ಕಾಮನ್ವೆಲ್ತ್‌ನಲ್ಲಿ ಭಾರತ ಕಮಾಲ್‌, ಶೂಟಿಂಗ್‌, ಆರ್ಚರಿ ಇಲ್ಲದಿದ್ದರೂ 61 ಪದಕ ಗೆದ್ದ ಸಾಧನೆ!

By Kannadaprabha NewsFirst Published Aug 9, 2022, 8:07 AM IST
Highlights

2022ರ ಕಾಮನ್‌ವೆಲ್ತ್ ಕ್ರೀಡಾಕೂಟ ಮುಕ್ತಾಯಗೊಂಡಿದೆ. ಭಾರತ ಅತ್ಯುತ್ತಮ ಸಾಧನೆ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. ಕೆಲ ಕ್ರೀಡೆಯಲ್ಲಿ ಭಾರತ ಇತಿಹಾಸ ರಚಿಸಿದೆ. 22 ಚಿನ್ನದ ಪದಕೊಂದಿದೆ ಒಟ್ಟು 61 ಪದಕ ಸಾಧನೆಯನ್ನು ಭಾರತ ಮಾಡಿದೆ. ಈ ಬಾರಿ ಭಾರತಕ್ಕೆ ಪದಕಗಳ ಸಂಖ್ಯೆ ಕೊಂಚ ಕಡಿಮೆಯಾದರೂ ಹೊಸ ಹೊಸ ಆಟಗಳಲ್ಲಿ ಭಾರತೀಯರು ಪದಕ ಗೆದ್ದು ಸಾಮರ್ಥ್ಯ ಪ್ರದರ್ಶಿಸಿದ್ದಾರೆ

ಬರ್ಮಿಂಗ್‌ಹ್ಯಾಮ್(ಆ.09) ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಸೋಮವಾರ ಮುಕ್ತಾಯವಾದ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಸಾಧನೆ ತೋರಿದೆ. ಸಾಮಾನ್ಯವಾಗಿ ದೇಶಕ್ಕೆ ಹತ್ತಾರು ಪದಕ ತರುವ ಶೂಟಿಂಗ್‌, ಆರ್ಚರಿ ಕ್ರೀಡೆಗಳು ಈ ಬಾರಿಯ ಕ್ರೀಡಾಕೂಟದಲ್ಲಿ ಇಲ್ಲದಿದ್ದರೂ ಕಾಮನ್ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ತನ್ನ 4ನೇ ಸರ್ವಶ್ರೇಷ್ಠ ಪ್ರದರ್ಶನ ತೋರಿದೆ. ಅಥ್ಲೆಟಿಕ್ಸ್‌ನಲ್ಲಿ ದೇಶದ ಕ್ರೀಡಾಳುಗಳು ಅದ್ವಿತೀಯ ಪ್ರದರ್ಶನ ತೋರಿದ್ದರೆ, ಕ್ರಿಕೆಟ್‌ನಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿ ಲಭಿಸಿದೆ. ಅಷ್ಟಾಗಿ ಪರಿಚಿತವಲ್ಲದ ಲಾನ್‌ ಬೌಲ್ಸ್‌ ಎಂಬ ಕ್ರೀಡೆಯಲ್ಲೂ ಭಾರತಕ್ಕೆ ಪದಕ ಬಂದಿದೆ ಎಂದರೆ, ದೇಶದ ಕ್ರೀಡಾ ಕ್ಷೇತ್ರದ ವ್ಯಾಪ್ತಿ ವಿಸ್ತರಿಸುತ್ತಿರುವುದು ನಿಚ್ಚಳ.

61 ಪದಕ: 
22 ಬಂಗಾರ, 16 ಬೆಳ್ಳಿ, 23 ಕಂಚಿನ ಪದಕಗಳೊಂದಿಗೆ ಈ ಬಾರಿಯ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟಾರೆ 61 ಪದಕ ಗಳಿಕೆ

5ನೇ ಶ್ರೇಷ್ಠ: 
2010ರಲ್ಲಿ 101, 2002ರಲ್ಲಿ 69, 2018ರಲ್ಲಿ 66, 2014ರಲ್ಲಿ 64 ಗೆದ್ದಿದ್ದ ಭಾರತ. ಈ ಬಾರಿ ಶೂಟಿಂಗ್‌, ಆರ್ಚರಿ ಇಲ್ಲದೆ 61 ಪದಕ

6ನೇ ಬಾರಿ: 
2010ರಲ್ಲಿ 2 ಮತ್ತು 2002, 2006, 2018, 2022ರಲ್ಲಿ 4, 2014ರಲ್ಲಿ 5ನೇ ಸ್ಥಾನದೊಂದಿಗೆ 6ನೇ ಬಾರಿಯೂ ಟಾಪ್‌-5ನಲ್ಲಿ ಭಾರತ

Commonwealth Games ಚಿನ್ನ ಗೆದ್ದ ಶರತ್ ಕಮಲ್, ಬೆಳ್ಳಿಗೆ ತೃಪ್ತಿಪಟ್ಟ ಭಾರತ ಹಾಕಿ ತಂಡ..

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಕ್ತಾಯಗೊಂಡ 2022ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಸಾಧನೆ ದೇಶದ ಕ್ರೀಡಾಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ. 60ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಭಾರತೀಯ ಕ್ರೀಡಾಳುಗಳು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ನಿಂತಿದ್ದಾರೆ. ಇದು ಕಳೆದ 2018ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮೆರೆದ ಸಾಧನೆಗಿಂತ ಕೊಂಚ ಕಡಿಮೆಯೆಂದು ಮೇಲ್ನೋಟಕ್ಕೆ ತೋರಬಹುದು. ಕಳೆದ ಬಾರಿ 66 ಪದಕ ಪಡೆದು ಭಾರತ ಮೂರನೇ ಸ್ಥಾನದಲ್ಲಿತ್ತು. ಆದರೂ ಈ ಬಾರಿಯ ಸಾಧನೆ ಅತ್ಯಂತ ಗಮನಾರ್ಹ ಏಕೆಂದರೆ, ಭಾರತೀಯ ಕ್ರೀಡಾಳುಗಳು ಹಿಂದೆ ಪದಕಗಳನ್ನು ಗೆಲ್ಲದಿದ್ದ ಕ್ರೀಡೆಗಳಲ್ಲೂ ಈ ಬಾರಿ ದೇಶಕ್ಕೆ ಪದಕ ತಂದುಕೊಟ್ಟಿದ್ದಾರೆ. ಇದು ದೇಶದ ಕ್ರೀಡಾಕ್ಷೇತ್ರದಲ್ಲಿ ಹೊಸ ಹೊಸ ಕ್ರೀಡೆಗಳ ಕುರಿತು ಯುವಕರಲ್ಲಿ ಮೂಡುತ್ತಿರುವ ಉತ್ಸಾಹ ಹಾಗೂ ಅವರಿಗೆ ಸಿಗುತ್ತಿರುವ ತರಬೇತಿ ಮತ್ತು ಪ್ರೋತ್ಸಾಹದ ಪ್ರತೀಕ.

ಈ ಬಾರಿಯ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಶೂಟಿಂಗ್‌ ಹಾಗೂ ಆರ್ಚರಿಗಳನ್ನು ಕೈಬಿಡಲಾಗಿತ್ತು. ಭಾರತ ಇವೆರಡೂ ಕ್ರೀಡೆಗಳಲ್ಲಿ ಎತ್ತಿದ ಕೈ. ಇವುಗಳನ್ನು ಕೈಬಿಟ್ಟಿದ್ದು ಭಾರತಕ್ಕಾದ ನಷ್ಟ. ವಿಶೇಷವೆಂದರೆ ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಟ್ರಿಪಲ್‌ ಜಂಪ್‌, ಹೈಜಂಪ್‌, ವೇಗದ ನಡಿಗೆ (ರೇಸ್‌ ವಾಕ್‌), ಮಹಿಳಾ ಜಾವೆಲಿನ್‌, ಸ್ಟೀಪಲ್‌ ಚೇಸ್‌ನಲ್ಲಿ ಮೊದಲ ಬಾರಿಗೆ ದೇಶಕ್ಕೆ ಪದಕ ಬಂದಿದೆ. ಸ್ಕಾ$್ವ್ಯಶ್‌, ಜುಡೋ ಹಾಗೂ ಲಾನ್‌ ಬೌಲ್ಸ್‌ನಲ್ಲಿ ದೇಶದ ಕ್ರೀಡಾಳುಗಳು ಅಚ್ಚರಿಯ ಸಾಧನೆ ಮಾಡಿದ್ದಾರೆ. ಕುಸ್ತಿ, ವೇಟ್‌ಲಿಫ್ಟಿಂಗ್‌ನಲ್ಲಿ ತನ್ನ ಪ್ರಾಬಲ್ಯವನ್ನು ದೇಶ ಮುಂದುವರೆಸಿದೆ. ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 10 ಪದಕ ಪಡೆದಿರುವುದು ಭಾರತೀಯರ ಸಾರ್ವಕಾಲಿಕ ಸಾಧನೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆಯನ್ನು ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ, ರವಿ ದಹಿಯಾ, ವಿನೇಶ್‌ ಫೋಗಾಟ್‌ ಮೂಡಿಸಿದ್ದಾರೆ. ಬ್ಯಾಕ್ಸಿಂಗ್‌ನಲ್ಲಿ ಮೇರಿ ಕೋಮ್‌ ಸ್ಥಾನ ತುಂಬಬಲ್ಲ ಸಾಮರ್ಥ್ಯವನ್ನು ನೀತು ಗಂಗಾಸ್‌ ಪ್ರದರ್ಶಿಸಿದ್ದಾರೆ. ವಿಶ್ವ ಚಾಂಪಿಯನ್‌ ಬಾಕ್ಸರ್‌ ನಿಖಾತ್‌ ಜರೀನ್‌ ಜಯದ ಓಟ ಮುಂದುವರೆದಿದೆ. ಅವರೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಟೇಬಲ್‌ ಟೆನಿಸ್‌ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದು, 40ರ ಪ್ರಾಯದಲ್ಲೂ ಶರತ್‌ ಕಮಲ್‌ ಪದಕ ಬೇಟೆ ಮುಂದುವರೆಸಿದ್ದಾರೆ. ಬ್ಯಾಡ್ಮಿಂಟನ್‌ನಲ್ಲೂ ಭಾರತ ಪ್ರಾಬಲ್ಯ ಮೆರೆದಿದ್ದು, ಮೊದಲ ಬಾರಿಗೆ ಪಿ.ವಿ.ಸಿಂಧು ಚಿನ್ನ ಗೆದ್ದಿದ್ದಾರೆ. ಲಕ್ಷ್ಯ ಸೆನ್‌ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸುವತ್ತ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಒಟ್ಟಾರೆ, ವರ್ಷದಿಂದ ವರ್ಷಕ್ಕೆ ಹೊಸ ಎತ್ತರಗಳನ್ನು ಏರುತ್ತಿರುವ ಭಾರತೀಯ ಕ್ರೀಡೆ ತನ್ನ ಸಾಮರ್ಥ್ಯವನ್ನು ಈ ಬಾರಿಯ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮತ್ತೊಮ್ಮೆ ಶ್ರುತಪಡಿಸಿದೆ.

Commonwealth Games: ಸಮಾರೋಪ ಸಮಾರಂಭ ಭಾರತದ ಧ್ವಜಧಾರಿಗಳಾಗಿ ನಿಖಾತ್ ಜರೀನ್, ಶರತ್ ಕಮಲ್‌ ಆಯ್ಕೆ

ಈ ಬಾರಿ ಭಾರತಕ್ಕೆ ಪದಕಗಳ ಸಂಖ್ಯೆ ಕೊಂಚ ಕಡಿಮೆಯಾದರೂ ಹೊಸ ಹೊಸ ಆಟಗಳಲ್ಲಿ ಭಾರತೀಯರು ಪದಕ ಗೆದ್ದು ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

click me!