ವಿದೇಶದಲ್ಲಿ ಸಂಕಷ್ಟ: ಮಂಗಳೂರಿಗೆ ಅನಿವಾಸಿ ಕನ್ನಡಿಗರ ಹೊತ್ತ 2 ವಿಮಾನ ಆಗಮನ

By Kannadaprabha NewsFirst Published Jun 22, 2020, 3:06 PM IST
Highlights

ಶಾರ್ಜಾ, ದಮಾಮ್‌ನಿಂದ ಒಟ್ಟು 346 ಮಂದಿ ಆಗಮನ| ಈ ವಿಮಾನಗಳಲ್ಲಿ ತಲಾ 173 ಮಂದಿ ಕರಾವಳಿ ಕನ್ನಡಿಗರು ಇದ್ದರು| ಮಂಗಳೂರಿನ ಅಡ್ಡೂರಿನ ವ್ಯಕ್ತಿಯೊಬ್ಬರ ಮೃತದೇಹ ತರಲಾಗಿದೆ| ಅನಿವಾಸಿ ಕನ್ನಡಿಗರನ್ನು ಕರೆತರುವುದೇ ದೊಡ್ಡ ಸಾಹಸ|

ಮಂಗಳೂರು(ಜೂ.22): ಕೊರೋನಾ ಲಾಕ್‌ಡೌನ್‌ ಕಾರಣದಿಂದ ವಿದೇಶದಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ಕರೆತರುವ ಕಾರ್ಯ ಮುಂದುವರಿದಿದ್ದು, ಭಾನುವಾರ ಮಂಗಳೂರಿಗೆ ಎರಡು ವಿಮಾನಗಳು ಆಗಮಿಸಿವೆ.

ಭಾನುವಾರ ಬೆಳಗ್ಗೆ ಶಾರ್ಜಾದಿಂದ ಏರ್‌ ಅರೇಬಿಯಾ ಹಾಗೂ ಸಂಜೆ ದಮಾಮ್‌ನಿಂದ ಇಂಡಿಗೋ ವಿಮಾನ ಮಂಗಳೂರಿಗೆ ತಲುಪಿದೆ. ಈ ವಿಮಾನಗಳಲ್ಲಿ ತಲಾ 173 ಮಂದಿ ಕರಾವಳಿ ಕನ್ನಡಿಗರು ಇದ್ದರು. ಇದಲ್ಲದೆ ಮಂಗಳೂರಿನ ಅಡ್ಡೂರಿನ ವ್ಯಕ್ತಿಯೊಬ್ಬರ ಮೃತದೇಹವನ್ನು ತರಲಾಗಿದೆ. ವಿಮಾನದಲ್ಲಿ ಹಿರಿಯ ನಾಗರಿಕರು, ಕೆಲಸ ಕಳೆದುಕೊಂಡವರು, ಪ್ರವಾಸಿ ವೀಸಾ ಅವಧಿ ಮುಕ್ತಾಯಗೊಂಡವರು, ಗರ್ಭಿಣಿಯರು ಹಾಗೂ ತುರ್ತು ಚಿಕಿತ್ಸೆ ಬೇಕಾದವರು ಆಗಮಿಸಿದ್ದು, ಇವರೆಲ್ಲರಿಗೆ ಮಂಗಳೂರಿನಲ್ಲಿ ಏಳು ದಿನಗಳ ಕ್ವಾರಂಟೈನ್‌ ವಿಧಿಸಲಾಗಿದೆ.

ದುಬೈನ ಕರ್ನಾಟಕ ಸ್ಪೋಟ್ಸ್‌ರ್‍ ಆ್ಯಂಡ್‌ ಕಲ್ಚರಲ್‌ ಕ್ಲಬ್‌ ಸಹಯೋಗದಲ್ಲಿ ಮಂಗಳೂರಿಗೆ ಆಗಮಿಸಿದ ಚಾರ್ಟರ್‌ ವಿಮಾನ ಇದಾಗಿದೆ. ಶಾರ್ಜಾ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಗ್ಗೆ ಹೊರಟ ವಿಮಾನ 11.45ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ. ದಮಾಮ್‌ನಿಂದ ಮಧ್ಯಾಹ್ನ 2.45ಕ್ಕೆ 173 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ಸಂಜೆ 6.50ಕ್ಕೆ ಮಂಗಳೂರು ತಲುಪಿತು.

ದಕ್ಷಿಣ ಕನ್ನಡದಲ್ಲಿ ಮುಂಗಾರು ಚುರುಕು: ಗುಡುಗು ಸಹಿತ ಭಾರೀ ಮಳೆ

ಶವ ರವಾನೆಗೆ ನೆರವಾದರು

13 ದಿನಗಳ ಹಿಂದೆ ಅಬುಧಾಬಿಯಲ್ಲಿ ಅಪಘಾತದಲ್ಲಿ ಮೃತಪಟ್ಟಮಂಗಳೂರಿನ ಅಡ್ಡೂರು ನಿವಾಸಿ ಯಶವಂತ ಪೂಜಾರಿ ಎಂಬುವರ ಶವವನ್ನು ಕೂಡ ತರಲಾಗಿದೆ. ಅಲ್ಲಿ ಉದ್ಯೋಗದಲ್ಲಿದ್ದ ಯಶವಂತ ಪೂಜಾರಿ, ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಶವವನ್ನು ತಾಯ್ನಾಡಿಗೆ ಕರೆತರಲು ದಾಖಲೆ ಕೊರತೆ ಎದುರಾಗಿತ್ತು. ಅವರಲ್ಲಿ ಫೋಟೋ ಮತ್ತು ಆಧಾರ್‌ ಕಾರ್ಡ್‌ ಹೊರತುಪಡಿಸಿದರೆ, ಬೇರೇನೂ ಲಭ್ಯವಿರಲಿಲ್ಲ. ಅನಿವಾಸಿ ಕನ್ನಡಿಗರಾದ ಹಿದಾಯತ್‌ ಅಡ್ಡೂರು ಅವರು ವಾಟ್ಸಾಪ್‌ ಗ್ರೂಪ್‌ ರಚಿಸಿ, ಕನ್ನಡಿಗಾಸ್‌ ಹೆಲ್ಪ್‌ಲೈನ್‌ ತಂಡದ ಸದಸ್ಯರನ್ನು ಸೇರಿಸಿ ಮೃತದೇಹ ಕಳುಹಿಸಲು ಕಾರ್ಯಪ್ರವೃತ್ತರಾದರು. ಆದರೆ ಮೃತ ಯಶವಂತ ಪೂಜಾರಿಯ ಪಾಸ್‌ಪೋರ್ಟ್‌, ಇತರೆ ದಾಖಲೆ ಸಿಗದ ಕಾರಣ ರಾಯಭಾರ ಕಚೇರಿ ಮೂಲಕ ಶವ ಕಳುಹಿಸಲು ಬೇಕಾದ ಅಗತ್ಯ ದಾಖಲೆಗಳನ್ನು ಕ್ರೋಢೀಕರಿಸಲಾಯಿತು. ಅಲ್ಲದೆ ಕೊರೋನಾ ಟೆಸ್ಟ್‌ ಕೂಡ ಮಾಡಿಸಿದ ಬಳಿಕ ಅನಿವಾಸಿ ಕನ್ನಡಿಗರ ಖರ್ಚಿನಲ್ಲಿ ಶವವನ್ನು ಚಾರ್ಟರ್‌ ವಿಮಾನದಲ್ಲಿ ಮಂಗಳೂರಿಗೆ ಕಳುಹಿಸಲಾಯಿತು.

ಸಾಂಸ್ಥಿಕ ಕ್ವಾರಂಟೈನ್‌ಗೆ ಮತ್ತೆ ಕಿರಿಕ್‌

ಅನಿವಾಸಿ ಕನ್ನಡಿಗರನ್ನು ಕರೆತರುವುದೇ ದೊಡ್ಡ ಸಾಹಸ. ಆಗಿರುವಾಗ, ಅಲ್ಲಿ ಒಪ್ಪಿ ಇಲ್ಲಿಗೆ ಆಗಮಿಸುವವರಲ್ಲಿ ಕೆಲವರು ಸಾಂಸ್ಥಿಕ ಕ್ವಾರಂಟೈನ್‌ಗೆ ಜಿಲ್ಲಾಡಳಿತ ಜೊತೆ ಕಿರಿಕ್‌ ಮಾಡುತ್ತಿರುವ ಘಟನೆ ಮರುಕಳಿಸುತ್ತಿದೆ.
ಕಳೆದ ಎರಡು ದಿನಗಳಲ್ಲಿ ವಂದೇ ಭಾರತ್‌ ಮಿಷನ್‌ ಹಾಗೂ ಚಾರ್ಟರ್‌ ವಿಮಾನಗಳಲ್ಲಿ ವಿದೇಶದಿಂದ ಆಗಮಿಸಿದ ಅನಿವಾಸಿ ಕನ್ನಡಿಗರು ಮಂಗಳೂರಿನಲ್ಲಿ ಕ್ವಾರಂಟೈನ್‌ಗೆ ಕಿರಿಕ್‌ ಮಾಡಿದ ಬಗ್ಗೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳೂರಿಗೆ ಆಗಮಿಸುವಾಗ ಕ್ವಾರಂಟೈನ್‌ಗೆ ಒಪ್ಪುವ ಈ ಮಂದಿ, ವಿಮಾನ ಇಳಿದ ಕೂಡಲೇ ನಿಲ್ದಾಣದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ನಮಗೆ ಬಾಡಿಗೆ ಮೊತ್ತ ಭರಿಸಿ ಕ್ವಾರಂಟೈನ್‌ ಮಾಡಲು ಸಾಧ್ಯವಿಲ್ಲ. ನಮ್ಮನ್ನು ಮನೆಗೇ ಕಳುಹಿಸಿ ಎಂದು ವಾದ ಮಾಡಿದ ಘಟನೆ ನಡೆದಿದೆ. ಬಳಿಕ ಪ್ರಯಾಣಿಕರ ಮನ ಒಲಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!