ಇಂಡೋನೇಷ್ಯಾ ಮಾಸ್ಟರ್ಸ್: ಮುನ್ನಡೆದ ಸಿಂಧು, ಸೈನಾ ಔಟ್‌

By Suvarna NewsFirst Published Jan 16, 2020, 10:59 AM IST
Highlights

ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ಮಿಶ್ರಫಲ ಎದುರಾಗಿದ್ದು, ಪಿ.ವಿ. ಸಿಂಧು ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಸೈನಾ ನೆಹ್ವಾಲ್ ಸೇರಿದಂತೆ ಭಾರತದ ಪ್ರಮುಖ ಶಟ್ಲರ್‌ಗಳು ಆಘಾತಕಾರಿ ಸೋಲುಂಡು ಕೂಟದಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಜಕಾರ್ತ(ಜ.16): ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು, ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಸೇರಿದಂತೆ ಭಾರತದ ಪ್ರಮುಖ ಶಟ್ಲರ್‌ಗಳು ಮೊದಲ ಸುತ್ತಿನಲ್ಲೇ ಸೋಲುಂಡು ಹೊರಬಿದ್ದಿದ್ದಾರೆ.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು, ಜಪಾನ್‌ನ ಅಯಾ ಒಹೊರಿ ವಿರುದ್ಧ 14-21, 21-15, 21-11 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಒಹೊರಿ ವಿರುದ್ಧ 10ನೇ ಗೆಲುವು ಸಾಧಿಸಿದರು. ಕಳೆದ ವಾರ ಮಲೇಷ್ಯಾ ಮಾಸ್ಟ​ರ್ಸ್‌ನ 2ನೇ ಸುತ್ತಿನಲ್ಲಿ ಇದೇ ಎದುರಾಳಿ ವಿರುದ್ಧ ಸಿಂಧು ಜಯಿಸಿದ್ದರು.

ಇಂಡೊನೇಷ್ಯಾ ಮಾಸ್ಟರ್ಸ್‌: ಲಕ್ಷ್ಯ, ಶುಭಾಂಕರ್‌ ಔಟ್‌

ಕಳೆದ ವರ್ಷ ಇಲ್ಲಿ ಪ್ರಶಸ್ತಿ ಗೆದ್ದಿದ್ದ ಸೈನಾ, ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಸಕಾಯ ತಕಹಾಶಿ ವಿರುದ್ಧ 21-19, 13-21, 5-21 ಗೇಮ್‌ಗಳಲ್ಲಿ ಪರಾಭವಗೊಂಡರು. ಸೈನಾಗೆ ಸೋಲುಣಿಸಿದ ತಕಹಾಶಿ ವಿರುದ್ಧ ಸಿಂಧು 2ನೇ ಸುತ್ತಿನ ಪಂದ್ಯವನ್ನು ಆಡಲಿದ್ದಾರೆ.

ವಿಶ್ವ ನಂ.12 ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸ್ಥಳೀಯ ಆಟಗಾರ ಶೆಸರ್‌ ಹಿರೆನ್‌ ವಿರುದ್ಧ 21-18, 12-21, 14-21 ಗೇಮ್‌ಗಳಲ್ಲಿ ಸೋಲುಂಡರು. ಬಿ.ಸಾಯಿಪ್ರಣೀತ್‌ 8ನೇ ಶ್ರೇಯಾಂಕಿತ ಚೀನಾದ ಶಿ ಯೂಕಿ ವಿರುದ್ಧ 21-16, 18-21, 10-21 ಗೇಮ್‌ಗಳಲ್ಲಿ ಪರಾಭವಗೊಂಡರೆ, ಸೌರಭ್‌ ವರ್ಮಾ ಚೀನಾದ ಲು ಗುವಾಂಗ್‌ ಜು ವಿರುದ್ಧ 21-17, 15-21, 10-21 ಗೇಮ್‌ಗಳಲ್ಲಿ ಸೋಲುಂಡರು. ಮೊದಲ ಸುತ್ತಿನಲ್ಲಿ ಸೋಲುಂಡ ಭಾರತದ ಆಟಗಾರರೆಲ್ಲರೂ ಮೊದಲ ಗೇಮ್‌ನಲ್ಲಿ ಗೆಲುವು ಸಾಧಿಸಿ, ಬಳಿಕ ಪಂದ್ಯ ಬಿಟ್ಟುಕೊಟ್ಟಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಮೊದಲ ಸುತ್ತಿನಲ್ಲಿ ದ.ಕೊರಿಯಾದ ಕೊ ಸುಂಗ್‌ ಹ್ಯುನ್‌ ಹಾಗೂ ಇಯೊಮ್‌ ವೊನ್‌ ವಿರುದ್ಧ 8-21, 14-21 ಗೇಮ್‌ಗಳಲ್ಲಿ ಸೋಲುಂಡಿತು. ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿಜೋಡಿ ಸಹ ಪರಾಭವಗೊಂಡಿತು.
 

click me!