ವೇಟ್‌ಲಿಫ್ಟಿಂಗ್‌ ವಿಶ್ವ ಕೂಟ: ಚಿನ್ನ ಗೆದ್ದು ಇತಿಹಾಸ ಬರೆದ ಹರ್ಷದಾ ಶರದ್‌

By Kannadaprabha News  |  First Published May 3, 2022, 9:27 AM IST

* ಕಿರಿಯರ ವೇಟ್‌ಲಿಫ್ಟಿಂಗ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಷದಾ ಶರದ್‌ ಗರುಡ್‌

* ಗ್ರೀಸ್‌ ದೇಶದಲ್ಲಿ ನಡೆಯುತ್ತಿರುವ ವೇಟ್‌ಲಿಫ್ಟಿಂಗ್‌ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌

* ಮಹಿಳೆಯರ 45 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 153 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದ ಹರ್ಷದಾ ಶರದ್‌ ಗರುಡ್‌


ನವದೆಹಲಿ(ಮೇ.03): ಗ್ರೀಸ್‌ ದೇಶದಲ್ಲಿ ನಡೆಯುತ್ತಿರುವ ವೇಟ್‌ಲಿಫ್ಟಿಂಗ್‌ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Junior World Weightlifting Championship) ಹರ್ಷದಾ ಶರದ್‌ ಗರುಡ್‌ ಚಿನ್ನದ ಪದಕ ಗೆದ್ದಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ವೇಟ್‌ಲಿಫ್ಟರ್‌ ಎಂಬ ದಾಖಲೆ ಬರೆದಿದ್ದಾರೆ. ಹರ್ಷದಾ ಸೋಮವಾರ ಮಹಿಳೆಯರ 45 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 153 ಕೆ.ಜಿ. (ಸ್ನ್ಯಾಚ್‌ನಲ್ಲಿ 70 ಕೆ.ಜಿ.+ ಕ್ಲೀನ್‌ ಅಂಡ್‌ ಜರ್ಕ್‌ನಲ್ಲಿ 83 ಕೆ.ಜಿ.) ಭಾರ ಎತ್ತಿ ಬಂಗಾರಕ್ಕೆ ಮುತ್ತಿಕ್ಕಿದರೆ, ಟರ್ಕಿಯ ಬೆಕ್ತಾಸ್‌ ಬೆಳ್ಳಿ ಪದಕ ಪಡೆದರು.

ಇನ್ನು ಇದೇ ವೇಳೆ ಭಾರತದ ಮತ್ತೊಬ್ಬ ಸ್ಪರ್ಧಿ ಅಂಜಲಿ ಪಟೇಲ್‌ 148 ಕೆ.ಜಿ. ಭಾರ ಎತ್ತಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2013ರಲ್ಲಿ ಮೀರಾಬಾಯಿ ಚಾನು ಕಂಚು, ಕಳೆದ ವರ್ಷ ಅಚಿಂತಾ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಹರ್ಷದಾ ಶರದ್‌ ಗರುಡ್‌ (Harshada Sharad Garud) ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Tap to resize

Latest Videos

undefined

ವಿಶ್ವ ಹಾಕಿ ರ‍್ಯಾಂಕಿಂಗ್‌ನಲ್ಲಿ ಭಾರತದ ತಂಡಗಳ ಜಿಗಿತ

ಲೌಸನ್‌: ಪ್ರೊ ಲೀಗ್‌ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು (Indian Men's & Women's Hockey Team) ಎಫ್‌ಐಎಚ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿವೆ. ಪ್ರೊ ಲೀಗ್‌ನಲ್ಲಿ 12ರಲ್ಲಿ 9 ಗೆಲುವುಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿರುವ ಪುರುಷರ ತಂಡ ಮಂಗಳವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿದೆ. 

ಆಸ್ಪ್ರೇಲಿಯಾ ಅಗ್ರಸ್ಥಾನದಲ್ಲಿದ್ದು, ಬೆಲ್ಜಿಯಂ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಇನ್ನು ಮಹಿಳಾ ರ‍್ಯಾಂಕಿಂಗ್‌ನಲ್ಲಿ ಭಾರತ 7ನೇ ಸ್ಥಾನಕ್ಕೆ ಜಿಗಿದಿದೆ. ನೆದರ್‌ಲೆಂಡ್‌್ಸ ಮತ್ತು ಅರ್ಜೆಂಟೀನಾ ಮೊದಲೆರಡು ಸ್ಥಾನಗಳನ್ನು ಕಾಯ್ದುಕೊಂಡಿವೆ. ಆಸ್ಪ್ರೇಲಿಯಾ, ಇಂಗ್ಲೆಂಡ್‌, ಜರ್ಮನಿ, ಸ್ಪೇನ್‌ ನಂತರದ ಸ್ಥಾನಗಳಲ್ಲಿವೆ.

ವಿಂಬಲ್ಡನ್‌ನಿಂದ ರಷ್ಯಾ, ಬೆಲಾರುಸ್‌ಗೆ ನಿಷೇಧ: ಜೋಕೋ, ರಾಫಾ ಆಕ್ಷೇಪ

ಮ್ಯಾಡ್ರಿಡ್‌: ಉಕ್ರೇನ್‌ ಮೇಲೆ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ಜೊತೆ ಬೆಲಾರುಸ್‌ನ ಟೆನಿಸಿಗರಿಗೆ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೂರ್ನಿಗೆ ನಿಷೇಧ ಹೇರಲಾಗಿದ್ದು, ಇದಕ್ಕೆ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ ಹಾಗೂ ರಾಫೆಲ್‌ ನಡಾಲ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

Badminton Asia Championships ಅಂಪೈರ್‌ ಅನ್ಯಾಯದಿಂದಾಗಿ ಸೋತೆ: ಪಿ.ವಿ.ಸಿಂಧು ಆಕ್ರೋಶ

‘ಇದು ರಷ್ಯಾದ ನನ್ನ ಸಹ ಆಟಗಾರರಿಗೆ ಮಾಡಿದ ಅನ್ಯಾಯ. ಅವರೇನು ತಪ್ಪು ಮಾಡಿದ್ದಾರೆ’ ಎಂದು ನಡಾಲ್‌ ಪ್ರಶ್ನಿಸಿದ್ದಾರೆ. ‘ಆಡಲು ಅನುಮತಿ ಸಿಗದೇ ಇರುವುದು ನಿಜಕ್ಕೂ ನಿರಾಸೆ ಮೂಡಿಸುತ್ತದೆ. ವಿಂಬಲ್ಡನ್‌ ಆಯೋಜಕರ ನಿರ್ಧಾರ ಸರಿಯಲ್ಲ’ ಎಂದು ಜೋಕೋವಿಚ್‌ ಕಿಡಿಕಾರಿದ್ದಾರೆ. ನಿಷೇಧ ಮುಂದುವರಿದರೆ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌, ಆ್ಯಂಡ್ರೆ ರುಬ್ಲೆವ್‌, ಪಾವ್ಲುಚೆಂಕೋವಾ, ಬೆಲಾರುಸ್‌ನ ಅಜರೆಂಕಾ ಸೇರಿದಂತೆ ಹಲವರಿಗೆ ವಿಂಬಲ್ಡನ್‌ನಲ್ಲಿ ಆಡಲು ಅವಕಾಶ ಸಿಗುವುದಿಲ್ಲ.

ಸಂತೋಷ್‌ ಟ್ರೋಫಿ: ಕೇರಳ ಚಾಂಪಿಯನ್‌

ಮಲಪ್ಪುರಂ: 75ನೇ ಆವೃತ್ತಿಯ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕೇರಳ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಸೋಮವಾರ ಬಂಗಾಳ ವಿರುದ್ಧ ನಡೆದ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳ ಗೆಲುವು ಸಾಧಿಸಿ, 7ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು. 33ನೇ ಬಾರಿಗೆ ಟ್ರೋಫಿ ಗೆಲ್ಲುವ ಬಂಗಾಳದ ಕನಸು ಈಡೇರಲಿಲ್ಲ. ನಿಗದಿತ 90 ನಿಮಿಷಗಳ ಮುಕ್ತಾಯಕ್ಕೆ ಎರಡೂ ತಂಡಗಳು ಗೋಲು ಗಳಿಸಿರಲಿಲ್ಲ. ಬಳಿಕ 30 ನಿಮಿಷದ ಹೆಚ್ಚುವರಿ ಸಮಯದಲ್ಲಿ ಉಭಯ ತಂಡಗಳು ತಲಾ 1 ಗೋಲು ಗಳಿಸಿದ್ದರಿಂದ ಪಂದ್ಯ ಶೂಟೌಟ್‌ನಲ್ಲಿ ನಿರ್ಧಾರವಾಯಿತು.

click me!