* ಖೇಲ್ ರತ್ನ ಪ್ರಶಸ್ತಿಗೆ ಶ್ರೀಕಾಂತ್, ಪ್ರಣೀತ್ ಹೆಸರು ಶಿಫಾರಸು
* ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಸಾಯಿ ಪ್ರಣೀತ್
* 2019ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಬಿ. ಸಾಯಿ ಪ್ರಣೀತ್
ನವದೆಹಲಿ(ಜು.01): ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರರಾದ ಕಿದಂಬಿ ಶ್ರೀಕಾಂತ್, ಬಿ. ಸಾಯಿ ಪ್ರಣೀತ್‌ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹಾಗೂ ಎಚ್.ಎಸ್. ಪ್ರಣಯ್, ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಸಮೀರ್ ವರ್ಮಾ ಅವರಿಗೆ ಅರ್ಜುನ ಪ್ರಶಸ್ತಿಗೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಶಿಫಾರಸು ಮಾಡಿದೆ.
2017ರಲ್ಲಿ 4 ಪ್ರಶಸ್ತಿಗಳನ್ನು ಗೆದ್ದಿದ್ದ ಶ್ರೀಕಾಂತ್ ಆ ಬಳಿಕ ತನ್ನ ಲಯವನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಲು ವಿಫಲರಾಗಿದ್ದರು. ಮತ್ತೊಂದೆಡೆ 2019ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಬಿ. ಸಾಯಿ ಪ್ರಣೀತ್, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಏಕೈಕ ಭಾರತೀಯ ಶಟ್ಲರ್ ಎನಿಸಿದ್ದಾರೆ.
ಖೇಲ್ ರತ್ನ, ಅರ್ಜುನ ಪ್ರಶಸ್ತಿಗೆ ಓರ್ವ ಕನ್ನಡಿಗ ಸೇರಿ ಐವರು ಟೀಂ ಇಂಡಿಯಾ ಕ್ರಿಕೆಟಿಗರ ಹೆಸರು ಶಿಫಾರಸು..!
2021ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕ್ರೀಡಾ ಹಾಗೂ ಯುವಜನ ಇಲಾಖೆ ವಿಸ್ತರಿಸಿದೆ. ಈ ಮೊದಲು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಜೂನ್ 21 ಕಡೆಯ ದಿನಾಂಕ ನಿಗದಿ ಮಾಡಲಾಗಿತ್ತು.
ಕಳೆದ ವರ್ಷ ಮನೀಕಾ ಭಾತ್ರ, ರೋಹಿತ್ ಶರ್ಮಾ, ವಿನೇಶ್ ಫೊಗಟ್, ರಾಣಿ ರಾಂಪಾಲ್ ಮತ್ತು ಮರಿಯಪ್ಪನ್ ತಂಗವೇಲು ಹೀಗೆ ಐದು ಮಂದಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಮೊದಲ ಬಾರಿಗೆ 5 ಮಂದಿ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪಡೆದುಕೊಂಡಿದ್ದರು.