
ಬೆಂಗಳೂರು: ಒಂದೆಡೆ ನಟ ವಿಷ್ಣುವರ್ಧನ್ ಅಭಿಮಾನಿ ಗಳು ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ಆಗಬೇಕು ಎಂದು ಒತ್ತಾಯಿಸುತ್ತಿದ್ದರೆ, ಇನ್ನೊದೆಡೆ ಅವರ ಅಳಿಯ, ನಟ ಅನಿರುದ್ಧ ಅವರು, ‘ಮೈಸೂರಿನಲ್ಲಿಯೇ ಡಾ. ವಿಷ್ಣು ಸ್ಮಾರಕ ನಿರ್ಮಾಣ ಆಗಲಿದೆ, ಅದರಲ್ಲಿ ಎರಡು ಮಾತಿಲ್ಲ. ಸ್ಮಾರಕ ನಿರ್ಮಾಣ ಕಾಮ ಗಾರಿ ಆರಂಭಿಸುವ ಪ್ರಯತ್ನವನ್ನು ಜನವರಿಯಲ್ಲೇ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ಮಾರಕ ನಿರ್ಮಾಣದ ಕುರಿತು ಮೈಸೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ರಜೆ ಇತ್ತು. ಅಲ್ಲದೇ ನ್ಯಾಯಾಧೀಶರ ಕೊರತೆ ಕೂಡ ಇದ್ದು, ಜಾಗಕ್ಕೆ ಸಂಬಂಧಿಸಿದ ವಿಚಾರಣೆ ತಡವಾಗುತ್ತಿದೆ. ಜನವರಿಯಲ್ಲಿ ಈ ವಿಷಯವನ್ನು ಸರಿಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಗಡುವು ವಿಧಿಸಿದ ಕೂಡಲೇ ಕಾಮಗಾರಿ ಆಗುವುದಿಲ್ಲ. ಇಷ್ಟೇ ದಿನ ಕಾದಿದ್ದೇವೆ. ಹಿರಿಯ ಅಧಿಕಾರಿಗಳ ಮಾತಿನ ಮೇಲೆ ಇನ್ನಷ್ಟು ದಿನ ಕಾಯುತ್ತೇವೆ. ಜನವರಿಯಲ್ಲೇ ಕಾಮಗಾರಿ ಪ್ರಾರಂಭಿಸುವ ಯತ್ನ ಮಾಡುತ್ತೇವೆ’ ಎಂದರು. ‘ನಾವಾಗಿಯೇ ಮೈಸೂರಿಗೆ ಹೋಗುತ್ತಿಲ್ಲ. ಅಭಿಮಾನಿಗಳ ಅಭಿಪ್ರಾಯದ ಮೇಲೆ ಹೋಗುತ್ತಿದ್ದೇವೆ. ಇಲ್ಲೆಲ್ಲೂ ಆಗಲ್ಲ ಎಂದಿದ್ದಕ್ಕೆ ಮೈಸೂರಿನಲ್ಲಿ ಸರ್ಕಾರವೇ ಜಮೀನು ಕೊಟ್ಟಿದೆ. ಅಭಿಮಾನ್ ಸ್ಟುಡಿಯೋದ ಸಮಾಧಿ ಪುಣ್ಯಭೂಮಿಯಾಗಿ ಹಾಗೇ ಇರುತ್ತದೆ.
ಮೈಸೂರಲ್ಲಿ ಸ್ಮಾರಕ ಆಗುತ್ತದೆ ಅಷ್ಟೇ, ಸ್ಥಳಾಂತವಲ್ಲ. ಈ ಹಿಂದೆಯೇ ಅಭಿಮಾನ್ ಸ್ಟುಡಿಯೋದ ಜಾಗದ ಮೇಲೆ ಕೇಸ್ ಇದೆ. ಈ ಕುರಿತು ಬಾಲಣ್ಣ ಅವರ ಕುಟುಂಬದವರೊಂದಿಗೆ ಮಾತನಾಡಿ ಎಂದಿದ್ದೆ. ಸರಿ ಆಗೋದಾದ್ರೆ ಅಲ್ಲೇ ಮಾಡೋಣ ಎಂದಿದ್ದೆ. ಆದರೆ ಇಲ್ಲಿವರೆಗೂ ಯಾವುದೂ ನಿರ್ಣಯವಾಗಿಲ್ಲ. ಸ್ಮಾರಕ ನಿರ್ಮಾಣಕ್ಕೆ 11 ಗುಂಟೆ ಜಾಗ ಆಗುವುದಿಲ್ಲ. ಸಮಾಧಿಗಷ್ಟೇ 2 ಗುಂಟೆ ಜಾಗ ಸಾಕು. ಹೀಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಮಾಡಲು ಸಾಕಷ್ಟು ಸಮಸ್ಯೆಗಳು ಇವೆ’ ಎಂದು ಹೇಳಿದರು.
‘ಸರ್ಕಾರ ಮೈಸೂರಿನಲ್ಲಿ ಜಾಗ ಕೊಟ್ಟಿದ್ದರಿಂದ ಅಲ್ಲಿಗೆ ಹೋಗುತ್ತಿದ್ದೇವೆಯೇ ಹೊರತು ನಮ್ಮ ಉದ್ದೇಶವಲ್ಲ. ಅಂತ್ಯಸಂಸ್ಕಾರ ನಡೆಸಿದ ಜಾಗ ಬಿಟ್ಟು ಬೇರೆ ಕಡೆಯಲ್ಲಿ ಸ್ಮಾರಕ ಮಾಡುತ್ತಿದ್ದಾರೆ ಎಂದು ಕುಟುಂಬದ ಮೇಲೆ ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಡಿ. ಒಂದು ವೇಳೆ ಬೇಸರವಿದ್ದರೆ ಕ್ಷಮೆ ಕೋರುತ್ತೇನೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.