
ಲಿಮಾ(ಅ.11): ಐಎಸ್‌ಎಸ್‌ಎಫ್ ವಿಶ್ವ ಕಿರಿಯರ ಶೂಟಿಂಗ್ ಚಾಂಪಿಯನ್‌ಶಿಪ್ (ISSF Junior World Championship) ನಲ್ಲಿ ಭಾರತ 16 ಚಿನ್ನದ ಪದಕ ಸೇರಿ ಒಟ್ಟು 40 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಟೂರ್ನಿಯ ಅಂತಿಮ ದಿನವಾದ ಶನಿವಾರ ಎಲ್ಲಾ 4 ವಿಭಾಗಗಳಲ್ಲೂ ಭಾರತದ ಶೂಟರ್‌ಗಳು ಪದಕ ಕ್ಲೀನ್‌ಸ್ವೀಪ್ ಮಾಡಿದರು.
25 ಮೀಟರ್ ಸ್ಟಾಂಡರ್ಡ್ ಪಿಸ್ತೂಲ್‌ನ ಪುರುಷ ಹಾಗೂ ಮಹಿಳಾ ವಿಭಾಗ, 50 ಮೀಟರ್ ಪಿಸ್ತೂಲ್ ಸ್ಪರ್ಧೆಯ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಎಲ್ಲಾ ಪದಕ ಭಾರತದ ಪಾಲಾಯಿತು. ಟೂರ್ನಿಯಲ್ಲಿ ಸ್ಪರ್ಧಿಸಿದ ಎಲ್ಲಾ 5 ವಿಭಾಗದಲ್ಲೂ ಮನು ಭಾಕರ್ (Manu Bhaker) ಪದಕ ಗೆದ್ದು ದಾಖಲೆ ಬರೆದರು. ಮನು ಭಾಕರ್ 4 ಚಿನ್ನ, 1 ಕಂಚು ಜಯಿಸಿದರು. ಈ ಮೂಲಕ ಐಎಸ್‌ಎಸ್‌ಎಫ್ ವಿಶ್ವ ಕಿರಿಯರ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 5 ಪದಕ ಗೆದ್ದ ಭಾರತದ ಮೊದಲ ಶೂಟರ್ ಎನ್ನುವ ಕೀರ್ತಿ ಮನು ಭಾಕರ್ ಪಾಲಾಗಿದೆ.
ISSF ಕಿರಿಯರ ಶೂಟಿಂಗ್ ವಿಶ್ವಕಪ್: ಭಾರತ ಭರ್ಜರಿ ಪದಕ ಬೇಟೆ
16 ಚಿನ್ನ, 15 ಬೆಳ್ಳಿ, 9 ಕಂಚು ಸೇರಿ ಒಟ್ಟು 40 ಪದಕ ಗೆದ್ದ ಭಾರತ ಅಗ್ರಸ್ಥಾನ ಪಡೆದರೆ, ಅಮೆರಿಕ 21 ಪದಕದೊಂದಿಗೆ 2ನೇ ಸ್ಥಾನಿಯಾಯಿತು. 2017ರಲ್ಲಿ ನಡೆದಿದ್ದ ಮೊದಲ ಆವೃತ್ತಿಯಲ್ಲಿ ಭಾರತ 4 ಚಿನ್ನ ಸೇರಿ 10 ಪದಕ ಗೆದ್ದಿತ್ತು.
ಸ್ಯಾಫ್ ಕಪ್: ಭಾರತಕ್ಕೆ ಮೊದಲ ಜಯ
ಮಾಲೆ: ಸ್ಯಾಫ್ ಕಪ್ ಫುಟ್ಬಾಲ್ (Football) ಟೂರ್ನಿಯ ಫೈನಲ್ ಪ್ರವೇಶಿಸುವ ಆಸೆಯನ್ನು ಭಾರತ ಜೀವಂತವಾಗಿರಿಸಿಕೊಂಡಿದೆ. ಭಾನುವಾರ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ಜಯಿಸಿತು.
ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ, ಮೊದಲ ಗೆಲುವು ದಾಖಲಿಸಿತು. ನಾಯಕ ಸುನಿಲ್ ಚೆಟ್ರಿ (Sunil Chhetri) 82ನೇ ನಿಮಿಷದಲ್ಲಿ ಬಾರಿಸಿದ ಗೋಲು ಭಾರತಕ್ಕೆ ಗೆಲುವು ತಂದುಕೊಟ್ಟಿತು. 3 ಪಂದ್ಯಗಳಿಂದ 5 ಅಂಕ ಕಲೆಹಾಕಿರುವ ಭಾರತ, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಅ.13ರಂದು ಅಂತಿಮ ಪಂದ್ಯದಲ್ಲಿ ಆತಿಥೇಯ ಮಾಲ್ಡೀವ್ಸ್ ವಿರುದ್ಧ ಆಡಲಿರುವ ಭಾರತ, ಗೆದ್ದರಷ್ಟೇ ಫೈನಲ್‌ಗೇರಲಿದೆ.
ಉಬರ್ ಕಪ್ ಬ್ಯಾಡ್ಮಿಂಟನ್: ಭಾರತ ತಂಡ ಶುಭಾರಂಭ
ಆರ್ಹಸ್(ಡೆನ್ಮಾರ್ಕ್): ತಾರಾ ಶಟ್ಲರ್ ಸೈನಾ ನೆಹ್ವಾಲ್ (Saina Nehwal) ಗಾಯಗೊಂಡು ಪಂದ್ಯದಿಂದ ನಿವೃತ್ತಿ ಪಡೆದ ಹೊರತಾಗಿಯೂ ಭಾರತ ತಂಡ ಉಬರ್ ಕಪ್‌ನಲ್ಲಿ ಶುಭಾರಂಭ ಮಾಡುವಲ್ಲಿ ಯಶಸ್ವಿಯಾಗಿದೆ. ಭಾನುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಸ್ಪೇನ್ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿತು. ಮೊದಲ ಪಂದ್ಯದ ಮೊದಲ ಗೇಮ್‌ನಲ್ಲಿ ಸೈನಾ, ಕ್ಲಾರಾ ಅಜುರ್‌ಮೆಂಡಿ ವಿರುದ್ಧ 20-22ರಲ್ಲಿ ಸೋತು ನಿವೃತ್ತಿ ಪಡೆದರು.
ಬಳಿಕ 2ನೇ ಸಿಂಗಲ್ಸ್ ಪಂದ್ಯದಲ್ಲಿ ಮಾಳ್ವಿಕಾ ಬನ್ಸೋದ್ 21-13, 21-15ರಲ್ಲಿ ಮಾಜಿ ವಿಶ್ವ ನಂ.20 ಬೀಟ್ರಿರ್‌್ಜ ಕೊರ್ರೆಲ್ಸ್‌ವಿರುದ್ಧ ಗೆದ್ದರೆ, ಡಬಲ್ಸ್ ಮೊದಲ ಪಂದ್ಯದಲ್ಲಿ ತನಿಷಾ ಕ್ರಾಸ್ಟೋ-ರುತುಪರ್ಣಾ ಪಾಂಡ ಜೋಡಿ ಪೌರಾ ಲೊಪೆಜ್ ಹಾಗೂ ಲೊರೆನಾ ಉಸ್ಲೆ ವಿರುದ್ಧ 21-10, 21-8ರಲ್ಲಿ ಜಯಿಸಿ 2-1ರ ಮುನ್ನಡೆ ಒದಗಿಸಿತು.
3ನೇ ಸಿಂಗಲ್ಸ್‌ನಲ್ಲಿ ಅದಿತಿ ಭಟ್ 21-16, 21-14ರಲ್ಲಿ ಆ್ಯನಿಯಾ ಸೀಟೆನ್ ವಿರುದ್ಧ ಗೆದ್ದು 3-1ರ ಮುನ್ನಡೆ ನೀಡಿದರು. ಡಬಲ್ಸ್ 2ನೇ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಸೋಲುಂಡಿತು. 2ನೇ ಪಂದ್ಯದಲ್ಲಿ ಭಾರತ, ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.