ಬೆಂಗಳೂರಲ್ಲಿ ಪೊಲೀಸರಿಂದಲೇ ನಡೆಯಿತು ಭಾರಿ ದರೋಡೆ

By Web DeskFirst Published Sep 8, 2018, 7:51 AM IST
Highlights

ಬೆಂಗಳೂರಿನಲ್ಲಿ ಪೊಲೀಸರಿಂದಲೇ ನಡೆದ ಭಾರೀ ದರೋಡೆ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. 1 ಕೋಟಿ ಮೊತ್ತದ ಹಳೇ ನೋಟು ಪ್ರಕರಣದಲ್ಲಿ ಮೂವರು ಪೊಲೀಸರು ಸೇರಿ ಐವರ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾದ ರಾಜಧಾನಿ ಹೃದಯ ಭಾಗ ಶೇಷಾದ್ರಿಪುರ ರಸ್ತೆಯಲ್ಲಿ ಸಿಸಿಬಿ ಪೊಲೀಸರೇ ದರೋಡೆ ಮಾಡಿದ್ದ 1 ಕೋಟಿ ಮೊತ್ತದ ಹಳೇ ನೋಟು ಪ್ರಕರಣದಲ್ಲಿ ಮೂವರು ಪೊಲೀಸರು ಸೇರಿ ಐವರ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 

ಕಾನ್ಸ್‌ಟೇಬಲ್‌ಗಳಾದ ನರಸಿಂಹಮೂರ್ತಿ, ಗಂಗಾಧರ್, ಎಎಸ್‌ಐ ಹೊಂಬಾಳೇಗೌಡ, ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ರಾಜು ಹಾಗೂ ಕೇರಳ ಮೂಲದ ಬದ್ರು ಎಂಬಾತನ ವಿರುದ್ಧ ಒಟ್ಟು 645 ಪುಟಗಳ ದೋಷಾರೋಪ ಪಟ್ಟಿಯನ್ನು ೮ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. 

ಹಣದ ಮೂಲ ಹಾಗೂ ಹಣವನ್ನು ಎಲ್ಲಿ ಬಚ್ಚಿಡ ಲಾಗಿದೆ ಎಂಬುದರ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿಲ್ಲ. ಆದರೆ ಆರೋಪಿಗಳು ಕೃತ್ಯ ಎಸಗಿರುವುದು ಹಲವು ಸಾಕ್ಷ್ಯಾಧಾರಗಳ ಮೂಲಕ ದೃಢಪಟ್ಟಿದೆ. ತನಿಖೆಗೆ ಸಹಕರಿಸದೆ ಸಾಕ್ಷ್ಯ ನಾಶ ಪಡಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿ ಯಲ್ಲಿ ಉಲ್ಲೇಖ ಮಾಡಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಲಾಗಿದೆ. 

ದೂರು ದಾಖಲಾದ ಬಳಿಕ ಆರೋಪಿ ಪೊಲೀಸರು ಪೊಲೀಸರ ಕೈಗೆ ಸಿಗದೇ ಅಜ್ಞಾತ ಸ್ಥಳದಲ್ಲಿದ್ದುಕೊಂಡೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಕ್ರಿಮಿನ ಲ್‌ಗಳ ಜಾಡು ಹಿಡಿದು ಹೋಗುವ ಅಂಶವನ್ನು ಕರಗತ ಮಾಡಿಕೊಂಡಿರುವ ಪೊಲೀಸರಿಗೆ ತಪ್ಪಿಸಿ ಕೊಳ್ಳುವ ಕಲೆ ಚೆನ್ನಾಗಿ ತಿಳಿದಿರುತ್ತದೆ. ಹೀಗಾಗಿಯೇ ಆರೋಪಿಗಳು ತನಿಖೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಕಳ್ಳ ತನ ಮಾಡಿಕೊಂಡಿರುವ ಬಗ್ಗೆ ತನಿಖಾಧಿಕಾರಿಗಳ ಬಳಿ ಕಲಂ164 ತಪ್ಪೊಪ್ಪಿಗೆ ಹೇಳಿಕೆ ನೀಡಿಲ್ಲ. ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆಲ್ಲ, ಬೇಜವಾಬ್ದಾರಿಯಾಗಿ ಉತ್ತರ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. 

ಕಮಿಷನ್ ಆಮಿಷ: ಬಿಎಂಟಿಸಿ ಬಸ್ ಚಾಲಕ ಸುಭಾನ ಮನ್ನಂಗಿ ಅವರು ಮನೆ ಕಟ್ಟಲು ಸಾಲ ಮಾಡಿಕೊಂಡು ಸಾಲ ತೀರಿಸಲಾಗದೆ ಕಷ್ಟದಲ್ಲಿದ್ದರು. ಪರಿಚಯಸ್ಥ ಸತ್ಯನಾರಾಯಣ, ಸುಭಾನ ಅವರಿಗೆ ಯಾರಾದರೂ ಹಳೇ ನೋಟು ಇಟ್ಟುಕೊಂಡಿರುವವರು ಇದ್ದರೆ ಕರೆದುಕೊಂಡು ಬಾ ನಾನು ಹೊಸ ನೋಟಿಗೆ ಬದಲಾವಣೆ ಮಾಡಿಕೊಟ್ಟು, ಕಮಿಷನ್ ನೀಡುತ್ತೇನೆ ಎಂದು ಆಮಿಷವೊಡ್ಡಿದ್ದ. ಸುಭಾನಗೆ ಪರಿಚಯವಿದ್ದ ರತ್ನಾ ಎಂಬಾಕೆ ರಾಗಿಣಿಗೆ ಹೇಳಿ ನೋಟು ಬದಲಾವಣೆ ಮಾಡಿಕೊಡಲು ಮುಂದಾಗಿದ್ದರು. 2017 ನವೆಂಬರ್ 25ರಂದು ರಾಗಿಣಿ ಹಣದ ಸಮೇತ ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ಕಾರಿನಲ್ಲಿ ಬಂದಿದ್ದರು.

ಸತ್ಯಾನಾರಾಯಣ, ವೆಂಕಟೇಶ್ ಇಬ್ಬರು ರಾಗಿಣಿ ತಂಡವನ್ನು ಭೇಟಿಯಾಗಿದ್ದರು. ನಾರಾಯಣ್‌ನಿಂದ ಹಣ ಬದಲಾವಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಗಿಣಿ ಕಾರಿನಲ್ಲಿ ಸ್ಥಳದಿಂದ ಹೊರಟ್ಟಿದ್ದರು. ಪುನಃ ವೆಂಕಟೇಶ್, ಸುಭಾನಗೆ ಕರೆ ಮಾಡಿ ತಾನು ಹಣ ಬದ ಲಾವಣೆ ಮಾಡಿಕೊಡುವುದಾಗಿ ಹೇಳಿ ಮೆಜೆಸ್ಟಿಕ್ ಬಳಿ ಪಾರ್ಟಿಗಳಿದ್ದಾರೆ ಎಂದು ಹೇಳಿದ್ದ. ಮೊದಲೇ ಆರೋ ಪಿ ರಮೇಶ್ ರಾಜುನನ್ನು  ಕರೆಯಿಸಿಕೊಂಡಿದ್ದ.

ಸ್ಕ್ವಾಡ್ ಎಂದು ಮೋಸ: ರೇಸ್‌ಕೋರ್ಸ್ ರಸ್ತೆ ಕಾಂಗ್ರೆಸ್ ಭವನದ ಬಳಿ ಹೊಯ್ಸಳ ಜೀಪ್‌ವೊಂದು ನಿಂತಿದ್ದ ಕಾರಣ ಹೈಗ್ರೌಂಡ್ಸ್ ಠಾಣೆ ಸರಹದ್ದಿನ ಮಾಧವನಗರ ಮುಖ್ಯರಸ್ತೆ ಬಳಿ ಬಂದಿದ್ದರು. ರಮೇಶ್ ರಾಜು ಜತೆ ಕಾರಿನಲ್ಲಿ ಸ್ಥಳಕ್ಕೆ ಬಂದ ಕಾನ್ಸ್ ಟೇಬಲ್ ಗಂಗಾಧರ್ ಹಣ ಎಲ್ಲಿ ಎಂದು ರಾಗಿಣಿ ಬಳಿ ಕೇಳಿ ಖಚಿತ ಪಡಿಸಿಕೊಂಡಿದ್ದ. ಮುಂದಿನ ರಸ್ತೆಯಲ್ಲಿ ಹಣ ಬದಲಾವಣೆ ಮಾಡಿಕೊಳ್ಳೊಣ ಎಂದು ಹೇಳಿ ಕಾರು ಹೊರಡುತ್ತಲೇ ಮತ್ತೊಂದು ಕಾರಿನಲ್ಲಿ ಬಂದ ಕಾನ್ಸ್‌ಟೇಬಲ್ ನರಸಿಂಹಮೂರ್ತಿ ಹಾಗೂ ಎಎಸ್‌ಐ ಹೊಂಬಾಳೇಗೌಡ, ರಾಗಿಣಿ ಅವರಿದ್ದ ಕಾರು ಅಡ್ಡಗಟ್ಟಿದ್ದರು. ನಾವು ಶೇಷಾದ್ರಿಪುರ ಸ್ಕ್ವಾಡ್ ಪೊಲೀಸರು ಎಂದು ಹೇಳುತ್ತಿದ್ದಂತೆ ಸುಭಾನ, ಚಂದ್ರಶೇಖರ್ ಕೆಲವು ಕಾರಿನಿಂದ ಇಳಿದು ಓಡಿ ಹೋಗಿದ್ದರು.

ಬಳಿಕ ರಾಗಿಣಿಯನ್ನು ಕಾರಿನಿಂದ ಇಳಿಯಲು ಬಿಡದೆ ವೈಯಾಲಿಕಾವಲ್ ಬಳಿ ಕರೆದೊಯ್ದಿದ್ದರು. ಈ ವೇಳೆ ವೆಂಕಟೇಶ್ ಕೈಗೆ ಆರೋಪಿಗಳು ಕೋಳ ತೊಡಿಸಿದ್ದರು. ವೈಯಾಲಿಕಾವಲ್ ಬಳಿ ರಾಗಿಣಿ ಕಾರಿನಲ್ಲಿದ್ದ ಹಣವನ್ನು ಸ್ವಿಫ್ಟ್ ಕಾರಿಗೆ ವರ್ಗಾಯಿಸಿಕೊಂಡಿದ್ದರು. ನಂತರ ಈ ಕಡೆ ಸುಳಿಯದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ತನಿಖಾಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಕೃತ್ಯದ ಬಳಿಕ ಅಧಿಕಾರಿಯನ್ನು ಭೇಟಿ ಮಾಡಬೇಕೆಂದು ಹೋಗಿದ್ದಾರೆ. ಈ ಸಂಬಂಧ ಮೊಬೈಲ್ ಕರೆ ವಿವರಗಳನ್ನು ಕಲೆ ಹಾಕಿರುವುದಾಗಿ ಉಲ್ಲೇಖಿಸಲಾಗಿದೆ.

ಎನ್.ಲಕ್ಷ್ಮಣ್

click me!