
ಸೆಪ್ಟೆಂಬರ್ 19ರಿಂದ ಜಪಾನ್‌ನ ಐಚಿ-ನಗೋಯಾದಲ್ಲಿ ಆರಂಭವಾಗಿರುವ 2026ರ ಏಷ್ಯನ್ ಕ್ರೀಡಾಕೂಟವು ಅಕ್ಟೋಬರ್ 4ರವರೆಗೆ ಮುಂದುವರೆಯಲಿದೆ. ಭಾರತದ ಪದಕ ಬೇಟೆ ಇಂದೂ ಮುಂದುವರಿದಿದ್ದು, ಶೂಟಿಂಗ್, ಕ್ರಿಕೆಟ್, ಕುರಾಶ್ ಮತ್ತು ಬಾಕ್ಸಿಂಗ್ ವಿಭಾಗಗಳಲ್ಲಿ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂದು ದೇಶವು ತನ್ನ ಪದಕಗಳ ಪಟ್ಟಿಗೆ ಇನ್ನೂ ನಾಲ್ಕು ಪದಕಗಳನ್ನು ಸೇರಿಸಿಕೊಂಡಿದ್ದು, ಭಾರತೀಯ ಪುರುಷರ ಕ್ರಿಕೆಟ್ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಒಟ್ಟಾರೆಯಾಗಿ ಈ ಬಾರಿ ಇಲ್ಲಿಯವರೆಗೆ ಭಾರತವು, 45 ಪದಕಗಳನ್ನು ಗೆದ್ದಿದೆ. ಇದರಲ್ಲಿ 4 ಚಿನ್ನ, 20 ಬೆಳ್ಳಿ ಮತ್ತು 21 ಕಂಚು ಸೇರಿದೆ. ಹಾಗೆ ನೋಡಿದರೆ, ಭಾರತ ಅತಿ ಹೆಚ್ಚು ಪದಕ ಪಡೆದದ್ದು 2023ರ ಏಷ್ಯನ್ ಗೇಮ್ಸ್‌ನಲ್ಲಿ. 107 ಪದಕವನ್ನು ಭಾರತ ಗೆದ್ದುಕೊಂಡಿತ್ತು. 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನ ಪದಕ ಭಾರತದ ಪಾಲಾಗಿತ್ತು. ಹಾಗೆ ನೋಡಿದರೆ, ಈ ಬಾರಿ ಪದಕಗಳ ಪಟ್ಟಿ ಇನ್ನೂ ಮುಂದುವರೆಯುವ ನಿರೀಕ್ಷೆ ಇದ್ದು, ಭಾರತ ದಾಖಲೆ ಬರೆಯತ್ತಾ ಎನ್ನುವುದನ್ನು ನೋಡಬೇಕಿದೆ.
ಇವತ್ತಿನ ವಿಷಯಕ್ಕೆ ಬರುವುದಾದರೆ, ಕ್ರೀಡಾಪಟು ಗುಲ್ವೀರ್ ಸಿಂಗ್ ಪುರುಷರ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ತಮ್ಮ ಎರಡನೇ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಗುಲ್ವೀರ್ 3 ನಿಮಿಷ 37.92 ಸೆಕೆಂಡುಗಳ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇವರು ಈ ಹಿಂದೆ ಪುರುಷರ 10,000 ಮೀಟರ್ ಓಟದ ಸ್ಪರ್ಧೆಯಲ್ಲೂ ಬೆಳ್ಳಿ ಪದಕ ಗೆದ್ದಿದ್ದರು.
ಶೂಟಿಂಗ್ ವಿಭಾಗದಲ್ಲಿ, ಮಹಿಳೆಯರ 25 ಮೀಟರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಇಶಾ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ. 21 ವರ್ಷದ ಭಾರತೀಯ ಶೂಟರ್ 38 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು.
ಕ್ರೀಡಾಪಟು ವಿತ್ಯಾ ರಾಮರಾಜ್ ಮಹಿಳೆಯರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವುದರೊಂದಿಗೆ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಅವರು, ಕ್ರೀಡಾ ಕ್ಷೇತ್ರದ ದಂತಕಥೆ ಪಿ.ಟಿ. ಉಷಾ ಅವರು ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
ಕುರಾಶ್ ವಿಭಾಗದಲ್ಲೂ ಭಾರತ ಕಂಚಿನ ಪದಕವನ್ನು ಗೆದ್ದುಕೊಂಡಿದೆ; ಪಿಂಕಿ ಬಲ್ಹಾರಾ ಮಹಿಳೆಯರ 78 ಕೆಜಿಗಿಂತ ಕಡಿಮೆ ತೂಕದ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದರು.
ಬಾಕ್ಸಿಂಗ್‌ನಲ್ಲಿ, ಲವ್ಲಿನಾ ಬೊರ್ಗೊಹೈನ್, ಪ್ರಿಯಾ ಘಂಗಾಸ್ ಮತ್ತು ಕಪಿಲ್ ಪೋಖರಿಯಾ ತಮ್ಮ ತಮ್ಮ ತೂಕದ ವಿಭಾಗಗಳಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಭಾರತಕ್ಕೆ ಇನ್ನೂ ಮೂರು ಪದಕಗಳನ್ನು ಖಚಿತಪಡಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ, 75 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಸಿಯೊಂಗ್ ಸುಯೋನ್ ಅವರನ್ನು 5-0 ಅಂತರದ ಸರ್ವಾನುಮತದ ತೀರ್ಪಿನಿಂದ ಸೋಲಿಸಿದರು. ಪ್ರಿಯಾ ಕೂಡ ಮಹಿಳೆಯರ 60 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು. ಅವರು ಕ್ವಾರ್ಟರ್ ಫೈನಲ್‌ನಲ್ಲಿ ತಜಕಿಸ್ತಾನದ ಮಿಜ್ಗೋನಾ ಸಮದೋವಾ ಅವರನ್ನು 5-0 ಅಂತರದಿಂದ ಸೋಲಿಸಿದರು.
ಪುರುಷರ 90 ಕೆಜಿ ವಿಭಾಗದಲ್ಲಿ ಕಪಿಲ್ ಪೋಖರಿಯಾ ಅವರು ದಕ್ಷಿಣ ಕೊರಿಯಾದ ಕಿಮ್ ಗಿಚೇ ವಿರುದ್ಧ 5-0 ಅಂತರದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.
ಐಚಿ-ನಗೋಯಾದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಅಫ್ಘಾನಿಸ್ತಾನದ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವನ್ನು ರದ್ದುಗೊಳಿಸಲಾಯಿತು. ಹಾಲಿ ಚಾಂಪಿಯನ್ ಆಗಿರುವ ಭಾರತವು, ಐಸಿಸಿ ಟಿ20 ಅಂತರರಾಷ್ಟ್ರೀಯ ಶ್ರೇಯಾಂಕದಲ್ಲಿ ತನಗಿದ್ದ ಮೇಲ್ಮಟ್ಟದ ಸ್ಥಾನದ ಆಧಾರದ ಮೇಲೆ ಮುಂದಿನ ಹಂತಕ್ಕೇರಿತು. ಭಾರತವು ಪ್ರಸ್ತುತ ಮೊದಲ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನವು ಹತ್ತನೇ ಸ್ಥಾನದಲ್ಲಿದೆ. ಸೆಮಿಫೈನಲ್‌ನಲ್ಲಿ ಭಾರತವು ನೇಪಾಳ ಮತ್ತು ಶ್ರೀಲಂಕಾ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ.
ಭಾರತದ 4x100 ಮೀಟರ್ ರಿಲೇ ತಂಡವು ಇಂದು ಫೈನಲ್‌ಗೆ ಅರ್ಹತೆ ಪಡೆಯಿತು. ಗುರುವೀಂದರ್ ಸಿಂಗ್, ಅಭಿನಯ ರಾಜರಾಜನ್, ಅನಿಮೇಶ್ ಕುಜುರ್ ಮತ್ತು ಹರಿತಾ ಭದ್ರಾ ಅವರನ್ನೊಳಗೊಂಡ ಭಾರತೀಯ ತಂಡವು 41.54 ಸೆಕೆಂಡುಗಳ ಸಮಯದೊಂದಿಗೆ ಮೂರನೇ ಸ್ಥಾನವನ್ನು ಪಡೆಯಿತು. ಈ ಪ್ರದರ್ಶನದೊಂದಿಗೆ ಭಾರತೀಯ ತಂಡವು ನಾಳೆ ನಡೆಯಲಿರುವ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಸ್ಕ್ವಾಷ್‌ನಲ್ಲಿ, ಭಾರತೀಯ ಮಹಿಳಾ ಮತ್ತು ಪುರುಷರ ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದವು. ಮೂರನೇ ಶ್ರೇಯಾಂಕ ಪಡೆದಿದ್ದ ಭಾರತೀಯ ಮಹಿಳಾ ತಂಡವು ಜಪಾನ್ ವಿರುದ್ಧ ಜಯ ಸಾಧಿಸಿತು, ಹಾಗೆಯೇ ಪುರುಷರ ತಂಡವು ದಕ್ಷಿಣ ಕೊರಿಯಾವನ್ನು ಸೋಲಿಸಿ ಅಂತಿಮ ಎಂಟರ ಹಂತದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.