
ಬೆಂಗಳೂರು/ಬಳ್ಳಾರಿ: ಬೆಳಗಾವಿಯ ಪಿಎಲ್‌ಡಿ ಬ್ಯಾಂಕಿನ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಸಚಿವ ಜಾರಕಿಹೊಳಿ ಸಹೋದರರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮತ್ತಷ್ಟು ತೀವ್ರವಾಗಿದೆ. ರಮೇಶ್ ಜೊತೆ ಸುಮಾರು 10 ರಿಂದ 12 ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆದಿದ್ದು, ಈ ನಿಟ್ಟಿನಲ್ಲಿ ತೆರೆಮರೆಯ ಮಾತುಕತೆಗಳೂ ನಡೆದಿವೆ. ಆದರೆ, ಈ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ಹಾಗೊಂದು ವೇಳೆ ರಮೇಶ್ ಜಾರಕಿಹೊಳಿ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿಗೆ ಬರುವುದೇ ಆದಲ್ಲಿ ಮುಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡುವ ಬಗ್ಗೆಯೂ ಪ್ರಸ್ತಾಪವಾಗಿದೆ. ಎಲ್ಲವೂ ಪ್ರಯತ್ನದ ಹಂತದಲ್ಲಿದ್ದು, ಯಾವುದೂ ಅಂತಿಮಗೊಂಡಿಲ್ಲ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
ಈ ನಡುವೆ ಶುಕ್ರವಾರ ಬಿಜೆಪಿಯ ಹಿರಿಯ ಮುಖಂಡ ಹಾಗೂ ಶಾಸಕ ಬಿ.ಶ್ರೀರಾಮುಲು ಅವರು ರಮೇಶ್ ಜಾರಕಿಹೊಳಿ ಅವರೊಂದಿಗೆ ದೂರ ವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿಯ ರಾಜಕೀಯ ಬೆಳವಣಿಗೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ರಾಜಕೀಯ ಪ್ರಭಾವಿಯಾಗಿ ಬೆಳೆಸಲು ಕಾಂಗ್ರೆಸ್ಸಿಗರೇ ನಡೆಸುತ್ತಿರುವ ಪ್ರಯತ್ನ, ಜಾರಕಿಹೊಳಿ ಸಹೋದರರನ್ನು ಕಾಂಗ್ರೆಸ್‌ನ ಕೆಲ ನಾಯಕರು ನಡೆಸಿಕೊಳ್ಳುತ್ತಿರುವ ರೀತಿ ಈ ಎಲ್ಲವೂ ಚರ್ಚೆಗೆ ಬಂದಿವೆ ಎನ್ನಲಾಗಿದೆ. ಆದರೆ, ಜಾರಕಿಹೊಳಿ ಅವರು ಯಾವುದೇ ನಿರ್ಧಾರವನ್ನು ತಿಳಿಸಲಿಲ್ಲ ಎನ್ನಲಾಗಿದೆ.
ಜಾರಕಿಹೊಳಿ ಮತ್ತು ರಾಮುಲು ಇಬ್ಬರೂ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದು, ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ, ಬಿಜೆಪಿ ಕೂಡ ರಾಮುಲು ಅವರನ್ನು ಮುಂದಿಟ್ಟುಕೊಂಡು ಜಾರಕಿಹೊಳಿ ಸಹೋದರರು ಮತ್ತವರ ಬೆಂಬಲಿಗ ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಜಾರಕಿಹೊಳಿ ಸಹೋದರರಿಗೂ ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಕಷ್ಟ ಎಂದು ಅನಿಸಿದಲ್ಲಿ ಬಿಜೆಪಿಯತ್ತ ಹೆಜ್ಜೆ ಹಾಕಬಹುದು ಎಂಬ ಮಾತು ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.