ಸಿದ್ದುಗೆ ಬಿಎಸ್‌ವೈ ಕೇಳಿದ ಪಂಚ ಪ್ರಶ್ನೆಗಳೇನು..?

By Suvarna Web DeskFirst Published Feb 8, 2018, 8:22 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಟ್ವೀಟರ್‌ ವಾರ್‌ ಭರ್ಜರಿಯಾಗಿ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಟ್ವೀಟರ್‌ ವಾರ್‌ ಭರ್ಜರಿಯಾಗಿ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

ಇಡೀ ಟ್ವೀಟ್‌ ಉದ್ದಕ್ಕೂ ಯಡಿಯೂರಪ್ಪ ಅವರು ‘ಡಿಯರ್‌ ಮಿ.10 ಪರ್ಸೆಂಟ್‌ ಸಿಎಂ ಸಿದ್ದರಾಮಯ್ಯ’ ಎಂದೇ ಸಂಬೋಧಿಸಿದ್ದಾರೆ. ನೀವು ಚರ್ಚೆಗೆ ಮುಂದಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಇದನ್ನು ದೆಹಲಿವರೆಗೆ ಕೊಂಡೊಯ್ಯುವ ಮೊದಲು ನೀವು ನನ್ನ ಕೆಳಕಂಡ ಪಂಚ ಪ್ರಶ್ನೆಗಳಿಗೆ ಉತ್ತರಿಸಬಹುದಲ್ಲ ಎಂದೂ ಯಡಿಯೂರಪ್ಪ ಮಂಗಳವಾರ ವ್ಯಂಗ್ಯವಾಗಿ ಹೇಳಿದ್ದಾರೆ.

ಪ್ರ 1. ಲೋಕಾಯುಕ್ತ ಸಂಸ್ಧೆಗಿದ್ದ ಎಲ್ಲ ಅಧಿಕಾರಿಗಳನ್ನು ಕಿತ್ತುಕೊಂಡು ಅದನ್ನು ಹಲ್ಲಿಲ್ಲದ ಸಂಸ್ಥೆಯನ್ನಾಗಿ ಮಾಡಿದ್ದು ಯಾಕೆ?

ಪ್ರ 2. ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ನಂ.1 ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಅಂಥ ಸಚಿವರ ಬೆನ್ನಿಗೆ ನೀವು ನಿಂತುಕೊಂಡಿದ್ದು ಯಾಕೆ? ಅಂಥ ಕಳಂಕಿತ ಸಚಿವರನ್ನು ಇಟ್ಟುಕೊಂಡ ನಿಮ್ಮ ಸಂಪುಟದ ಮೌಲ್ಯ ಎಲ್ಲಿ ಹೋಯಿತು?

ಪ್ರ 3. ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಉದ್ಯಮಿಯೊಬ್ಬರಿಗೆ ಅನುಕೂಲ ಮಾಡಿಕೊಟ್ಟಬದಲಾಗಿ ನೀವು ಅಧಿಕಾರಿಯೊಬ್ಬರಿಂದ ಪಡೆದುಕೊಂಡಿದ್ದು ಎನ್ನಲಾದ 70 ಲಕ್ಷ ರು. ಮೌಲ್ಯದ ಹ್ಯೂಬ್ಲೋಟ್‌ ವಾಚ್‌, ನಿಮ್ಮ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ?

ಪ್ರ 4. ನೀವು ರೈತರ ಪರವಾಗಿರುವವರು ಎಂದು ಹೇಳಿಕೊಳ್ಳುತ್ತೀರಿ. ಹಾಗಿದ್ದ ಮೇಲೂ ನಿಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 3,500ಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ?

ಪ್ರ 5. ಕೊಪ್ಪಳ ಮತ್ತು ಕುಷ್ಟಗಿ ತಾಲೂಕುಗಳಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೆಲಸ ಮಾಡದೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಹೊಡೆದ 39.38 ಕೋಟಿ ರು. ಮೊತ್ತದ ನೀರಾವರಿ ಹಗರಣವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

click me!