ಕ್ರೀಡಾ ಸಚಿವಾಲಯ ಕ್ರೀಡಾ ಫೆಡರೇಷನ್‌ಗಳ ಕೆಲಸದಲ್ಲಿ ಹಸ್ತಾಕ್ಷೇಪ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.19): ರಾಷ್ಟ್ರೀಯ ಕ್ರೀಡಾ ಫೆಡರೇಷನ್(ಎನ್‌ಎಸ್‌ಎಫ್)ಗಳ ಕಾರ್ಯನಿರ್ವಹಿಕೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷ ನರೇಂದ್ರ ಬಾತ್ರಾ, ಕ್ರೀಡಾ ಸಚಿವಾಲಯ ಕ್ರೀಡಾ ಫೆಡರೇಷನ್‌ಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ರಿಜಿಜು ಪ್ರತಿಕ್ರಿಯಿಸಿದ್ದಾರೆ. ‘ಸರ್ಕಾರ ಕ್ರೀಡಾ ಫೆಡರೇಷನ್‌ಗಳಿಗೆ ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡಲು ಸಿದ್ಧವಿದೆ. ಕ್ರೀಡೆ ಹಾಗೂ ಕ್ರೀಡಾಪಟುಗಳ ಅಭಿವೃದ್ಧಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಾವು ಬದ್ಧರಿದ್ದೇವೆ’ ಎಂದು ರಿಜಿಜು ಹೇಳಿದ್ದಾರೆ.
ಕೇಂದ್ರ ಕ್ರೀಡಾ ಕಾರ‍್ಯದರ್ಶಿಗೆ ಕ್ರೀಡೆಯ ಗಂಧಗಾಳಿ ಗೊತ್ತಿಲ್ಲ: ಟೆನಿಸ್ ಸಂಸ್ಥೆ ಬೇಸರ
ಕ್ರೀಡಾ ಸಚಿವಾಲಯ, ಭಾರತೀಯ ಒಲಿಂಪಿಕ್ ಸಂಸ್ಥೆ ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ದೇಶದ ಮೂಲೆಮೂಲೆಗಳಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆಗಳನ್ನು ಹೆಕ್ಕಿ ಅವಕಾಶ ನೀಡುವುದು. ಈ ಮೂಲಕ ಕ್ರೀಡಾ ವಾತಾವರಣವನ್ನು ಉತ್ತಮ ಪಡಿಸುವುದೇ ಮುಖ್ಯ ಧ್ಯೇಯವಾಗಿದೆ ಎಂದು ರಿಜಿಜು ತಿಳಿಸಿದ್ದಾರೆ.
ಎಲ್ಲರೂ ಕ್ರೀಡೆ ಅಭಿವೃದ್ದಿ ಪಡಿಸುವ ಸಾಮಾನ್ಯ ಗುರಿಯಿಟ್ಟುಕೊಂಡು ಕೆಲಸ ಮಾಡಬೇಕು. ನಮ್ಮ ಅಥ್ಲೀಟ್‌ಗಳಿಗೆ ಉತ್ತಮ ತರಬೇತಿ, ಡಯಟ್, ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಬೇಕು. ಈ ಮೂಲಕ 2028ರ ಒಲಿಂಪಿಕ್ಸ್‌ನಲ್ಲಿ ಭಾರತ ಟಾಪ್ 10 ಪದಕ ಪಟ್ಟಿಯಲ್ಲಿ ಸ್ಥಾನಪಡೆಯುವಂತೆ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಕ್ರೀಡಾಸಚಿವನಾಗಿ ನಾನು ಹೊಂದಿದ್ದೇನೆಂದು ರಿಜಿಜು ತಿಳಿಸಿದ್ದಾರೆ.