ಕೀಯಿಂಗ್ ಎನ್ನುತ್ತಾರೆ. ಸಾಮಾನ್ಯವಾಗಿ ವೃತ್ತಿಪರ ಸ್ಕೀಯಿಂಗ್ ಸ್ಪರ್ಧೆಗಳ ಒಟ್ಟು ದೂರ 2.4 ಕಿ.ಮೀಗಳಿಂದ 3 ಕಿ.ಮೀ ಇರುತ್ತವೆ. ಸ್ಪರ್ಧಿಗಳು ಸರಾಸರಿ ಗಂಟೆಗೆ 60ರಿಂದ 90 ಕಿ.ಮೀ ವೇಗದಲ್ಲಿ ಚಲಿಸುತ್ತಾರೆ. ಸಬ್ ಜೂನಿಯರ್ ಇಲ್ಲವೇ ಜೂನಿಯರ್ ವಿಭಾಗದಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗ ಇರುತ್ತದೆ.
ಸಾಧನೆಗೆ ಭಯ ಅಡ್ಡಿಯಾಗಬಾರದು
ಸ್ಕೀಯಿಂಗ್ ಒಂದು ಸಾಹಸ ಕ್ರೀಡೆಯಾಗಿದ್ದು, ಅಷ್ಟೇ ಅಪಾಯಕಾರಿ ಕೂಡ. ಆದರೂ ನಮ್ಮ ಮಗಳು ಇಷ್ಟಪಡುವ ಕ್ರೀಡೆಯಲ್ಲಿ ಮುಂದುವರಿಯಲು ಪ್ರೋತ್ಸಾಹಿಸುತ್ತಿದ್ದೇವೆ. ಕಳೆದ ತಿಂಗಳಷ್ಟೇ (ಜ.21) ಅಭ್ಯಾಸದ ವೇಳೆ ಸ್ನೋ ಬೋರ್ಡರ್ ಒಬ್ಬರು ಜಿಯಾಗೆ ಡಿಕ್ಕಿ ಹೊಡೆದರು. ಇಬ್ಬರೂ ಸುಮಾರು ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದರು. ಈ ಅಪಘಾತದಿಂದ ಜಿಯಾ ಕೊರಳುಪಟ್ಟಿಯ ಮೂಳೆ ಮುರಿದು 2 ವಾರ ಅಭ್ಯಾಸದಿಂದ ದೂರವಿರಬೇಕಾಯಿತು. ಜಿಯಾ ತನಗಿಷ್ಟದ ದಾರಿಯನ್ನು ಆರಿಸಿಕೊಂಡಿದ್ದು, ಅವಳ ಪ್ರತಿಭೆಗೆ ನೀರೆರೆಯಲು ಎಲ್ಲ ಪ್ರಯತ್ನ ನಡೆಸುತ್ತೇವೆ. - ಜಾನ್ವಿ ಆರ್ಯನ್, ಜಿಯಾ ತಾಯಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.