ಉಡುಪಿಯಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ: ಹರ್ಯಾಣದ ಕುರುಕ್ಷೇತ್ರ ವಿವಿ ಜಯ

By Suvarna NewsFirst Published Jan 9, 2023, 6:15 PM IST
Highlights

ಕಳೆದ ನಾಲ್ಕು ದಿನಗಳಿಂದ ಮಂಗಳೂರು ವಿಶ್ವವಿದ್ಯಾನಿಲಯ ಸಹಭಾಗಿತ್ವದಲ್ಲಿ  ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಮೈದಾನದಲ್ಲಿ ನಡೆದ ಅಖಿಲ ಭಾರತೀಯ ಅಂತರ್ ವಿಶ್ವವಿದ್ಯಾನಿಲಯದ ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ  ಹರ್ಯಾಣದ ಕುರುಕ್ಷೇತ್ರ ವಿವಿ ಗೆಲುವು ಕಂಡಿದೆ.

ಉಡುಪಿ (ಜ.9): ಕಳೆದ ನಾಲ್ಕು ದಿನಗಳಿಂದ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಮೈದಾನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಪೂರ್ಣಪ್ರಜ್ಞಾ ಕಾಲೇಜ್ ನ ಸಹಭಾಗಿತ್ವದಲ್ಲಿ ನಡೆಯುತ್ತಿದ್ದ ಅಖಿಲ ಭಾರತೀಯ ಅಂತರ್ ವಿಶ್ವವಿದ್ಯಾನಿಲಯದ ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯಾಟಕ್ಕೆ ಭಾನುವಾರ ಸಂಜೆ ಸಾವಿರಾರು ಪ್ರೇಕ್ಷಕರು ಸಾಕ್ಷಿಯಾದರು. ರೋಚಕವಾಗಿ ನಡೆದ ಫೈನಲ್ ಪಂದ್ಯಾಟದಲ್ಲಿ ಹರ್ಯಾಣದ ಕುರುಕ್ಷೇತ್ರ ವಿವಿಯೂ, ಚೆನೈನ ಎಸ್.ಆರ್.ಎಮ್ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ  ಸಂಸ್ಥೆಯ ತಂಡವನ್ನು 3 - 0 ( 25-18,25-17,25-18) ಸೆಟ್‌ಗಳಲ್ಲಿ ಸೋಲಿಸಿ, ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.

ಸೆಮಿಫೈನಲ್ ಪಂದ್ಯಾಟದಲ್ಲಿ ಕುರುಕ್ಷೇತ್ರ ವಿವಿ, ಕ್ಯಾಲಿಕಟ್ ವಿವಿ ತಂಡದ ವಿರುದ್ದ 3-2 ಸೆಟ್ ಗಳಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಮತ್ತೊಂದು ಪಂದ್ಯಾಟದಲ್ಲಿ ಚೆನೈ ಎಸ್.ಆರ್.ಎಮ್ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆ ಆತೀಥೆಯ ಮಂಗಳೂರು ವಿಶ್ವವಿದ್ಯಾನಿಲಯದ ವಿರುದ್ದ 3-0 ಸೆಟ್ ಗಳಲ್ಲಿ ಗೆದ್ದು ಫೈನಲ್ ಪ್ರವೇಶ ಪಡೆದಿತ್ತು. 

ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟ ಮಂಗಳೂರು ವಿವಿ
ಮೂರು ಮತ್ತು ನಾಲ್ಕನೆ ಸ್ಥಾನಕ್ಕೆ ಆತೀಥೆಯ ಮಂಗಳೂರು ಮತ್ತು ಕ್ಯಾಲಿಕಟ್ ವಿವಿಯ ನಡುವೆ ನಡೆದ ಪಂದ್ಯಾಟದಲ್ಲಿ 3-1 ಸೆಟ್ ನಲ್ಲಿ ಕ್ಯಾಲಿಕಟ್ ವಿವಿಗೆ ಮಂಗಳೂರು ವಿವಿ ಶರಣಾಯಿತು. ಮೊದಲ ಸೆಟ್ ಗೆದ್ದು ಬೀಗಿದ ಮಂಗಳೂರು ವಿವಿ ನಂತರ ಮೂರು ಸೆಟ್ ಗಳನ್ನು ಕ್ಯಾಲಿಕಟ್ ವಿವಿಗೆ ಬಿಟ್ಟುಕೊಟ್ಟಿತು. 

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅದಮಾರು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥರು ಮಾತನಾಡಿ, ಕ್ರೀಡೆ, ವಿಜ್ಞಾನ ಹಾಗು ಧಾರ್ಮಿಕ ಚಿಂತನೆಯುಳ್ಳ ವ್ಯಕ್ತಿಗಳು ತಯಾರಾಗಬೇಕೆಂದು ಶ್ರೀ ವಿಭುದೇಶತೀರ್ಥರ ಕಲ್ಪನೆ ಇತ್ತು. ಇಂದು ವಿಭುದೇಶತೀರ್ಥರ ಆರ್ಶೀವಾದ ಹಾಗು ವಿಶ್ವಪ್ರಿಯತೀರ್ಥರ ಸಹಕಾರದಿಂದ ಇದು ಯಶಸ್ವಿಯಾಗಿದೆ. ಪಿಪಿಸಿಯ ಎನ್.ಎಸ್.ಎಸ್ ಹಾಗು ಕ್ರೀಡಾ ವಿಭಾಗದ ವಿದ್ಯಾರ್ಥಿಗಳ ಅನನ್ಯ ಸೇವೆಯನ್ನು ಕೊಂಡಾಡಿದರು‌. 

ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ಎಮ್.ಡಿ ಮತ್ತು ಸಿಇಓ ಮಹಾಬಲೇಶ್ವರ್ ಎಮ್.ಎಸ್, ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಡಾ| ಜಿ.ಎಸ್.ಚಂದ್ರಶೇಖರ್, ಕಾಲೇಜಿನ ಪ್ರಾಂಶುಪಾಲ ಡಾ| ರಾಘವೇಂದ್ರ.ಎ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಮೇರಿ, ಶಾಸಕ ರಘುಪತಿ ಭಟ್, ಕರ್ನಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ಎ.ಜಿ.ಎಮ್. ರಾಜ್ ಗೋಪಾಲ್, ಅದಮಾರು ಕಾಲೇಜಿನ ಅಧಿಕಾರಿ ಗಣೇಶ್ ಹೆಬ್ಬಾರ್, ಮಂಗಳೂರು ವಿವಿ ಯ ಕ್ರೀಡಾ ಇಲಾಖಾ ಅಧಿಕಾರಿ ಡಾ| ಜೆರಾಲ್ಡ್ ಸಂತೋಷ್ ಡಿಸೋಜಾ, ಗುರ್ಮೆ ಫೌಂಡೇಶನ್ ನ ಸಂಸ್ಥಾಪಕ ಸುರೇಶ್ ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು.

ರಾಜ್ಯದಲ್ಲೇ ಅತೀ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆ ಉಡುಪಿ, ಅತ್ಯಂತ ಕಡಿಮೆ ಬೆ. ಗ್ರಾಮಾಂತರ

ಕಾಲೇಜಿನ ಆಡಳಿತ ಮಂಡಳಿ ಖಜಾಂಚಿ ಪ್ರಶಾಂತ್ ಹೊಳ್ಳ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ವಂದಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸುಮಲತಾ ನಿರೂಪಿಸಿದರು.

Udupi: ಸಂಜೀವಿನಿ ಸಂತೆ ಮತ್ತು ಸಾಂಸ್ಕೃತಿಕ ಕಲರವ, ನಟಿ ಮಾನಸಿ ಸುಧೀರ್ ಭಾಗಿ

ಟೂರ್ನಿಯಲ್ಲಿ ಅತ್ಯುತ್ತಮ ಆ್ಯಟಾಕರ್ ಕುರುಕ್ಷೇತ್ರ ವಿವಿಯ  ಸವಾನ್, ಲಿಬೆರೋ ಚೆನೈಯ ಎಸ್.ಆರ್.ಎಮ್ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಯ ಶ್ರೀಕಾಂತ್, ಸೆಟ್ಟರ್ ಕುರುಕ್ಷೇತ್ರ ವಿವಿಯ ಸಮೀರ್, ಬ್ಲಾಕರ್ ಚೆನೈನ ಎಸ್.ಆರ್.ಎಮ್ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಯ ಉಡುಪಿ ಮೂಲದ ಸೃಜನ್ ಶೆಟ್ಟಿ, ಯೂನಿವರ್ಸಲ್ ಆಟಗಾರ ಕ್ಯಾಲಿಕಟ್ ವಿವಿಯ ಅರುಣ್, ಅತ್ಯುತ್ತಮ ಆಟಗಾರ ಕುರುಕ್ಷೇತ್ರ ವಿವಿಯ ಸೂರ್ಯನಿಶ್ ಪಡೆದುಕೊಂಡರು.

click me!