ಕೊರೋನಾ ವೈರಸ್‌ನಿಂದಾಗಿ ಅಮೆರಿಕ ಅಕ್ಷರಶಃ ನಲುಗಿ ಹೋಗಿದೆ. ಹೀಗಿರುವಾಗಲೇ ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯುವುದು ಅನುಮಾನ ಎನಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನ್ಯೂಯಾರ್ಕ್(ಏ.18): 2020ರ ಯುಎಸ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯನ್ನು ಆಯೋಜಿಸುವ ಬಗ್ಗೆ ಜೂನ್ ತಿಂಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಟೂರ್ನಿ ಬಹುತೇಕ ರದ್ದುಗೊಳ್ಳಲಿದೆ ಎನ್ನಲಾಗಿದೆ.
ಕೊರೋನಾ ಸೋಂಕಿನಿಂದಾಗಿ ಅಮೆರಿಕದಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ದೇಶಗಳ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಪ್ರಯಾಣಿಸಲು ಹಿಂದೇಟು ಹಾಕಬಹುದು ಎನ್ನುವ ಅನುಮಾನ ಆಯೋಜಕರಿಗಿದೆ. ಅಲ್ಲದೇ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಅಮೆರಿಕ ಟೆನಿಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಮೈಕ್ ಡೌಸೆ ಸ್ಪಷ್ಟಪಡಿಸಿದ್ದಾರೆ.
ಫ್ರೆಂಚ್ ಓಪನ್ ಬಳಿಕ ಮತ್ತೊಂದು ಗ್ರ್ಯಾಂಡ್‌ಸ್ಲಾಂ ಮುಂದೂಡಿಕೆ?
ಇನ್ನೂ ನಮಗೆ ಸಾಕಷ್ಟು ಸಮಯವಿದೆ. ನಾವು ಯುಎಸ್ ಟೂರ್ನಿಯನ್ನು ಆಯೋಜಿಸಲು ಸರ್ವರೀತಿಯಲ್ಲೂ ಪ್ರಯತ್ನ ನಡೆಸುತ್ತೇವೆ. ಆದರೆ ಪ್ರೇಕ್ಷಕರ ಆರೋಗ್ಯ ಹಾಗೂ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಪ್ರೇಕ್ಷಕರಿಲ್ಲದೇ ಟೂರ್ನಿ ಆಯೋಜಿಸುವುದು ಸಾಧ್ಯವಿಲ್ಲ ಎಂದಿದ್ದಾರೆ.
ಕಳೆದ ವರ್ಷ 7,40,000 ಪ್ರೇಕ್ಷಕರು ಯುಎಸ್ ಪಂದ್ಯಾವಳಿಯನ್ನು ವೀಕ್ಷಿಸಿ ಸಾರ್ವಕಾಲಿಕ ದಾಖಲೆ ಬರೆದಿದ್ದರು. ಮೇನಲ್ಲಿ ಆರಂಭವಾಗಬೇಕಿದ್ದ ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಂ ಫ್ರೆಂಚ್ ಓಪನ್ ಕೊರೋನಾ ವೈರಸ್ ಭೀತಿಯಿಂದಾಗಿ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 04ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಇನ್ನು ಜೂನ್ ಅಂತ್ಯದಲ್ಲಿ ಆರಂಭವಾಗಬೇಕಿದ್ದ ವಿಂಬಲ್ಡನ್ ಟೂರ್ನಿಯನ್ನು ಈಗಾಗಲೇ ರದ್ದುಪಡಿಸಲಾಗಿದೆ.