
ಬೆಂಗಳೂರು: ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್ ಅವರ ತಲೆದಂಡ ಬಹು ನಿರೀಕ್ಷಿತವಾಗಿತ್ತು. ಆದರೆ, ಈ ಬದಲಾವಣೆ ಎಐಸಿಸಿ ಅಧಿವೇಶನದ ನಂತರ ನಡೆಯಲಿದೆ ಎಂದೂ ಹೇಳ ಲಾಗುತ್ತಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಲ್ಲಿರುವ ಈ ಸಂದರ್ಭದಲ್ಲಿ ಹಠಾತ್ ಆಗಿ ದಿಗ್ವಿಜಯಸಿಂಗ್ ಬದಲಾಗಿರುವುದು ಕುತೂಹಲ ಮೂಡಿಸಿದೆ.
ದಿಗ್ವಿಜಯಸಿಂಗ್ ತಲೆದಂಡಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣ ಸಿದ್ದರಾಮಯ್ಯ ಅವರೊಂದಿಗೆ ಹೊಂದಿದ್ದ ವಿಶೇಷ ಆತ್ಮೀಯತೆ. ಇದರ ಬಗ್ಗೆ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆದಿಯಾಗಿ ಪ್ರಮುಖ ಕಾಂಗ್ರೆಸ್ ನಾಯಕರಿಗೆ ತೀವ್ರ ಅಸಮಾಧಾನವಿತ್ತು. ಈ ಬಗ್ಗೆ ಶಾಸಕರ ನಿಯೋಗ ವೊಂದು ಹೈಕಮಾಂಡ್ ವರಿಷ್ಠರನ್ನು ನೇರವಾಗಿ ಭೇಟಿ ಮಾಡಿ ದೂರು ಸಹ ನೀಡಿತ್ತು.
ದಿಗ್ವಿಜಯಸಿಂಗ್ ಅವರು ಎಲ್ಲ ನಾಯಕರ ಅಹವಾಲು ಆಲಿಸಿದರೂ ಅಂತಿಮವಾಗಿ ಹೈಕಮಾಂಡ್ ವರಿಷ್ಠರ ಬಳಿ ಸಿದ್ದರಾಮಯ್ಯ ಅವರ ಪರವಾಗಿಯೇ ವರದಿ ನೀಡುತ್ತಿ ದ್ದರು ಎಂಬುದು ಅವರ ವಿರುದ್ಧದ ಪ್ರಮುಖ ಆರೋಪ. ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ನೇಮಕಾತಿ ಹಾಗೂ ಸರ್ಕಾರದ ಕೆಲ ಪ್ರಮುಖ ಹುದ್ದೆಗಳ ನೇಮಕಾತಿ ವೇಳೆ ಸಿದ್ದರಾಮಯ್ಯ ಅವರು ಬಯಸಿದಂತೆಯೇ ಹೈಕಮಾಂಡ್ ತೀರ್ಮಾನಗಳನ್ನು ನೀಡಲು ಕಾರಣ ದಿಗ್ವಿಜಯಸಿಂಗ್ ಅವರೇ ಎಂಬುದು ಇತರ ನಾಯಕರ ಆರೋಪವಾಗಿತ್ತು.
ಇದನ್ನು ಹೊರತುಪಡಿಸಿದರೆ ಮತ್ತೊಂದು ಕಾರಣ ಕ್ರಿಯಾಶೀಲತೆಯ ಕೊರತೆ. ಇಡೀ ರಾಜ್ಯದಲ್ಲಿ ಪಕ್ಷದ ಸಂಘಟನೆಯ ಯಾವ ಮಟ್ಟದಲ್ಲಿದೆ ಎಂಬ ಪರಿಶೀಲನೆ ನಡೆಸುವ ಪ್ರಯತ್ನವನ್ನೇ ತಮ್ಮ ನಾಲ್ಕು ವರ್ಷದ ಅವಧಿಯಲ್ಲಿ ಸಿಂಗ್ ನಡೆಸಿರಲಿಲ್ಲ ಎಂಬ ದೂರುಗಳಿದ್ದವು. ಇತ್ತೀಚೆಗೆ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ತೆರಳಿ ಸ್ಥಳೀಯ ನಾಯಕರ ಸಭೆ ನಡೆಸಿದ್ದು ಬಿಟ್ಟರೆ, ಅವರು ಜಿಲ್ಲಾ ಪ್ರವಾಸಗಳನ್ನು ಮಾಡಿರಲೇ ಇಲ್ಲ.
ಜಿಲ್ಲಾ ನಾಯಕರು ಅವರನ್ನು ಸಂಪರ್ಕಿಸಿ ತಮ್ಮ ಅಹವಾಲು ಹೇಳುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಿತ್ತು. ಇನ್ನು ಪ್ರಮುಖ ನಾಯಕರು ಅವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ಹೇಳುತ್ತಿದ್ದರೂ, ಅದರಿಂದ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ.
ಬೆಂಗಳೂರು-ಮೈಸೂರು-ಕಬಿನಿ- ಗೋವಾ: ಕಳೆದ ಎರಡು ವರ್ಷಗಳಿಂದ ದಿಗ್ವಿಜಯಸಿಂಗ್ ಅವರ ಕರ್ನಾಟಕ ಭೇಟಿ ವಾಸ್ತವವಾಗಿ ಪ್ರವಾಸಿಗನ ಭೇಟಿ ಎಂದೇ ಕೆಲ ಕಾಂಗ್ರೆಸ್ ನಾಯಕರು ವ್ಯಂಗ್ಯವಾಡುತ್ತಿದ್ದರು. ಏಕೆಂದರೆ, ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ದಿಗ್ವಿಜಯಸಿಂಗ್ ಅವರು ಇಲ್ಲಿ ನಾಯಕರ ಭೇಟಿಯ ನಂತರ ನೇರವಾಗಿ ಮೈಸೂರಿಗೆ ತೆರಳುತ್ತಿದ್ದರು. ಅಲ್ಲಿಗೆ ಸಮೀಪದ ಕಬಿನಿ ಜಂಗಲ್ ರೆಸಾರ್ಟ್ ಅವರ ನೆಚ್ಚಿನ ತಾಣವಾಗಿತ್ತು. 3 ಬಾರಿ ರಾಜ್ಯಕ್ಕೆ ಬಂದರೆ ಅದರಲ್ಲಿ ಒಂದು ಬಾರಿ ಅವರು ಕಬಿನಿ ಜಂಗಲ್ ರೆಸಾರ್ಟ್‌ಗೆ ಭೇಟಿ ನೀಡುತ್ತಿದ್ದರು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ. ಇದಾದ ನಂತರ ಗೋವಾಗೆ ತೆರಳುತ್ತಿದ್ದು, ಅಲ್ಲಿಂದ ದೆಹಲಿಗೆ ಭೇಟಿ ನೀಡುತ್ತಿದ್ದರು.
ಬಹುತೇಕ ಇದೇ ಅವರ ರಾಜ್ಯ ಪ್ರವಾಸವಾಗಿರುತ್ತಿತ್ತು. ಪಕ್ಷ ಸಂಘಟನೆ ಹಾಗೂ ಚುನಾವಣೆ ಸಿದ್ಧತೆಗೆ ಅಷ್ಟಾಗಿ ಗಮನ ನೀಡುತ್ತಿರಲಿಲ್ಲ. ಜಿಲ್ಲಾ ನಾಯಕರನ್ನು ಭೇಟಿಯಾಗುತ್ತಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.