
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಮ್ಮ ಏಕೈಕ ಪುತ್ರ ಅನುತ್ತೀರ್ಣಗೊಂಡಿದ್ದಕ್ಕೆ ಪತಿ ಜತೆ ಉಂಟಾದ ಜಗಳದಿಂದ ಬೇಸರಗೊಂಡು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕತ್ರಿಗುಪ್ಪೆ ಸಮೀಪ ವಿವೇಕಾನಂದ ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮಹಾದೇವಿ (40) ಮೃತ ದುರ್ದೈವಿ. ಮನೆಯಲ್ಲಿ ಮಂಗಳವಾರ ರಾತ್ರಿ ಮಹಾದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಅವರ ಕೊಠಡಿಗೆ ಪತಿ ಬಸವರಾಜು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಹಾದೇವಿ ಅವರು ಎಪಿಎಸ್ ಕಾಲೇಜಿನಲ್ಲಿ ಮೇಲ್ವಿಚಾರಕಾಗಿದ್ದು, ಪತಿ ಬಸವರಾಜು ಹಾಗೂ ಪುತ್ರ ನಿತಿನ್ ಜೊತೆ ವಿವೇಕಾನಂದ ನಗರದಲ್ಲಿ ನೆಲೆಸಿದ್ದರು. ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಅವರ ಪುತ್ರ ಅನುತ್ತೀರ್ಣಗೊಂಡಿದ್ದ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಪರೀಕ್ಷೆಯಲ್ಲಿ ಫೇಲಾದ ನಂತರ ನಿತಿನ್, ಶ್ರೀನಗರದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿದ್ದ. ಮಗನ ವಿಷಯವಾಗಿ ಮತ್ತೆ ರಾತ್ರಿ ಅವರಲ್ಲಿ ಜಗಳವಾಗಿದೆ. ಆಗ ‘ನಿನ್ನ ಮುದ್ದಿನಿಂದಲೇ ಅವನು ಹಾಳಾಗಿದ್ದು. ಅವನು ಸರಿಯಾಗಿ ಓದಲಿಲ್ಲ' ಎಂದು ಮಹಾದೇವಿ ಅವರಿಗೆ ಪತಿ ಬಸವರಾಜು ಬೈದಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಅವರು, ಸೀದಾ ತಮ್ಮ ಮಲಗುವ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾರೆ.
ಇತ್ತ ಬಸವರಾಜು ಅವರು, ಎಷ್ಟುಹೊತ್ತಾದರೂ ಕೊಠಡಿಯಿಂದ ಪತ್ನಿ ಹೊರಬಾರದೆ ಹೋದಾಗ ಕಂಗಲಾಗಿದ್ದಾರೆ. ಕೊಠಡಿ ಬಾಗಿಲು ತೆಗೆಯುವಂತೆ ಪತ್ನಿಯಲ್ಲಿ ಅವರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದಾದ ಬಳಿಕ ರಾತ್ರಿ 12 ಗಂಟೆಗೆ ಬಸವರಾಜು ಕಿರಿಯ ಸೋದರ, ಕಂಪನಿ ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ್ದಾರೆ. ಆಗ ಸೋದರನಿಗೆ ‘ನಿಮ್ಮ ಅತ್ತಿಗೆ ಬಾಗಿಲು ಹಾಕಿಕೊಂಡಿದ್ದಾರೆ. ಎಷ್ಟುಕೂಗಿದರೂ ಬಾಗಿಲು ತೆರೆಯುತ್ತಿಲ್ಲ' ಎಂದು ಬಸವರಾಜು ಹೇಳಿದ್ದರು. ಆಗ ಆತಂಕಗೊಂಡ ಸೋದರರು, ರಾತ್ರಿ 2 ಗಂಟೆಗೆ ಸುಮಾರಿಗೆ ಬಲವಂತವಾಗಿ ಬಾಗಿಲು ಮುರಿದು ಒಳಪ್ರವೇಶಿಸಿದಾಗ ನೇಣಿನ ಕುಣಿಕೆಯಲ್ಲಿ ಮಹಾದೇವಿ ಮೃತದೇಹ ಕಂಡು ಬಂದಿದೆ. ತಕ್ಷಣವೇ ಸ್ಥಳೀಯ ಠಾಣೆಗೆ ಅವರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.