ಮುಂಬೈ ಜೈಲಲ್ಲಿ ಮಲ್ಯ, ನಿಮೋ ರೂಂಮೇಟ್ಸ್‌?

By Web DeskFirst Published Jun 12, 2019, 8:11 AM IST
Highlights

ಗಡಿಪಾರಾದರೆ ಮುಂಬೈನ ಆರ್ಥರ್‌ ರೋಡ್‌ ಜೈಲಲ್ಲಿ ಮಲ್ಯ, ನಿಮೋ ರೂಂಮೇಟ್ಸ್‌| ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಮಾಹಿತಿ

ನವದೆಹಲಿ[ಜೂ.12]: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರು. ವಂಚಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಜ್ರೋದ್ಯಮಿ ನೀರವ್‌ ಮೋದಿ ಹಾಗೂ ಮದ್ಯದೊರೆ ವಿಜಯ್‌ ಮಲ್ಯ ಅವರು ಭಾರತಕ್ಕೆ ಗಡೀಪಾರಾದರೆ, ಇಬ್ಬರನ್ನೂ ಆರ್ಥರ್‌ ರೋಡ್‌(ಮುಂಬೈ ಸೆಂಟ್ರಲ್‌ ಜೈಲು) ಜೈಲಿನ ಒಂದೇ ಕೋಣೆಯಲ್ಲಿಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಸ್‌ಬಿಐ ಸೇರಿ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರು. ಸಾಲ ಮರುಪಾವತಿ ಮಾಡದೆ ಲಂಡನ್‌ನಲ್ಲಿ ತಲೆ ಮರೆಸಿಕೊಂಡಿರುವ ವಿಜಯ್‌ ಮಲ್ಯರನ್ನು ಗಡೀಪಾರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಅವರನ್ನು ಗಾಳಿ, ಬೆಳಕು, ನೀರು ಹಾಗೂ ವೈದ್ಯಕೀಯ ಸೇರಿ ಸಕಲ ಸವಾಲತ್ತು ಹೊಂದಿದ ಆರ್ಥರ್‌ ರೋಡ್‌ ಜೈಲಿನ ಬ್ಯಾರಕ್‌ ನಂ.12 ಕೋಣೆಯಲ್ಲಿಡಲು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಪತ್ರ ಮುಖೇನ ಮಾಹಿತಿ ನೀಡಿತ್ತು.

ಇದೀಗ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ನಲ್ಲಿ ನೀಮೋ ಗಡೀಪಾರು ಪ್ರಕ್ರಿಯೆ ನಡೆಯುತ್ತಿದ್ದು, ಅದರಲ್ಲಿ ಯಶಸ್ವಿಯಾದರೆ ಅವರನ್ನು ಜೈಲಿನಲ್ಲಿಡಲು ವ್ಯವಸ್ಥೆ ಮಾಡಲಾಗಿದೆಯೇ ಎಂದು ಕೇಂದ್ರ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಶ್ನಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರಕ್ಕೆ ಪತ್ರದ ಮುಖೇನ ಮಾಹಿತಿ ನೀಡಿರುವ ಮಹಾರಾಷ್ಟ್ರ ಕಾರಾಗೃಹ ಇಲಾಖೆ, ‘ವಿಜಯ್‌ ಮಲ್ಯಗಾಗಿ ಮೀಸಲಾಗಿರುವ ಆರ್ಥರ್‌ ಜೈಲಿನ ಕೋಣೆ ಸಂಖ್ಯೆ 12ರಲ್ಲೇ ನೀರವ್‌ ಮೋದಿಗೂ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದೆ.

click me!