ಬೆಂಗಳೂರು(ಸೆ.20): ರೋಚಕ ಅಂತ್ಯಕಂಡ ಮೀಕೋ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ರೇಸರ್‌ಗಳು ಮೂರು ಪ್ರಶಸ್ತಿ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದಾರೆ. ಹಿರಿಯರ ಎನ್‌ಸಿ ರೇಸಿಂಗ್ ಎಂಸ್ಪೋರ್ಟ್ X30 ಇಂಡಿಯಾ ಕ್ಲಾಸ್ ವಿಭಾಗದಲ್ಲಿ ರುಹಾನ್ ಆಳ್ವಾ ಪ್ರಶಸ್ತಿ ಗೆದ್ದರೆ, ಜೂನಿಯರ್ ವಿಭಾಗದಲ್ಲಿ ರೋಹನ್ ಮಾದೇಶ್ ಹಾಗೂ ಕೆಡೆಟ್(ಕಿರಿಯರ) ವಿಭಾಗದಲ್ಲಿ ನಿಖಿಲೇಶ್ ರಾಜು ಪೋಡಿಯಂನಲ್ಲಿ ಅಗ್ರಸ್ಥಾನ ಗಳಿಸಿದರು.
ಬೆಂಗಳೂರಿನ ಯುವ ರೇಸರ್ಸ್‌ಗೆ ಮೀಕೋ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್!
ಈ ಮೂವರಲ್ಲದೇ ಬೆಂಗಳೂರಿನ ಮತ್ತಿಬ್ಬರು ಯುವ ರೇಸರ್‌ಗಳು ಟ್ರೋಫಿ ಜಯಿಸಿದರು. ಹಿರಿಯರ ವಿಭಾಗದಲ್ಲಿ ನೈಜಲ್ ಥಾಮಸ್ 2ನೇ ಸ್ಥಾನ ಪಡೆದರೆ, ಕೆಡೆಟ್ಸ್ ವಿಭಾಗದಲ್ಲಿ ಝಾರಾ ಮಿಶ್ರಾ 3ನೇ ಸ್ಥಾನ ಪಡೆದರು.
15 ವರ್ಷದ ರುಹಾನ್ ಆಳ್ವಾ 167 ಅಂಕಗಳು) ಎಲ್ಲಾ ಐದೂ ಸುತ್ತುಗಳಲ್ಲಿ ಅತ್ಯಾಕರ್ಷಕ ಪ್ರದರ್ಶನ ತೋರಿ, ತಮ್ಮದೇ ಛಾಪು ಮೂಡಿಸಿದರು. 2ನೇ, 3ನೇ ಹಾಗೂ 4ನೇ ಸುತ್ತುಗಳಲ್ಲಿ ನಡೆದ ಎಲ್ಲಾ ನಾಲ್ಕು ರೇಸ್‌ಗಳಲ್ಲಿ ಗೆಲ್ಲುವ ಮೂಲಕ ಪ್ರಶಸ್ತಿ ತಮ್ಮ ಕೈತಪ್ಪಿ ಹೋಗದಂತೆ ನೋಡಿಕೊಂಡರು.
ಅಂತಿಮ ಸುತ್ತಿನಲ್ಲೂ ರುಹಾನ್‌ಗೆ ಕೇವಲ ಒಮ್ಮೆ ಮಾತ್ರ ಹಿನ್ನಡೆ ಆಯಿತು. ಎರಡನೇ ರೇಸ್‌ನಲ್ಲಿ ಅವರು 2ನೇ ಸ್ಥಾನ ಪಡೆದರು. ಆದರೆ ಆ ಹೊತ್ತಿಗಾಗಲೇ ಅವರು ಚಾಂಪಿಯನ್‌ಶಿಪ್ ಜಯಿಸಿದ್ದರು. ಚಾಂಪಿಯನ್‌ಶಿಪ್‌ನಲ್ಲಿ ನೈಜಲ್ ಥಾಮಸ್(120 ಅಂಕಗಳು) ಹಾಗೂ ಉಮಾಶಂಕರ್(92), ರುಹಾನ್‌ರ ಹತ್ತಿರಕ್ಕೂ ಬರಲಿಲ್ಲ.
1500 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದ ಹರ್ಮಿಲನ್ ಕೌರ್
ಜೂನಿಯರ್ ವಿಭಾಗದಲ್ಲಿ ರೋಹನ್ ಮಾದೇಶ್(146 ಅಂಕಗಳು) ಅವರಿಗೆ ಜಡೆನ್ ಪರಿಯತ್(134 ಅಂಕಗಳು) ಹಾಗೂ ಕಿರಿಯ ಸಹೋದರ ಇಶಾನ್ (130 ಅಂಕಗಳು) ಅವರಿಂದ ಕಠಿಣ ಸವಾಲು ಎದುರಾಯಿತು. ಕೇವಲ 5 ಅಂಕಗಳ ಮುನ್ನಡೆಯೊಂದಿಗೆ ಅಂತಿಮ ಸುತ್ತಿಗೆ ಕಾಲಿಟ್ಟ ರೋಹನ್, ಮನಮೋಹಕ ಪ್ರದರ್ಶನ ತೋರಿದರು. 2 ಗೆಲುವು ಹಾಗೂ ಒಂದು ರೇಸ್‌ನಲ್ಲಿ 2ನೇ ಸ್ಥಾನದೊಂದಿಗೆ ಅತ್ಯಮೂಲ್ಯ 32 ಅಂಕಗಳನ್ನು ಗಳಿಸಿದರು. ಜಡೆನ್ ಕೇವಲ 25 ಅಂಕಗಳನ್ನು ಗಳಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಇಶಾನ್ 34 ಅಂಕಗಳನ್ನು ಕಲೆಹಾಕಿದರೂ, ಒಟ್ಟಾರೆ ಅಂಕಗಳ ಪಟ್ಟಿಯಲ್ಲಿ ಮೇಲೇಳಲು ಸಾಧ್ಯವಾಗಲಿಲ್ಲ.
ಕೆಡೆಟ್(ಕಿರಿಯರ) ವಿಭಾಗದಲ್ಲಿ ರೋಚಕ ಪೈಪೋಟಿ ಏರ್ಪಟ್ಟಿತ್ತು. 2ನೇ ಸ್ಥಾನ ಪಡೆದ ಅರಾಫತ್ ಶೇಖ್(157 ಅಂಕಗಳು) 5ನೇ ಹಾಗೂ ಅಂತಿಮ ಸುತ್ತಿನಲ್ಲಿ ಎಲ್ಲಾ ನಾಲ್ಕೂ ರೇಸ್‌ಗಳನ್ನು ಗೆದ್ದರು. 40 ಅಂಕಗಳನ್ನು ಕಲೆಹಾಕಿದರೂ, ಒಟ್ಟಾರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ನಿಖಿಲೇಶ್(167 ಅಂಕಗಳು) ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಎಲ್ಲಾ ಸುತ್ತುಗಳಲ್ಲೂ ಸ್ಥಿರ ಪ್ರದರ್ಶನ ತೋರಿದ ನಿಖಿಲೇಶ್ ಚಾಂಪಿಯನ್ ಸ್ಥಾನ ಅಲಂಕರಿಸಿದರು.
ಅಂತಿಮ ಚಾಂಪಿಯನ್‌ಶಿಪ್ ಪಟ್ಟಿ
ಕೆಡೆಟ್ ವಿಭಾಗ: 1 .ನಿಖಿಲೇಶ್ ರಾಜು (ಬೆಂಗಳೂರು,167 ಅಂಕ), 2 ಅರಾಫತ್ ಶೇಖ್(ಪುಣೆ, 157 ಅಂಕ), 3. ಝಾರಾ ಮಿಶ್ರಾ (ಬೆಂಗಳೂರು, 79 ಅಂಕ)
ಜೂನಿಯರ್ ವಿಭಾಗ: 1ರೋಹನ್ ಮಾದೇಶ್(ಬೆಂಗಳೂರು, 146ಅಂಕ), 2.ಜಡೆನ್ ಪರಿಯತ್(ಗುವಾಹಟಿ, 134 ಅಂಕ), 3.ಇಶಾನ್ ಮಾದೇಶ್(ಬೆಂಗಳೂರು 130 ಅಂಕ)
ಹಿರಿಯರ ವಿಭಾಗ:1.ರುಹಾನ್ ಆಳ್ವಾ(ಬೆಂಗಳೂರು, 190 ಅಂಕ), 2 ನೈಜಲ್ ಥಾಮಸ್(ಬೆಂಗಳೂರು,120 ಅಂಕ), 3.ನಿರ್ಮಲ್ ಉಮಾಶಂಕರ್(ಚೆನ್ನೈ)