ಟ್ಯಾನರಿಗಳ ಎತ್ತಂಗಡಿ; ಉತ್ತರದಲ್ಲಿ ಗಂಗೆ ಸ್ವಚ್ಛತೆಗೆ ಯೋಗಿ ದಿಟ್ಟ ನಿರ್ಧಾರ

By Suvarna Web DeskFirst Published Apr 16, 2017, 11:07 AM IST
Highlights

ಟ್ಯಾನರಿಗಳನ್ನು ಟಾರ್ಗೆಟ್ ಮಾಡಿರುವುದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಮೊದಲ ಹೆಜ್ಜೆ ಎನ್ನಲಾಗಿದೆ. ಉ.ಪ್ರ. ಸರಕಾರದ ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಎಲ್ಲಾ ಮಾಲಿನ್ಯಕಾರಕ ಕಾರ್ಖಾನೆಗಳನ್ನೂ ಶಿಫ್ಟ್ ಮಾಡಬಹುದು, ಅಥವಾ ಕೈಗಾರಿಕಾ ಪ್ರದೇಶಗಳಲ್ಲಿ ಕೊಳಚೆ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದು.

ನವದೆಹಲಿ(ಏ. 16): ಅಧಿಕಾರಕ್ಕೆ ಬಂದಾಗಿನಿಂದ ಸಾಕಷ್ಟು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಾ ಬಂದಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇಂದು ಗಂಗಾ ಸ್ವಚ್ಛತೆ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕಾನಪುರದ ಬಳಿ ಗಂಗಾ ನದಿ ನೀರಿನ ಮಾಲಿನ್ಯಕ್ಕೆ ಹೆಚ್ಚು ಕಾರಣವಾಗಿರುವ ಚರ್ಮೋತ್ಪನ್ನ ಕಾರ್ಖಾನೆಗಳನ್ನು ನದಿಯಿಂದ ದೂರದ ಪ್ರದೇಶಗಳಿಗೆ ವರ್ಗಾಯಿಸಲು ಉ.ಪ್ರ. ಸಿಎಂ ಯೋಜಿಸಿದ್ದಾರೆ. ಟ್ಯಾನರಿಗಳನ್ನು ಶಿಫ್ಟ್ ಮಾಡಲು ಹೊಸ ಜಾಗವನ್ನು ಗುರುತಿಸುವ ಕೆಲಸ ಈಗಾಗಲೇ ಶುರುವಾಗಿದೆ.

ಬ್ರಿಟಿಷ್ ಕಾಲದಿಂದಲೂ ಅಸ್ತಿತ್ವದಲ್ಲಿರುವ ಟ್ಯಾನರಿಗಳ ಸಂಖ್ಯೆ ಕಾನಪುರದಲ್ಲಿ 400 ಇವೆ. ಇವುಗಳು 20 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ. ಇವುಗಳನ್ನು ಡಿಸ್ಟರ್ಬ್ ಮಾಡಿದರೆ ಹಲವು ಅನನುಕೂಲಗಳಿವೆ ಎಂಬ ಕಾರಣಕ್ಕೆ ಹಿಂದಿನ ಅಖಿಲೇಶ್ ಯಾದವ್ ಸರಕಾರ ಒಂದು ಗಟ್ಟಿ ನಿರ್ಧಾರಕ್ಕೆ ಬರಲು ಹಿಂದೇಟು ಹಾಕಿತ್ತು. ಈಗ ಯೋಗಿ ಸರಕಾರ ಶತಾಯಗತಾಯ ಲೆದರ್ ಫ್ಯಾಕ್ಟರಿಗಳನ್ನು ಬೇರೆಡೆಗೆ ಶಿಫ್ಟ್ ಮಾಡುವುದೆಂದು ನಿರ್ಧಾರಕ್ಕೆ ಬಂದಾಗಿದೆ. ನ್ಯಾಷಲನ್ ಗ್ರೀನ್ ಟ್ರಿಬ್ಯುನಲ್'ಗೂ ಈ ಬಗ್ಗೆ ಸರಕಾರ ಭರವಸೆ ನೀಡಿದೆ.

ಹಿರಿಯ ವಕೀಲ ಎಂ.ಸಿ.ಮೆಹ್ತಾ ಅವರು 1985ರಲ್ಲೇ ಗಂಗಾ ನದಿ ಸ್ವಚ್ಛತೆಗೆ ಸುಪ್ರೀಂಕೋರ್ಟ್'ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯವು 2014ರಲ್ಲಿ ಈ ಪ್ರಕರಣವನ್ನು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್'ಗೆ ವರ್ಗ ಮಾಡಿದೆ.

ಪರಿಸರ ತಜ್ಞರ ಪ್ರಕಾರ, ನದಿಯಿಂದ 150 ಕಿಮೀ ವ್ಯಾಪ್ತಿಯ ಪ್ರದೇಶವೆಲ್ಲವೂ ಗಂಗಾ ನದಿ ಪಾತ್ರಕ್ಕೆ ಸೇರಿಕೊಳ್ಳುತ್ತವೆ. ಹೀಗಾಗಿ, ಗಂಗಾ ನದಿ ಕಿನಾರೆಯಿಂದ ಕನಿಷ್ಠ 150-200 ಕಿಮೀ ದೂರದ ಸ್ಥಳಗಳಲ್ಲಿ ಟ್ಯಾನರಿಗಳಿಗೆ ಹೊಸ ಜಾಗ ಹುಡುಕಬೇಕು. ಇನ್ನೂ ಕೆಲ ತಜ್ಞರ ಪ್ರಕಾರ, ಗಂಗಾ ನದಿ ಮಾಲಿನ್ಯಕ್ಕೆ ಟ್ಯಾನರಿಗಳಷ್ಟೇ ಅಲ್ಲ, ಡಿಸ್ಟಿಲೆರಿ, ಸಕ್ಕರೆ, ಪೇಪರ್ ಮೊದಲಾದ ಫ್ಯಾಕ್ಟರಿಗಳೂ ಕಾರಣವಾಗಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನದ ಪ್ರಕಾರ ಹರಿದ್ವಾರ ಮತ್ತು ಕಾನಪುರದ ನಡುವಿನ 543 ಕಿಮೀ ವ್ಯಾಪ್ತಿಯ ಪ್ರದೇಶದಲ್ಲಿ 1 ಸಾವಿರಕ್ಕೂ ಹೆಚ್ಚು ಗಂಭೀರ ಮಾಲಿನ್ಯಕಾರಕ ಕಾರ್ಖಾನೆಗಳಿವೆಯಂತೆ. ಮಂಡಳಿಯು ಈ ಬಗ್ಗೆ ಒಂದು ವರದಿಯನ್ನು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್'ಗೆ ಸಲ್ಲಿಸಿದೆ. ಹೀಗಾಗಿ, ಟ್ಯಾನರಿಗಳನ್ನಷ್ಟೇ ಶಿಫ್ಟ್ ಮಾಡಿದರೆ ಹೆಚ್ಚು ಪ್ರಯೋಜನವಿಲ್ಲ. ಇಂತಹ ಮಾಲಿನ್ಯಕಾರಕ ಫ್ಯಾಕ್ಟರಿಗಳೆಲ್ಲವನ್ನೂ ಗಂಗಾ ನದಿ ಪಾತ್ರದಿಂದ ಇನ್ನೂರು ಕಿಮೀ ದೂರಕ್ಕೆ ವರ್ಗಾಯಿಸಬೇಕಾಗುತ್ತದೆ.

ಟ್ಯಾನರಿಗಳನ್ನು ಟಾರ್ಗೆಟ್ ಮಾಡಿರುವುದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಮೊದಲ ಹೆಜ್ಜೆ ಎನ್ನಲಾಗಿದೆ. ಉ.ಪ್ರ. ಸರಕಾರದ ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಎಲ್ಲಾ ಮಾಲಿನ್ಯಕಾರಕ ಕಾರ್ಖಾನೆಗಳನ್ನೂ ಶಿಫ್ಟ್ ಮಾಡಬಹುದು, ಅಥವಾ ಕೈಗಾರಿಕಾ ಪ್ರದೇಶಗಳಲ್ಲಿ ಕೊಳಚೆ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದು.

click me!