
ಬೆಂಗಳೂರು(ಮೇ.03): 2ನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ನ (Khelo India University Games 2022 ) ಬಹುತೇಕ ಸ್ಪರ್ಧೆಗಳು ಮುಕ್ತಾಯಗೊಂಡಿದ್ದು, ಆತಿಥೇಯ ಜೈನ್ ವಿವಿ (Jain University) ಚಾಂಪಿಯನ್ ಆಗಿ ಹೊರಹೊಮ್ಮುವುದು ಖಚಿತವಾಗಿದೆ. ಅಥ್ಲೆಟಿಕ್ಸ್‌ನಲ್ಲಿ ಮತ್ತೊಮ್ಮೆ ಪ್ರಭುತ್ವ ಸಾಧಿಸಿದ ಮಂಗಳೂರು ವಿವಿ ಈ ವರ್ಷವೂ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದ ಒಲಿಂಪಿಯನ್ ದ್ಯುತಿ ಚಂದ್ ಅವರನ್ನು 200 ಮೀ. ಓಟದಲ್ಲಿ ಸೋಲಿಸಿದ ಕರ್ನಾಟಕದ ಪ್ರಿಯಾ ಮೋಹನ್ ದೇಶದ ನಂ.1 ಓಟಗಾರ್ತಿಯಾಗಿ ಹೊರಹೊಮ್ಮಿದರು.
ಈಜುಕೊಳದಲ್ಲಿ ಪ್ರಾಬಲ್ಯ ಮೆರೆದ ಜೈನ್ ವಿವಿ 20 ಚಿನ್ನ ಸೇರಿದಂತೆ ಒಟ್ಟಾರೆ 31 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಳೆದ ಬಾರಿ ಆಥ್ಲೆಟಿಕ್ಸ್‌ನಲ್ಲಿ 18 ಪದಕ ಗೆದ್ದಿದ್ದ ಮಂಗಳೂರು ವಿವಿ ಈ ಬಾರಿ 6 ಚಿನ್ನ 6 ಬೆಳ್ಳಿ ಮತ್ತು 6 ಕಂಚಿನ ಪದಕಗಳೊಂದಿಗೆ ಮತ್ತೆ ನಂ.1 ಚಾಂಪಿಯನ್ ಪಟ್ಟ ಅಲಂಕರಿಸಿತು.
ವಿಘ್ನೇಶ್‌ಗೆ 2ನೇ ಚಿನ್ನ: ಕ್ರೀಡಾಕೂಟದ ವೇಗದ ಓಟಗಾರ ಮಂಗಳೂರು ವಿವಿಯ ವಿಘ್ನೇಶ್ 200 ಮೀ.ನಲ್ಲಿ 21.28 ಸೆಕೆಂಡುಗಳಲ್ಲಿ ಕ್ರಮಿಸಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 100 ಮೀ.ನಲ್ಲೂ ವಿಘ್ನೇಶ್ ಚಿನ್ನದ ಸಾಧನೆ ಮಾಡಿದ್ದರು. ಬೆಂಗಳೂರು ವಿವಿಯ ಶಶಿಕಾಂತ್ ಕೂಟ ದಾಖಲೆಯೊಂದಿಗೆ ಬೆಳ್ಳಿ, ಮಂಗಳೂರು ವಿವಿಯ ತೀರ್ಥೇಶ್ ಶೆಟ್ಟಿ ಕಂಚು ಪಡೆದರು. ಪುರುಷರ 800 ಮೀ. ಓಟದಲ್ಲಿ ಮಂಗಳೂರು ವಿವಿಯ ಟಿ.ಎಚ್.ದೇವಯ್ಯ, ವನಿತೆಯರ 800 ಮೀ. ಓಟದಲ್ಲಿ ಬೆಂಗಳೂರು ವಿವಿಯ ಅರ್ಪಿತಾ ಬೆಳ್ಳಿ ಗೆದ್ದರು. ವನಿತೆಯರ 1,500 ಮೀ. ಸ್ಪರ್ಧೆಯಲ್ಲಿ ಮಂಗಳೂರು ವಿವಿಯ ರಾಧಾ ಸಿಂಗ್ 4 ನಿ. 34.43 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಪಡೆದರು. ವನಿತೆಯರ ಶಾಟ್‌ಪುಟ್‌ನಲ್ಲಿ ಮೈಸೂರು ವಿವಿಯ ಅಂಬಿಕಾ ಚಿನ್ನ, ಮಂಗಳೂರು ವಿವಿಯ ರೇಖಾ ಕಂಚು ಗೆದ್ದರು.
Khelo India University Games: ಹಾಕಿಯಲ್ಲಿ ಬೆಂಗಳೂರು ಸಿಟಿ ವಿವಿ ಚಾಂಪಿಯನ್
ರಿಲೇಯಲ್ಲಿ ಮಂಗಳೂರು ಪ್ರಭುತ್ವ : 4*100 ಮೀ. ರಿಲೇ ಓಟದಲ್ಲಿ 40.76 ಸೆಕೆಂಡುಗಳಲ್ಲಿ ಗುರಿ ತಲುಪಿದ ಮಂಗಳೂರು ವಿವಿಯ ಶಿಜಾನ್, ಅಭಿನ್ ದೇವಾಡಿಗ, ತಿರ್ಥೇಶ್ ಹಾಗೂ ವಿಘ್ನೇಶ್ ಅವರನ್ನೊಳಗೊಂಡ ತಂಡ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿತು. ಪುರುಷರ 4*400 ರಿಲೇಯಲ್ಲಿಯೂ ಮಹಾಂತೇಶ್ ಹೆಳವಿ, ದೇವಯ್ಯ, ಮಿಲನ್ ಮತ್ತು ನಿಹಾಲ್ ಅವರನ್ನೊಳಗೊಂಡ ಮಂಗಳೂರು ವಿವಿ ತಂಡ 3 ನಿ. 13.44 ಸೆಕೆಂಡುಗಳಲ್ಲಿ ಗುರಿ ತಲುಪಿ ಕೂಟ ದಾಖಲೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡಿತು.
ದ್ಯುತಿಗೆಗೆ ಶಾಕ್ ನೀಡಿದ ಪ್ರಿಯಾ
ವನಿತೆಯರ 200 ಮೀ. ಓಟದಲ್ಲಿ ಏಷ್ಯನ್ ಗೇಮ್ಸ್ ಪದಕ ವಿಜೇತೆ ದ್ಯುತಿ ಚಂದ್‌ರನ್ನು (Dutee Chand) ಸೋಲಿಸಿ ಜೈನ್ ವಿವಿಯ ಪ್ರಿಯಾ ಮೋಹನ್ (Priya Mohan) ಗಮನ ಸೆಳೆದರು. 100 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ದ್ಯುತಿ ಈ ಸ್ಪರ್ಧೆಯಲ್ಲಿ 24.02 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪಡೆದರೆ, 23.90 ಸೆಕೆಂಡುಗಳಲ್ಲಿ ಕ್ರಮಿಸಿದ ಪ್ರಿಯಾ ಚಿನ್ನ ಪಡೆದರು. ಅಂಡರ್-20 ವಿಶ್ವ ಅಥ್ಲೆಟಿಕ್ಸ್‌ನ ಪದಕ ವಿಜೇತೆ ಪ್ರಿಯಾ ಕೆಲ ವರ್ಷಗಳಿಂದ ರಾಷ್ಟ್ರೀಯ ಕೂಟಗಳಲ್ಲಿ ಮಿಂಚುತ್ತಿದ್ದು, ಮುಂಬರುವ ಏಷ್ಯನ್ ಗೇಮ್ಸ್, ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.