ಕಲಾವಿದ ಮಂಜುನಾಥ ಅವರಿಗೆ ನೆರವಿನ ಹಸ್ತ ನೀಡಲು ಮುಂದಾದ ಅನಿವಾಸಿ ಭಾರತೀಯರು| ಮಂಜುನಾಥ್ ತಯಾರಿಸಿದ ಒಟ್ಟಾರೆ 6 ಲಕ್ಷ ರು. ಮೌಲ್ಯದ ಬೃಹತ್ ಗಣೇಶ ಮೂರ್ತಿಗಳನ್ನು ಖರೀದಿಸಲು ನಿರ್ಧಾರ| ಕೊನೆಗೂ ನನ್ನ ಪ್ರಕಾರ ಧರ್ಮ ಗೆದ್ದಿತು. ಕೈಗೆ ಕೆಲಸ ನೀಡಿದ ಗಣೇಶ ಕೊರೋನಾ ಸಂಕಷ್ಟದಲ್ಲೂ ನನ್ನ ಕೈಬಿಡಲಿಲ್ಲ: ಕಲಾವಿದ ಮಂಜುನಾಥ|
ಬಸವರಾಜ ಹಿರೇಮಠ
ಧಾರವಾಡ(ಆ.19): ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ ಸಿಹಿಸುದ್ದಿ ಬೆನ್ನಲ್ಲೇ ಗಣೇಶ ಮೂರ್ತಿಯ ಖರೀದಿದಾರರಿಲ್ಲದೆ ಸಂಕಷ್ಟದಲ್ಲಿದ್ದ ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಅವರಿಗೆ ಅನಿವಾಸಿ ಭಾರತೀಯರು ನೆರವಿನ ಹಸ್ತ ನೀಡಲು ಮುಂದಾಗಿದ್ದಾರೆ. ಮಂಜುನಾಥ್ ತಯಾರಿಸಿದ ಒಟ್ಟಾರೆ 6 ಲಕ್ಷ ರು. ಮೌಲ್ಯದ ಬೃಹತ್ ಗಣೇಶ ಮೂರ್ತಿಗಳನ್ನು ಖರೀದಿಸಲು ನಿರ್ಧರಿಸಿದ್ದಾರೆ.
ಗಣೇಶ ಮೂರ್ತಿಗಳನ್ನು ಕೊಳ್ಳುವವರಿಲ್ಲದೆ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ ಕಲಾವಿದ ಮಂಜುನಾಥ ಈಗ ನಿರಾಳರಾಗಿದ್ದಾರೆ. ಅಮೆರಿಕ, ಆಸ್ಪ್ರೇಲಿಯಾ, ಬಹರೈನ್ ಮತ್ತಿತರ ದೇಶಗಳಲ್ಲಿನ ಅನಿವಾಸಿ ಭಾರತೀಯರು ಮಂಜುನಾಥ ಹಿರೇಮಠ ಅವರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಈಗಾಗಲೇ ಎರಡ್ಮೂರು ಬಾರಿ ಜೂಮ್ ಮೀಟಿಂಗ್ ಮಾಡಿ ಧೈರ್ಯ ತುಂಬಿದ್ದಾರೆ. ಗಣೇಶ ಮೂರ್ತಿಗಳನ್ನು ಕೊಳ್ಳುವ ಭರವಸೆ ನೀಡಿದ್ದಾರೆ.
ಗಣಪತಿ ಹೋಗಲಿಲ್ಲಾಂದ್ರ ಇದೇ ಕೊನೆಯ ಗಣೇಶೋತ್ಸವ: ಆತ್ಮಹತ್ಯೆಗೆ ನಿರ್ಧರಿಸಿದ ಕಲಾವಿದನ ಕುಟುಂಬ
ವರ್ಚುವಲ್ ಗಣೇಶೋತ್ಸವ:
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ವರ್ಚುವಲ್ ಗ್ಲೋಬಲ್ ಗಣೇಶೋತ್ಸವ ಆಚರಿಸಲು ಅನಿವಾಸಿ ಭಾರತೀಯರು ನಿರ್ಧರಿಸಿದ್ದಾರೆ. ಅದರಂತೆ ಗಣೇಶ ಮೂರ್ತಿಗಳನ್ನು ಮಂಜುನಾಥ ಅವರೇ 5 ದಿನಗಳ ಕಾಲ ಪೂಜೆ ಸಲ್ಲಿಸಿ ಕೊನೇ ದಿನ ವಿಸರ್ಜಿಸಲು ಯೋಜನೆ ರೂಪಿಸಲಾಗಿದೆ. ಗಣೇಶ ಮೂರ್ತಿಯ ನೇರ ದರ್ಶನ, ನಿತ್ಯದ ಪೂಜೆ ಹಾಗೂ ವಿಸರ್ಜನೆ ಎಲ್ಲವೂ ಯ್ಯೂಟ್ಯೂಬ್ ಚಾನಲ್ ಮೂಲಕ ಪ್ರಸಾರಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿಡಿಯೋ ವೈರಲ್:
ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮಂಜುನಾಥ್ ಅವರು ಕುಟುಂಬದ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗಿದ್ದಷ್ಟೇ ಅಲ್ಲದೆ, ಆ.17ರಂದು ‘ಕನ್ನಡಪ್ರಭ’ ಸಹ ‘ಗಣೇಶ ಮೂರ್ತಿ ಕಲಾವಿದರಿಗೆ ಸಂಕಷ್ಟ-ವಿಡಿಯೋ ವೈರಲ್’ ಎಂಬ ವರದಿ ಮಾಡಿತ್ತು. ವೈರಲ್ ಆದ ವಿಡಿಯೋ ಹಾಗೂ ಕನ್ನಡಪ್ರಭದ ವರದಿ ಗಮನಿಸಿದ ಸಾಕಷ್ಟುಮಂದಿ ಈಗ ಕಲಾವಿದನ ಸಂಕಷ್ಟಕ್ಕೆ ಮಿಡಿಯಲು ಮುಂದಾಗಿದ್ದಾರೆ.
ಚೌತಿ ನಿಮಿತ್ತ ಗಣೇಶ ಮಂಡಳಿಗಳ ಆರ್ಡರ್ ಮೇರೆಗೆ 10 ತಿಂಗಳಿಂದ ಮಂಜುನಾಥ ಅವರು 50ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಲಕ್ಷಾಂತರ ರು. ವೆಚ್ಚ ಮಾಡಿ ಸಿದ್ಧಪಡಿಸಿದ್ದರು. ಆದರೆ, ಕೋವಿಡ್ ಕಾರಣದಿಂದ ಸಾರ್ವಜನಿಕ ಗಣೇಶೋತ್ಸವವನ್ನು ಸರ್ಕಾರ ನಿಷೇಧಿಸಿದ್ದರಿಂದ ಆರ್ಡರ್ ಕ್ಯಾನ್ಸಲ್ ಆಗಿ ಮಂಜುನಾಥ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಮನನೊಂದಿದ್ದ, ಗಣೇಶ ಕೈಬಿಡಲಿಲ್ಲ- ಶ್ರಮಪಟ್ಟು ಮೂರ್ತಿಗಳನ್ನು ತಯಾರಿಸಿದ್ದು, ಕೊಳ್ಳುವವರಿಲ್ಲದೆ ಮನಸ್ಸಿಗೆ ತುಂಬ ಬೇಸರವಾಗಿತ್ತು. ನನ್ನ ಬೇಸರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದೆ. ಆದರೆ ಅದು ನನ್ನೆಲ್ಲ ಸಂಕಷ್ಟಗಳನ್ನು ಪರಿಹರಿಸಲಿದೆ ಎಂದು ಅಂದುಕೊಂಡಿರಲಿಲ್ಲ ಎಂದು ಮಂಜುನಾಥ ಹೇಳಿದ್ದಾರೆ.
ರಾಜ್ಯ, ಹೊರ ರಾಜ್ಯ ಹಾಗೂ ವಿದೇಶದಲ್ಲಿರುವ ನಮ್ಮವರು ಕರೆ ಮಾಡಿ ಆರ್ಥಿಕ ಸಹಕಾರಕ್ಕೆ ಮುಂದಾಗಿದ್ದಾರೆ. ಆದರೆ, ಅವರಿಂದ ಹಣ ಪಡೆಯಲು ಮನಸ್ಸಾಗಲಿಲ್ಲ. ಬದಲಾಗಿ ಮೂರ್ತಿಗಳನ್ನು ಖರೀದಿಸಿ ಎಂದು ಮನವಿ ಮಾಡಿಕೊಂಡೆ. ಅಮೆರಿಕದಲ್ಲಿರುವ ಶಿವು ವಿಭೂತಿ, ಶುಭಾ ಬೆನ್ನೂರ ಎಂಬವರು ಇದಕ್ಕಾಗಿಯೇ ತಮ್ಮ ಸ್ನೇಹಿತರ ಗುಂಪು ರಚಿಸಿಕೊಂಡು ಅಂದಾಜು .6 ಲಕ್ಷ ಮೊತ್ತದ 40 ದೊಡ್ಡ ಗಣೇಶ ಮೂರ್ತಿಗಳನ್ನು ಕೊಳ್ಳಲು ತೀರ್ಮಾನಿಸಿದ್ದಾರೆ. ಕೊನೆಗೂ ನನ್ನ ಪ್ರಕಾರ ಧರ್ಮ ಗೆದ್ದಿತು. ಕೈಗೆ ಕೆಲಸ ನೀಡಿದ ಗಣೇಶ ಕೊರೋನಾ ಸಂಕಷ್ಟದಲ್ಲೂ ನನ್ನ ಕೈಬಿಡಲಿಲ್ಲ ಎಂದೆನಿಸುತ್ತದೆ ಎನ್ನುತ್ತಾರೆ ಮಂಜುನಾಥ.
ಹೊರ ದೇಶಗಳಲ್ಲಿದ್ದರೂ ಭಾರತೀಯ ಸಂಸ್ಕೃತಿ, ಹಬ್ಬದಾಚರಣೆ ಬಿಟ್ಟಿರುವುದು ಸಾಧ್ಯವಿಲ್ಲ. ನಮಗೂ ಗಣೇಶ ಹಬ್ಬ ಮಾಡುವ ಆಸೆ ಇದ್ದರೂ ಇಲ್ಲಿ ಸಾಧ್ಯವಿಲ್ಲ. ಆದ್ದರಿಂದ ಮಂಜುನಾಥ ಅವರಿಗೆ ಸಹಾಯವೂ ಆಗಬೇಕು, ನಾವು ಹಬ್ಬ ಮಾಡಿದಂತೆಯೂ ಆಗಬೇಕು ಎಂದು ವರ್ಚುವಲ್ ಗ್ಲೋಬಲ್ ಗಣೇಶೋತ್ಸವದ ಯೋಜನೆ ರೂಪಿಸಲಾಗಿದೆ. ಯ್ಯೂಟ್ಯೂಬ್ ಮೂಲಕ ಗಣೇಶ ದರ್ಶನ, ಪೂಜೆ, ವಿಸರ್ಜನೆ ಕಣ್ತುಂಬಿಕೊಳ್ಳುತ್ತೇವೆ ಎಂದು ಅನಿವಾಸಿ ಭಾರತೀಯರು ಶುಭಾ ಬೆನ್ನೂರ ಅವರು ತಿಳಿಸಿದ್ದಾರೆ.