ಯುವಪೀಳಿಗೆಯನ್ನು ಕ್ರೀಡೆಯತ್ತ ಸೆಳೆಯಬೇಕು: ರಾಜ್ಯಪಾಲ ಗೆಹಲೋತ್‌ ಕರೆ

Kannadaprabha News   | Asianet News
Published : Oct 12, 2021, 08:19 AM IST
ಯುವಪೀಳಿಗೆಯನ್ನು ಕ್ರೀಡೆಯತ್ತ ಸೆಳೆಯಬೇಕು: ರಾಜ್ಯಪಾಲ ಗೆಹಲೋತ್‌ ಕರೆ

ಸಾರಾಂಶ

* ರಾಜ್ಯ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಸಾಧಕರಿಗೆ ಸನ್ಮಾನ * ರಾಜ್ಯದ ಕ್ರೀಡಾಪಟುಗಳು ಹಾಗೂ ತರಬೇತಿದಾರರಿಗೆ ನಗದು ಪುರಸ್ಕಾರ * ಪ್ಯಾರಾಲಿಂಪಿಕ್ಸ್ ಸಾಧಕರನ್ನು ಸನ್ಮಾನಿಸಿ ತಲಾ ಒಂದು ಲಕ್ಷ ರುಪಾಯಿ ನಗದು ಪುರಸ್ಕಾರ

ಬೆಂಗಳೂರು(ಅ.12): ಯುವಪೀಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುವ ನಿಟ್ಟಿನಲ್ಲಿ ಪ್ರೇರೇಪಿಸುವ, ಅಗತ್ಯ ತರಬೇತಿ, ಹಾಗೂ ಸೌಲಭ್ಯ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ (Thawar Chand Gehlot) ಹೇಳಿದರು.

ರಾಜಭವನದಲ್ಲಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಮತ್ತು ಪ್ಯಾರಾಲಿಂಪಿಕ್ಸ್‌ (Paralympics) ನಲ್ಲಿ ಭಾಗವಹಿಸಿದ್ದ ರಾಜ್ಯದ ಕ್ರೀಡಾಪಟುಗಳು ಹಾಗೂ ತರಬೇತಿದಾರರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.

ದೇಶಕ್ಕೆ, ಕರ್ನಾಟಕಕ್ಕೆ ಹೆಮ್ಮೆ ನೀವು: ಬೆಳ್ಳಿ ಗೆದ್ದ ಸುಹಾಸ್‌ಗೆ ಮೋದಿ ಪ್ರಶಂಸೆ!

ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಪದಕ ವಿಜೇತ ಸುಹಾಸ್‌ ಯತಿರಾಜು (Suhas Yathiraj), ಪವರ್‌ ಲಿಫ್ಟರ್‌ ಸಕೀನಾ ಖಾತೂನ್‌ ಹಾಗೂ ಈಜುಪಟು ನಿರಂಜನ್‌ ಮುಕುಂದನ್‌ ಅವರನ್ನು ರಾಜ್ಯಪಾಲರು ಸನ್ಮಾನಿಸಿ ತಲಾ ಒಂದು ಲಕ್ಷ ರುಪಾಯಿ ನಗದು ಪುರಸ್ಕಾರ ಹಸ್ತಾಂತರಿಸಿದರು. ಇದೇ ವೇಳೆ ಸೈಲಿಂಗ್‌ ಪಟು ಕೆ.ಸಿ.ಗಣಪತಿ ಹಾಗೂ ಬಾಕ್ಸಿಂಗ್‌ ಕೋಚ್‌ ಸುಬೇದಾರ್‌ ಸಿ.ಎ.ಕುಟ್ಟಪ್ಪ (CA Kuttappa) ಅವರನ್ನೂ ಸನ್ಮಾನಿಸಲಾಯಿತು. ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್ (Badminton) ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 

ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು

ಈ ವೇಳೆ ಮಾತನಾಡಿದ ರಾಜ್ಯಪಾಲರು, ‘ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ವಿಶ್ವದಲ್ಲೇ ಕರ್ನಾಟಕ ಮತ್ತು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ವಿವಿಧ ಹಂತಗಳಲ್ಲಿ ಬಹುಮಾನ ಹಾಗೂ ಆಧುನಿಕ ಕ್ರೀಡಾಸೌಲಭ್ಯ ಕಲ್ಪಿಸಿ ಪ್ರೋತ್ಸಾಹಿಸುತ್ತಿದೆ. ಕಂಠೀರವ ಕ್ರೀಡಾಂಗಣದಲ್ಲಿ (Kanteerava Stadium) ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸಲಾಗಿದೆ. ಕ್ರೀಡಾಪಟುಗಳು ಈ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು. ಜೊತೆಗೆ ಸರ್ಕಾರ ದಿವ್ಯಾಂಗ ಕ್ರೀಡಾಪಟುಗಳ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸಲು ಹೆಚ್ಚಿನ ಒತ್ತು ನೀಡಬೇಕು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾತನಾಡಿ, ಕ್ರೀಡಾಪಟುಗಳ ಸಾಧನೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕ್ರೀಡೆ ವಿಚಾರದಲ್ಲಿ ದೇಶದ ಇತರೆ ರಾಜ್ಯಗಳಿಗಿಂತ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಬಾರಿ ಒಲಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ’ ಎಂದರು.

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಸಾಧಕರಿಗೆ ತವರಲ್ಲಿ ಅದ್ದೂರಿ ಸ್ವಾಗತ..!

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ 4 ಕಂಚಿನ ಪದಕ ಸಹಿತ ಒಟ್ಟು 7 ಪದಕಗಳನ್ನು ಗೆದ್ದು, ಗರಿಷ್ಠ ಪದಕಗಳ ಸಾಧನೆ ಮಾಡಿತ್ತು. ಇನ್ನು ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 5 ಚಿನ್ನ 8 ಬೆಳ್ಳಿ ಹಾಗೂ 6 ಕಂಚಿನ ಪದಕ ಸಹಿತ ಒಟ್ಟು 19 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಈ ಬಾರಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿತು.ಒಟ್ಟಾರೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪದಕ ಪಟ್ಟಿಯಲ್ಲಿ ಭಾರತ 24ನೇ ಸ್ಥಾನ ಪಡೆಯಿತು.

ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ವಿಧಾನ ಪರಿಷತ್‌ ಸದಸ್ಯ ಡಾ.ಕೆ.ಗೋವಿಂದರಾಜ್‌, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಮತ್ತಿತರರು ಉಪಸ್ಥಿತರಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!