10 ಕೋಟಿ ರು. ಬಂಪರ್ ಲಾಟ್ರಿ ಗೆದ್ದ ಕೇರಳ ಚಾಲಕ

By Suvarna Web DeskFirst Published Sep 24, 2017, 11:31 AM IST
Highlights

ಭರ್ಜರಿ! ಮಲಪ್ಪುರಂನ ವ್ಯಕ್ತಿಗೆ ಖುಲಾಯಿಸಿದ ಅದೃಷ್ಟ

ಓಣಂ ಹಬ್ಬದ ಲಾಟರಿ ಗೆದ್ದ ಮುಸ್ತಫಾ ಈಗ ದಿಢೀರ್ ಶ್ರೀಮಂತ

ಮಲಪ್ಪುರಂ: ಈತ ನಿನ್ನೆ ಓರ್ವ ಸಾಮಾನ್ಯ ವಾಹನ ಚಾಲಕ ಹಾಗೂ ತೆಂಗಿನಕಾಯಿ ವ್ಯಾಪಾರಿ. ಇಂದು ಏಕಾಏಕಿ 10 ಕೋಟಿ ರು. ಒಡೆಯ! ನಿಜ, ನಸೀಬು ತೆರೆಯಿತೆಂದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ.

ಮಲಪ್ಪುರಂ ಜಿಲ್ಲೆಯ 48 ವರ್ಷದ ವಾಹನ ಚಾಲಕ ಮುಸ್ತಫಾ ಮೂಟ್ಟತ್ತದರಮ್ಮಾಳ್‌ಗೆ ಕೇರಳ ಸರ್ಕಾರದ 10 ಕೋಟಿ ಮೌಲ್ಯದ ಓಣಂ ಬಂಪರ್ ಲಾಟರಿ ಒಲಿದಿದೆ. ಇದು ಕೇರಳ ರಾಜ್ಯ ಲಾಟರಿಯ ದೊಡ್ಡ ಮೊತ್ತದ ಬಹುಮಾನ.

ಎಜೆ2876 ನಂಬರಿನ ಈ ಲಾಟರಿಗೆ 10 ಕೋಟಿ ರು.ಒಲಿದು ಬಂದಿದ್ದನ್ನು ಶುಕ್ರವಾರ ನಡೆದ ಡ್ರಾದಲ್ಲಿ ಘೋಷಿಸಲಾಗಿತ್ತು. ಪರಪ್ಪನಂಗಡಿಯ ಐಶ್ವರ್ಯ ಲಾಟರಿ ಏಜೆನ್ಸಿ ಮೂಲಕ ಈ ಲಾಟರಿಯನ್ನು ಮಾರಲಾಗಿತ್ತು.

ಆದರೆ ಶನಿವಾರ ಮಧ್ಯಾಹ್ನದವರೆಗೆ ಇದರ ವಿಜೇತರಾರೂ ಬಂದು ಹಣ ಕ್ಲೇಮ್ ಮಾಡಿಕೊಳ್ಳದ ಇರುವುದು ಊಹಾಪೋಹಕ್ಕೆ ಕಾರಣವಾಗಿತ್ತು. ಇದೇ ವೇಳೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಪರಪ್ಪನಂಗಡಿಯ ಫೆಡರಲ್ ಬ್ಯಾಂಕ್‌ಗೆ ಆಗಮಿಸಿದ ಮುಸ್ತಫಾ, ಲಾಟರಿಯನ್ನು ಬ್ಯಾಂಕ್ ಮ್ಯಾನೇಜರ್’ಗೆ ಹಸ್ತಾಂತರಿಸಿ, ತಾವು ವಿಜೇತರಾಗಿದ್ದು, ತಮ್ಮ ಖಾತೆಗೆ 10 ಕೋಟಿ ರು. ಲಾಟರಿ ಹಣ ಜಮಾ ಮಾಡುವಂತೆ ಕೋರಿದರು.

ಆಗ ಎಲ್ಲ ಕುತೂಹಲಕ್ಕೆ ತೆರೆಬಿತ್ತು. ಇದೀಗ ಲಾಟರಿ ಏಜೆನ್ಸಿ 1 ಕೋಟಿ ರು. ಕಮಿಶನ್ ಪಡೆಯಲಿದ್ದು, ಇದಲ್ಲದೆ ಸುಮಾರು ಶೇ.35 ತೆರಿಗೆ ಕಡಿತವಾಗಲಿದೆ. ಹಾಗಾಗಿ, ಒಟ್ಟಾರೆ ಸುಮಾರು 5.5 ಕೋಟಿ ರು.ಗಳಷ್ಟು ಹಣವಷ್ಟೇ ಮುಸ್ತಫಾ ಕೈಗೆ ದೊರೆಯುವ ಸಾಧ್ಯತೆ ಇದೆ.

ಸಂಭ್ರಮ: ಮುಸ್ತಫಾಗೆ ಲಾಟರಿ ಹೊಡೆಯುತ್ತಿದ್ದಂತೆಯೇ ಅವರನ್ನು ಭಾರಿ ಸಂಖ್ಯೆಯ ಗ್ರಾಮಸ್ಥರು ಭೇಟಿ ಮಾಡಿ, ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಪಿಕಪ್ ವಾಹನ ಚಾಲಕರಾಗಿದ್ದ ಮುಸ್ತಫಾ ಕುಟುಂಬದಲ್ಲಿ ಐವರು ಸದಸ್ಯರಿದ್ದಾರೆ. ಪ್ರಸ್ತುತ ತಮ್ಮ ತಂದೆಯ ತೆಂಗಿನ ಕಾಯಿ ವ್ಯಾಪಾರದಲ್ಲೂ ನಿರತರಾಗಿದ್ದಾರೆ. ಪರಪ್ಪನಗುಡಿ ಬಸ್ ನಿಲ್ದಾಣದಲ್ಲಿ ಖಾಲಿದ್ ಎಂಬ ಸಬ್ ಏಜೆಂಟ್‌ನ ಬಳಿ ಈ ಟಿಕೆಟ್ ಅನ್ನು ಮುಸ್ತಫಾ ಕೊಂಡಿದ್ದರು. ’20 ವರ್ಷದಿಂದ ಲಾಟರಿ ಕೊಂಡುಕೊಳ್ಳುವ ಖಯಾಲಿ ಇತ್ತು. ಒಂದಿಲ್ಲೊಂದು ದಿನ ಬಂಪರ್ ಹೊಡೆಯುವ ನಿರೀಕ್ಷೆ ಇತ್ತು. ಬಂದ ಹಣದಿಂದ ನನ್ನ ತೆಂಗಿನಕಾಯಿ ವ್ಯಾಪಾರ ವಿಸ್ತರಿಸುವೆ. ಸಣ್ಣ ಮನೆ ಕಟ್ಟಿಸುವೆ’ ಎಂದರು ಮುಸ್ತಫಾ.

 

 

click me!