ಇಂದಿನಿಂದ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌

By Suvarna News  |  First Published Jan 20, 2020, 11:46 AM IST

ಬಹುನಿರೀಕ್ಷಿತ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯು ಸೋಮವಾರ(ಜ.20) ಆರಂಭವಾಗಿದೆ. ಈ ಟೂರ್ನಿ ನಡಾಲ್, ಫೆಡರರ್, ಜೋಕೋ ನಡುವಿನ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ಮೆಲ್ಬರ್ನ್‌(ಜ.20): ಹೊಸ ದಶಕದಲ್ಲೂ ಹಳೆ ಹುಲಿಗಳೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. 2020ರ ಮೊದಲ ಗ್ರ್ಯಾಂಡ್‌ಸ್ಲಾಂ ಟೆನಿಸ್‌ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದ್ದು, ಅಗ್ರ 3 ಟೆನಿಸಿಗರಾದ ರಾಫೆಲ್‌ ನಡಾಲ್‌, ನೋವಾಕ್‌ ಜೋಕೋವಿಚ್‌ ಹಾಗೂ ರೋಜರ್‌ ಫೆಡರರ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 

Get served the top tweets and reactions after each round.

❤️ or Retweet and we'll keep you posted! pic.twitter.com/J1MzR2wOlN

— #AusOpen (@AustralianOpen)

20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಫೆಡರರ್‌, ಪ್ರಶಸ್ತಿ ಸಂಖ್ಯೆಯನ್ನು 21ಕ್ಕೇರಿಸಿಕೊಳ್ಳಲು ಹೋರಾಡಲಿದ್ದರೆ, 19 ಗ್ರ್ಯಾಂಡ್‌ಸ್ಲಾಂ ಗೆದ್ದಿರುವ ನಡಾಲ್‌, ಫೆಡರರ್‌ ದಾಖಲೆ ಸರಿಗಟ್ಟಲು ಕಾತರಿಸುತ್ತಿದ್ದಾರೆ. 16 ಗ್ರ್ಯಾಂಡ್‌ಸ್ಲಾಂಗಳ ವೀರ ಜೋಕೋವಿಚ್‌, ಮೊದಲೆರಡು ಸ್ಥಾನಗಳಲ್ಲಿರುವ ದಿಗ್ಗಜರೊಂದಿಗಿನ ಅಂತರವನ್ನು ತಗ್ಗಿಸಿಕೊಳ್ಳಲು ಪೈಪೋಟಿ ನಡೆಸಲಿದ್ದಾರೆ. ಅಲ್ಲದೇ 2019ರ ಆವೃತ್ತಿಯ ಸೇರಿ ದಾಖಲೆಯ 7 ಬಾರಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿರುವ ಜೋಕೋವಿಚ್‌, ಪ್ರಶಸ್ತಿ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

Tap to resize

Latest Videos

ಟೆನಿಸ್‌: ಸಾನಿಯಾ ಮಿರ್ಜಾ ಭರ್ಜರಿ ಪುನರಾಗಮನ

ಡ್ಯಾನಿಯಲ್‌ ಮೆಡ್ವೆಡೆವ್‌, ಅಲೆಕ್ಸಾಂಡರ್‌ ಜ್ವೆರೆವ್‌, ಸ್ಟೆಫಾನೋ ಟಿಟ್ಸಿಪಾಸ್‌, ಡೊಮಿನಿಕ್‌ ಥೀಮ್‌ ಸೇರಿದಂತೆ ಇನ್ನೂ ಕೆಲ ಯುವ ಪ್ರತಿಭೆಗಳು ದಿಗ್ಗಜರನ್ನು ಹಿಂದಿಕ್ಕಿ ಟ್ರೋಫಿ ಎತ್ತಿಹಿಡಿಯಲು ಕಾಯುತ್ತಿದ್ದಾರೆ. ಪುರುಷರ ಸಿಂಗಲ್ಸ್‌ ಫೈನಲ್‌ ಫೆ.2ರಂದು ನಡೆಯಲಿದೆ.

3 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡ ಸೆರೆನಾ..!

ಬಾರ್ಟಿ, ಪ್ಲಿಸ್ಕೋವಾ ಫೇವರಿಟ್‌: ಮಹಿಳಾ ಸಿಂಗಲ್ಸ್‌ನಲ್ಲಿ ಸ್ಥಳೀಯ ತಾರೆ, ಅಗ್ರ ಶ್ರೇಯಾಂಕಿತೆ ಆಶ್ಲೆ ಬಾರ್ಟಿ ಹಾಗೂ 2ನೇ ಶ್ರೇಯಾಂಕಿತೆ ಕ್ಯಾರೋಲಿನಾ ಪ್ಲಿಸ್ಕೋವಾ ನಡುವೆ ಪ್ರಶಸ್ತಿಗೆ ಪೈಪೋಟಿಗೆ ಏರ್ಪಡುವ ಸಾಧ್ಯತೆ ಇದೆ. ಹಾಲಿ ಚಾಂಪಿಯನ್‌ ಜಪಾನ್‌ನ ನವೊಮಿ ಒಸಾಕ ಸಹ ಪ್ರಶಸ್ತಿ ಕಣದಲ್ಲಿದ್ದಾರೆ. ಯುವ ಆಟಗಾರ್ತಿಯರನ್ನು ಮೀರಿಸಿ ಸೆರೆನಾ ವಿಲಿಯಮ್ಸ್‌ ತಮ್ಮ ವೃತ್ತಿಬದುಕಿನ 24ನೇ ಗ್ರ್ಯಾಂಡ್‌ಸ್ಲಾಂ ಗೆದ್ದು, ಮಾರ್ಗರೆಟ್‌ ಕೋರ್ಟ್‌ರ ದಾಖಲೆ ಸರಿಗಟ್ಟಲು ಹೋರಾಟ ನಡೆಸಬೇಕಿದೆ. ಸಿಮೋನಾ ಹಾಲೆಪ್‌, ಪೆಟ್ರಾ ಕ್ವಿಟೋವಾ, ಮರಿಯಾ ಶರಪೋವಾ ಸ್ಪರ್ಧೆಯಲ್ಲಿರುವ ಪ್ರಮುಖ ಆಟಗಾರ್ತಿಯರೆನಿಸಿದ್ದಾರೆ.

ಪ್ರಜ್ನೇಶ್‌, ಸಾನಿಯಾ ಮೇಲೆ ಎಲ್ಲರ ಕಣ್ಣು!

ಭಾರತೀಯ ಅಭಿಮಾನಿಗಳು ಪ್ರಜ್ನೇಶ್‌ ಗುಣೇಶ್ವರನ್‌ ಹಾಗೂ ಸಾನಿಯಾ ಮಿರ್ಜಾ ಪ್ರದರ್ಶನದ ಮೇಲೆ ಕಣ್ಣಿಟ್ಟಿದ್ದಾರೆ. ಅರ್ಹತಾ ಸುತ್ತಿನಲ್ಲಿ ಜಯಿಸಿ, ಪ್ರಧಾನ ಸುತ್ತಿಗೆ ಕಾಲಿಟ್ಟಿರುವ ಪ್ರಜ್ನೇಶ್‌ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಜಪಾನ್‌ನ ತಟ್ಸುಮಾ ಇಟೊ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ 2ನೇ ಸುತ್ತಿನಲ್ಲಿ ಜೋಕೋವಿಚ್‌ ಎದುರಾಗುವ ಸಾಧ್ಯತೆ ಇದೆ. ಮಹಿಳಾ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಕಣಕ್ಕಿಳಿಯಲಿದ್ದಾರೆ. 2 ವರ್ಷಗಳ ಬಳಿಕ ಟೆನಿಸ್‌ಗೆ ವಾಪಸಾಗಿರುವ ಸಾನಿಯಾ, ಕಳೆದ ವಾರವಷ್ಟೇ ಹೋಬಾರ್ಟ್‌ ಟೂರ್ನಿಯ ಮಹಿಳಾ ಡಬಲ್ಸ್‌ ಚಾಂಪಿಯನ್‌ ಆಗಿದ್ದರು. ರೋಹನ್‌ ಬೋಪಣ್ಣ, ದಿವಿಜ್‌ ಶರಣ್‌ ಸಹ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ.

20 ಕೋಟಿ : ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗುವ ಆಟಗಾರ/ಆಟಗಾರ್ತಿಗೆ 20.15 ಕೋಟಿ ರುಪಾಯಿ ಬಹುಮಾನ ಸಿಗಲಿದೆ.

10 ಕೋಟಿ: ಸಿಂಗಲ್ಸ್‌ ವಿಭಾಗದಲ್ಲಿ ರನ್ನರ್‌-ಅಪ್‌ ಆಗುವ ಆಟಗಾರ/ಆಟಗಾರ್ತಿಗೆ 10.10 ಕೋಟಿ ರುಪಾಯಿ ಬಹುಮಾನ ಸಿಗಲಿದೆ.
 

click me!