ಅತೃಪ್ತರಿಗೆ ಜೀರೋ ಟ್ರಾಫಿಕ್ ಸದನದಲ್ಲಿ ಕೋಲಾಹಲ!

By Web DeskFirst Published Jul 23, 2019, 8:21 AM IST
Highlights

ಶಾಸಕರ ಜೀರೋ ಟ್ರಾಫಿಕ್‌ ಬಗ್ಗೆ ಕೋಲಾಹಲ| ಸ್ಪೀಕರ್‌ ಕಚೇರಿಗೆ ಆಗಮಿಸಿದ್ದ ಅತೃಪ್ತ ಶಾಸಕರಿಗೆ ಏರ್‌ಪೋರ್ಟ್‌ನಿಂದ ಜೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿದ್ದೇಕೆ?| ಆಡಳಿತ ಪಕ್ಷದ ಶಾಸಕರಿಂದ ತೀವ್ರ ಆಕ್ಷೇಪ| ಜೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿರಲಿಲ್ಲ ಎಂದು ಗೃಹಮಂತ್ರಿ ವರದಿ

ವಿಧಾನಸಭೆ[ಜು.23]: ಮುಂಬೈನಿಂದ ವಿಧಾನಸೌಧದ ಸ್ಪೀಕರ್‌ ಕಚೇರಿಗೆ ಆಗಮಿಸಿದ್ದ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂಬ ಸುದ್ದಿ ಸೋಮವಾರದ ಅಧಿವೇಶನದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದು, ಅಂತಿಮವಾಗಿ ಗೃಹ ಇಲಾಖೆ ಸಲ್ಲಿಸಿದ ದಾಖಲೆ ಪರಿಶೀಲಿಸಿ ರಾಜೀನಾಮೆ ನೀಡಿರುವ ಶಾಸಕರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿರಲಿಲ್ಲ ಎಂದು ವಿಧಾನಸಭೆ ಸಭಾಧ್ಯಕ್ಷ ಕೆ.ಆರ್‌. ರಮೇಶ್‌ಕುಮಾರ್‌ ಸದನಕ್ಕೆ ಸ್ಪಷ್ಟಪಡಿಸಿದರು.

ಸೋಮವಾರದ ಅಧಿವೇಶನದಲ್ಲಿ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿದ್ದ ಬಗ್ಗೆ ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ಪ್ರಸ್ತಾಪಿಸಿದರು.

ರಾಜ್ಯದಲ್ಲಿ ಗೃಹ ಇಲಾಖೆ ಅಧಿಕಾರಿಗಳು ಶಿಷ್ಟಾಚಾರದ ನಿಯಮಗಳನ್ನು ಗಾಳಿಗೆ ತೂರಿ ಮುಂಬೈನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಶಾಸಕರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿದ್ದರು. ಯಾರೋ ಗರ್ಭಿಣಿ ರಕ್ತಸ್ರಾವ ಆಗಿ ಬಿದ್ದಿದ್ದರೆ ಅವರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸುವುದಿಲ್ಲ. ಹೀಗಿದ್ದಾಗ ಯಾವ ಕಾರಣಕ್ಕೆ ಹಾಗೂ ಯಾರ ಆದೇಶದ ಮೇರೆಗೆ ಇವರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಯಿತು. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಮಾಡಿದವರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡುವ ಅಗತ್ಯವೇನಿತ್ತು? ಬೇರೆಯವರು ಇನ್ನೂ ದೊಡ್ಡ ಅಪರಾಧಗಳು ಮಾಡುತ್ತಾರೆ. ಅವರಿಗೂ ಜೀರೋ ಟ್ರಾಫಿಕ್‌ ಕೊಡುತ್ತೀರಾ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಎಂ.ಬಿ. ಪಾಟೀಲ್‌, ಯಾರೂ ಜೀರೋ ಟ್ರಾಫಿಕ್‌ಗೆ ಆದೇಶ ಮಾಡಿಲ್ಲ. ರಾಜೀನಾಮೆ ನೀಡಿರುವ ಶಾಸಕರಿಗೆ ಜೀರೋ ಟ್ರಾಫಿಕ್‌ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಎಂ.ಬಿ. ಪಾಟೀಲ್‌ ಉತ್ತರಕ್ಕೆ ಗರಂ ಆದ ಸ್ಪೀಕರ್‌ ರಮೇಶ್‌ ಕುಮಾರ್‌, ನಿಮ್ಮ ಉತ್ತರ ಜನರು ಒಪ್ಪುತ್ತಾರಾ? ಇಡೀ ದೇಶ ನಿಮ್ಮ ಉತ್ತರ ನೋಡಿದೆ. ಜೀರೋ ಟ್ರಾಫಿಕ್‌ನಲ್ಲಿ ಸಂಚರಿಸಿದ್ದನ್ನು ಸುದ್ದಿ ವಾಹಿನಿಗಳಲ್ಲಿ ನೋಡಿದ್ದಾರೆ. ಅವರು ದೇಶಭಕ್ತರು, ದೇಶಕ್ಕಾಗಿ ಪ್ರಾಣಬಿಟ್ಟವರು ಅಲ್ಲ. ಮುಂದೊಂದು ದಿನ ಕೈದಿಗಳಿಗೆ ಕೊಟ್ಟುಬಿಡಿ. ಮುಂದೆ ಹೇಗೆ ಸಮಾಜ ನಡೆಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತೊಮ್ಮೆ ಸ್ಪಷ್ಟನೆ ನೀಡಿದ ಗೃಹ ಸಚಿವ ಎಂ.ಬಿ. ಪಾಟೀಲ್‌, ಅಧಿಕಾರಿಗಳ ಮಾಹಿತಿ ಪ್ರಕಾರ ಎಚ್‌ಎಎಲ್‌ನಿಂದ ವಿಧಾನಸೌಧಕ್ಕೆ 40 ನಿಮಿಷ ತೆಗೆದುಕೊಂಡಿದ್ದಾರೆ. ಹೀಗಾಗಿ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿರಲಿಲ್ಲ. ಈ ಬಗ್ಗೆ ಮತ್ತಷ್ಟುದಾಖಲೆ ತರಿಸಿ ವಿವರಣೆ ನೀಡುತ್ತೇನೆ ಎಂದು ಹೇಳಿದರು.

ಬಳಿಕ ಸಂಜೆ ವೇಳೆಗೆ ಖುದ್ದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ಗೃಹ ಇಲಾಖೆ ಎಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಅವರು ವಿಡಿಯೋ ಸಮೇತ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌ ಅವರ ಕಚೇರಿಯಲ್ಲಿ ಅವರಿಗೆ ದಾಖಲೆ ಒದಗಿಸಿದರು.

ಬಳಿಕ ಸದನದ ಮುಂದೆ ಸ್ಪಷ್ಟೀಕರಣ ನೀಡಿದ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌, ಗೃಹ ಇಲಾಖೆ ಅಧಿಕಾರಿಗಳು ವಿಡಿಯೋ ತೋರಿಸಿದ್ದಾರೆ. ಶಾಸಕರ ಬಸ್ಸು ನಾಲ್ಕು ಕಡೆ ಸಿಗ್ನಲ್‌ನಲ್ಲಿ ನಿಂತಿತ್ತು. ಜೀರೋ ಟ್ರಾಫಿಕ್‌ ಸೌಲಭ್ಯ ಕಲ್ಪಿಸಿದ್ದೇವೆ ಎಂಬುದು ಸುಳ್ಳು. ರಾಜ್ಯಪಾಲರು ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ಎಂದು ಹೇಳಿದ್ದಾರೆ ಎಂಬುದೂ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು.

click me!