ತೀರ್ಥಹಳ್ಳಿಯ ಯುವ ಪ್ರತಿಭೆ, ಟೀಂ ಇಂಡಿಯಾ ಖೋ ಖೋ ಆಟಗಾರ ವಿನಯ್ ಮೆದುಳು ಜ್ವರದಿಂದ ನಿಧನ!

By Suvarna News  |  First Published Aug 9, 2022, 8:53 AM IST

ಭಾರತ ಖೋ ಖೋ ತಂಡದ ಪ್ರಮುಖ ಸದಸ್ಯನಾಗಿ ಗುರುತಿಸಿಕೊಂಡ, ಕರ್ನಾಟಕ ಪ್ರತಿಭೆ ವಿನಯ್ ತೀವ್ರ ಮೆದುಳು ಜ್ವರದಿಂದ ನಿಧನರಾಗಿದ್ದಾರೆ.
 


ಶಿವಮೊಗ್ಗ(ಆ.09):ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅದ್ವೀತಿಯ ಸಾಧನೆ,  ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತಕ್ಕೆ ಆಘಾತ ಎದುರಾಗಿದೆ. ಭಾರತ ಖೋ ಖೋ ತಂಡದ ಪ್ರಮುಖ ಸದಸ್ಯನಾಗಿ ಗುರುತಿಸಿಕೊಂಡ, ತೀರ್ಥಹಳ್ಳಿಯ ವಿನಯ್ ನಿಧನರಾಗಿದ್ದಾರೆ. ತೀವ್ರ ಮೆದುಳು ಜ್ವರದಿಂದ ಬಳಲುತ್ತಿದ್ದ 33 ವರ್ಷದ ವಿನಯ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ವಿನಯ್‌ರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ(ಆ.08) ತಡರಾತ್ರಿ ವಿನಯ್ ಆರೋಗ್ಯ ಏರುಪೇರಾಗಿದೆ. ತೀವ್ರ ಅಸ್ವಸ್ಥರಾದ ವಿನಯ್ ನಿಧನರಾಗಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಖೋ ಖೋ ತಂಡವನ್ನು ಪ್ರತಿನಿಧಿಸಿದ ವಿನಯ್‌ ಸಾಧನೆ ಪರಿಗಣಿಸಿ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಖೋ ಖೋದಲ್ಲಿ ಭಾರತ ತಂಡದಲ್ಲಿ ಮಿಂಚಿದ ವಿನಯ್ ಇನ್ನಿಲ್ಲ ಅನ್ನೋ ಸುದ್ದಿ ಕರ್ನಾಟಕ ಸೇರಿ ಭಾರತಕ್ಕೆ ತೀವ್ರ ಆಘಾತ ತಂದಿದೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ವಿನಯ್ ಕೊರೋನಾ ಬಳಿಕ ಹುಟ್ಟೂರು ತೀರ್ಥಹಳ್ಳಿಗೆ ಸ್ಥಳಾಂತರಗೊಂಡಿದ್ದರು. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಖೋ ಖೋ ತಂಡವನ್ನು ಪ್ರತಿನಿಧಿಸುತ್ತಿದ್ದ ವಿನಯ್ ಇತ್ತೀಚಿನ ದಿನಗಳ ವರೆಗೂ ಖೋ ಖೋದಲ್ಲಿ ಸಕ್ರಿಯರಾಗಿದ್ದರು. ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಪ್ರತಿನಿಧಿಸುತ್ತಿದ್ದ ವಿನಯ್ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ವಿನಯ್ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹುಟ್ಟೂರಿನ ಪ್ರತಿಭೆ ಇನ್ನಿಲ್ಲ ಅನ್ನೋ ಸುದ್ದಿ ತಿಳಿದು, ವಿನಯ್ ಮನೆಯತ್ತ ಸ್ಥಳೀಯರು ಧಾವಿಸಿದ್ದಾರೆ. 

Tap to resize

Latest Videos

Mandya News: ವಿದ್ಯುತ್ ಶಾಕ್ ತಗುಲಿ ಫುಟ್ಬಾಲ್ ಆಟಗಾರನ ಸ್ಥಿತಿ ಗಂಭೀರ: ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಪೋಷಕರು

ಜ್ವರದಿಂದ ಬಳಲಿದ ವಿನಯ್ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ಆದರೆ ಮೂರು ದಿನಗಳಾದರೂ ಜ್ವರ ಕಡಿಮೆಯಾಗಿಲ್ಲ. ಜೊತೆಗೆ ವಿನಯ್ ಆರೋಗ್ಯ ಕ್ಷೀಣಿಸತೊಡಗಿದೆ. ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚೇತರಿಸಿಕೊಂಡಿಲ್ಲ ಇದರಿಂದ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವಿನಯ್ ಮೆದುಳು ಜ್ವರದಿಂದ ಬಳಲುತ್ತಿರುವುದಾಗಿ ಪತ್ತೆಯಾಗಿದೆ. ಹೀಗಾಗಿ ವಿನಯ್‌ಗೆ ತೀವ್ರ ನಿಘಾ ಘಟಕದಲ್ಲಿ ತುರ್ತು ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ ವಿನಯ್ ಚಿಕಿತ್ಸೆ ಸ್ಪಂದಿಸಿರಲಿಲ್ಲ. ಮೆದುಳು ಜ್ವರ ತೀವ್ರಗೊಂಡಿತ್ತು. ಆಗಸ್ಟ್ 8 ರ ರಾತ್ರಿ ವಿನಯ್ ಮೃತಪಟ್ಟಿದ್ದಾರೆ. 

ತೀರ್ಥಹಳ್ಳಿಯ ಸೀಬಿನಕೆರೆ ನಿವಾಸಿಯಾಗಿರುವ ವಿನಯ್, ಕಳೆದ ವರ್ಷ ಮದುವೆಯಾಗಿದ್ದರು. 8 ತಿಂಗಳ ಮುದ್ದಾದ ಮಗುವಿನ ತಂದೆಯಾಗಿರುವ ವಿನಯ್ ನಿಧನ ಸುದ್ದಿಯಿಂದ ಪತ್ನಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಹೂವಪ್ಪ ಗೌಡರ ಪುತ್ರ ವಿನಯ್ ನಿಧನದಿಂದ ತೀರ್ಥಹಳ್ಳಿಯಲ್ಲಿ ನೀರವ ಮೌನ ಆವರಿಸಿದೆ.

click me!