ಕತಾರ್ ಐಸಿಬಿಎಫ್ ಸದಸ್ಯರಾಗಿ ಉಡುಪಿಯ ಸುಬ್ರಹ್ಮಣ್ಯ ಹೆಬ್ಬಾಗಿಲು

By Web DeskFirst Published Jul 22, 2019, 4:24 PM IST
Highlights

ಕನ್ನಡಿಗರು ಎಲ್ಲಿಯೇ ನೆಲೆಸಿದ್ದರು ಸಂಘಟನೆ ಮತ್ತು ಜನರ ಹಿತ ಕಾಯುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅದಕ್ಕೊಂದು ಒಳ್ಳೆಯ ನಿದರ್ಶನ ಎಂದರೆ ಸುಬ್ರಹ್ಮಣ್ಯ ಹೆಬ್ಬಾಗಿಲು. 

ಬೆಂಗಳೂರು (ಜು.22) ಕತಾರ್‌ನಲ್ಲಿ ನೆಲೆಸಿರುವ ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು ಇಂಡಿಯನ್ ಕಮ್ಯುನಿಟಿ ಬೆನ್‌ವೆಲೆಂಟ್ (ಐ.ಸಿ.ಬಿ.ಎಫ್)ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕತಾರ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ, ಕಾರ್ಮಿಕರ ಸಮಸ್ಯೆಗಳಿಗೆ ಈ ವೇದಿಕೆಯು ಸ್ಪಂದಿಸುತ್ತದೆ.  ತೊಂದರೆಯಲ್ಲಿ ಸಿಲುಕಿಕೊಂಡವರಿಗೆ ಆಹಾರ, ವೈದ್ಯಕೀಯ ನೆರವು ಮುಂತಾದ ಸೌಲಭ್ಯವನ್ನು ಕಲ್ಪಿಸುತ್ತಿದ್ದು ಅಂಥ ಸಂಘಟನೆಯನ್ನು ಕನ್ನಡಿಗರೊಬ್ಬರು ಪ್ರತಿನಿಧಿಸುತ್ತಿದ್ದಾರೆ.

ನಿಸ್ವಾರ್ಥ ಕನ್ನಡ ಸೇವಕ ಹೆಬ್ಬಾಗಿಲು ಅವರಿಗೆ ಸಂದ ಗೌರವ

ಭಾರತೀಯ ದೂತವಾಸದ ಅಡಿಯಲ್ಲಿ ಕೆಲಸ ಮಾಡುವ  ಇಂಡಿಯನ್ ಕಮ್ಯುನಿಟಿ ಬೆನ್‌ವೆಲೆಂಟ್ ಫೋರಮ್ ನ (ಐ.ಸಿ.ಬಿ.ಎಫ್) ಸದಸ್ಯರಾಗಿ ಉಡುಪಿ ಜಿಲ್ಲೆಯ  ಸುಬ್ರಹ್ಮಣ್ಯ ಹೆಬ್ಬಾಗಿಲು  ಆಯ್ಕೆಯಾಗಿದ್ದಾರೆ. ಬೈಂದೂರು ತಗ್ಗರ್ಸೆಯ ಗುರುದತ್ತ ಶೇರುಗಾರ್ ಹಾಗೂ ಮೂಕಾಂಬು ಎನ್ನುವ ರೈತ ದಂಪತಿಗಳ ಪುತ್ರರಾಗಿರುವ ಸುಬ್ರಹ್ಮಣ್ಯ, ಮಯ್ಯಾಡಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ದಾವಣಗೆರೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಶಿಕ್ಷಣ ಪಡೆದಿರುವರು.

ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಮೇಲುಸ್ತುವಾರಿ ಅಭಿಯಂತರಾಗಿ ಸೇವೆ ಸಲ್ಲಿಸಿ ಬಳಿಕ ಕತಾರ್‌ನ ಗಲ್ಪಾರ್ ಆಲ್ ಮಿಸ್ನಾದ್ ಕಂಪೆನಿಯಲ್ಲಿ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕತಾರ್ ಸೇರಿದಂತೆ ಜಾಗತಿಕ ಮಟ್ಟದ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಇವರು ಕರ್ನಾಟಕ ಸಂಘ ಕತಾರ್ ಉಪಾಧ್ಯಕ್ಷರಾಗಿ ಹಾಗೂ ಖಜಾಂಚಿಯಾಗಿ, ತುಳುಕೂಟ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಕತಾರ್ ಕರ್ನಾಟಕ ಪ್ರೆಂಡ್ಸ್‌ನ ಸದಸ್ಯರಾಗಿದ್ದಾರೆ.

ನಾಟಕ, ಸಾಂಸ್ಕ್ರತಿಕ ಕಾರ್ಯಕ್ರಮ, ಶೈಕ್ಷಣಿಕ ಹಾಗೂ ಮನೋರಂಜನಾ ಕಾರ್ಯಕ್ರಮದ ಆಯೋಜನೆ ವಿವಿಧ ಸಂಘ ಸಂಸ್ಥೆಗಳ ಸಮನ್ವಯತೆಯೊಂದಿಗೆ ಕಾರ್ಯಕ್ರಮ ಪ್ರಸ್ತುತಿ, ಕತಾರ್ ಚಲನಚಿತ್ರೋತ್ಸವ ಸೇರಿದಂತೆ ವಿವಿಧ ಗಣ್ಯರ ಕಾರ್ಯಕ್ರಮದ ಪ್ರಮುಖ ಉಸ್ತುವಾರಿ ನಡೆಸಿದ್ದಾರೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಇವರಿಗೆ ಸಂದಿದೆ.

click me!