ರಾಜ್ಯಾದ್ಯಂತ ಸಂಚರಿಸಲಿದೆ ರಕ್ತ ಸಂಗ್ರಹಣೆ ವಾಹನ

By Web DeskFirst Published Jul 23, 2019, 8:16 AM IST
Highlights

ರಕ್ತ ಸಂಗ್ರಹಣೆ ವಾಹನಕ್ಕೆ ಆರೋಗ್ಯ ಸಚಿವರು ಚಾಲನೆ ನೀಡಿದ್ದಾರೆ. ಈ ವಾಹನಗಳು ಆಯಾ ಜಿಲ್ಲೆಗಳಾದ್ಯಂತ ಸಂಚರಿಸಿ ದಾನಿಗಳಿಂದ ರಕ್ತ ಸಂಗ್ರಹಿಸಿ ಅವಶ್ಯಕವಿದ್ದವರಿಗೆ ಪೂರೈಸುವ ಮೂಲಕ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿವೆ.

ಬೆಂಗಳೂರು[ಜು.23] :  ರಾಜ್ಯದಲ್ಲಿ ರಕ್ತದ ಕೊರತೆ ನೀಗಿಸುವ ಸಲುವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ(ಎನ್‌ಎಚ್‌ಎಂ) ಆರೋಗ್ಯ ಇಲಾಖೆಯಿಂದ 2.10 ಕೋಟಿ ರು.ವೆಚ್ಚದಲ್ಲಿ ಖರೀದಿಸಿರುವ ಐದು ಸುಸಜ್ಜಿತ ‘ರಕ್ತ ಸಂಗ್ರಹಣೆ ಮತ್ತು ವಿತರಣಾ ವಾಹನ’ ಗಳಿಗೆ ಸಚಿವ ಶಿವಾನಂದ ಪಾಟೀಲ್‌ ಚಾಲನೆ ನೀಡಿದರು.

ಆರೋಗ್ಯ ಇಲಾಖೆಯ ಪ್ರಧಾನ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ವಾಹನಗಳಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಈ ವಾಹನಗಳು ಆಯಾ ಜಿಲ್ಲೆಗಳಾದ್ಯಂತ ಸಂಚರಿಸಿ ದಾನಿಗಳಿಂದ ರಕ್ತ ಸಂಗ್ರಹಿಸಿ ಅವಶ್ಯಕವಿದ್ದವರಿಗೆ ಪೂರೈಸುವ ಮೂಲಕ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು.

ವಾಹನ ಸೌಲಭ್ಯಗಳ ಕುರಿತು ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ರಕ್ತನಿ​​ಧಿ ಘಟಕ) ರಾಜ್ಯ ನೋಡಲ್‌ ಅ​ಧಿಕಾರಿ ಹಾಗೂ ಉಪ ನಿರ್ದೇಶಕ ಡಾ. ಸ್ವತಂತ್ರಕುಮಾರ್‌ ಬಣಕಾರ್‌, ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಖರೀದಿಸಿರುವ ಈ ವಾಹನಗಳನ್ನು ಕೇಂದ್ರದ ಮಾರ್ಗಸೂಚಿ ಅನ್ವಯವೇ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಸಂಗ್ರಹ ಬಹುದೊಡ್ಡ ಸವಾಲಾಗಿದೆ. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ನಿರೀಕ್ಷೆಗಿಂತ ಕಡಿಮೆ ರಕ್ತ ಸಂಗ್ರಹವಾಗುತ್ತಿದೆ. ಪರಿಣಾಮ ತುರ್ತು ಪರಿಸ್ಥಿತಿಗಳಲ್ಲಿ ಗರ್ಭಿಣಿಯರು, ಅಪಘಾತ ನಡೆದ ಸಂದರ್ಭದಲ್ಲಿ ರಕ್ತದ ಕೊರತೆಯಾಗುತ್ತಿದೆ. ಅಲ್ಲದೆ, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡರೂ, ಕೊರತೆ ನೀಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ವಾಹನಗಳನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.

5 ಜಿಲ್ಲೆಗಳಲ್ಲಿ ಸೇವೆ :  ಈ ವಾಹನಗಳು ಟಾಟಾ ಕಂಪನಿಯ ವಾಹನಗಳಾಗಿದ್ದು, ಜೈಪುರದ ಕಮಲ್‌ ಕೋಚ್‌ ಸಂಸ್ಥೆಯವರು ವಾಹನದ ವಿನ್ಯಾಸ ಮಾಡಿಕೊಟ್ಟಿದ್ದಾರೆ. ತುಮಕೂರು, ದಾವಣಗೆರೆ, ಶಿವಮೊಗ್ಗ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿವೆ. ಇವು ಜಿಲ್ಲಾದ್ಯಂತ ರಕ್ತ ದಾನಿಗಳಿರುವಲ್ಲಿಗೆ ತೆರಳಿ ರಕ್ತ ಸಂಗ್ರಹಿಸಿ, ಅಗತ್ಯ ಇರುವ ಹತ್ತಿರದ ಸರ್ಕಾರಿ ರಕ್ತ ನಿಧಿ​​ಗಳಿಗೆ ರಕ್ತ ಪೂರೈಕೆ ಮಾಡಲಿವೆ.

click me!