ರೈತರ ಸಾಲ ಮನ್ನಾ ಆಗುವವರೆಗೂ ಹೋರಾಟ: ಯೋಗೇಂದ್ರ ಯಾದವ್

By Suvarna Web DeskFirst Published Sep 24, 2017, 11:41 AM IST
Highlights

ಬರಗಾಲದಿಂದ ಸಂಕಷ್ಟದಲ್ಲಿರುವ ಕರ್ನಾಟಕ ಸೇರಿದಂತೆ ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡುವವರೆಗೆ ಹೋರಾಟ ಮುಂದುವರೆಸಬೇಕಾಗಿದೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರಾಷ್ಟ್ರೀಯ ಮುಖಂಡ ಯೋಗೇಂದ್ರ ಯಾದವ್ ಎಚ್ಚರಿಸಿದ್ದಾರೆ.

ಬೆಂಗಳೂರು: ಬರಗಾಲದಿಂದ ಸಂಕಷ್ಟದಲ್ಲಿರುವ ಕರ್ನಾಟಕ ಸೇರಿದಂತೆ ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡುವವರೆಗೆ ಹೋರಾಟ ಮುಂದುವರೆಸಬೇಕಾಗಿದೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರಾಷ್ಟ್ರೀಯ ಮುಖಂಡ ಯೋಗೇಂದ್ರ ಯಾದವ್ ಎಚ್ಚರಿಸಿದ್ದಾರೆ.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಶಿಕ್ಷಕರ ಸದನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದಕ್ಷಿಣ ಭಾರತ ಕಿಸಾನ್ ಮುಕ್ತಿ ಯಾತ್ರಾ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ದಕ್ಷಿಣ ಭಾರತದಲ್ಲಿ ಕಳೆದ ಮೂರು ವರ್ಷಗಳಿಂದ ತೀವ್ರ ಬರ ಆವರಿಸಿದ್ದು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ ಬರಗಾಲವಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಹಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕರ್ನಾಟಕದ ರೈತರು ಹೆಚ್ಚಿನ ಸಾಲದ ಸುಳಿಯಲ್ಲಿದ್ದಾರೆ ಎಂದರು.

ದೇಶದ ಬಹುತೇಕ ರಾಜ್ಯಗಳಲ್ಲಿ ರೈತರು ಸಾಲ ಮಾಡಿ ಬೆಳೆ ಕೈಗೆ ಸಿಗದೇ ಕಂಗಾಲಾಗಿದ್ದಾರೆ. ಹೀಗಾಗಿ ರೈತರನ್ನು ಇನ್ನಷ್ಟು ವಿನಾಶಕ್ಕೆ ದೂಡದೇ ದೇಶದ ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕಾಗಿದೆ.ಅಲ್ಲಿಯವರೆಗೆ ನಾವು ಹೋರಾಟ ಮುಂದುವರಿಸಬೇಕಾಗಿದೆ ಎಂದು ಅವರು ಹೇಳಿದರು.

ಶಾಸಕ ಹಾಗೂ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಕೃಷಿ ಬಿಕ್ಕಟ್ಟು ಹಾಗೂ ಬರಗಾಲ ರೈತರಿಗೆ ಮಾತ್ರ ಸೀಮಿತವಲ್ಲ. ಅದು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಕೃಷಿಕರಿಗೆ ಸರ್ಕಾರ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಸಮನ್ವಯ ಸಂಚಾಲಕ ವಿ.ಎಂ.ಸಿಂಗ್, ಕರ್ನಾಟಕ ರಾಜ್ಯರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಎಐಎಡಬ್ಲ್ಯುಯು ಉಪಾಧ್ಯಕ್ಷ ಜಿ.ಎನ್.ನಾಗರಾಜ, ಜಿ.ಸಿ.ಬಯ್ಯಾರೆಡ್ಡಿ, ಎಚ್.ವಿ.ದಿವಾಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

click me!